ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಅಮೆರಿಕದಲ್ಲಿ ನಡೆಯುತ್ತಿರುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಬೇಗ ಗುಣಮುಖರಾಗಲಿ ಎಂದು ರಾಜ್ಯಾದ್ಯಂತ ಅಭಿಮಾನಿಗಳು ಪ್ರಾರ್ಥಿಸಿ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಶಿವಣ್ಣ ಕಾರು ಚಾಲಕನಿಂದ ಪೂಜೆ: 32 ವರ್ಷಗಳಿಂದ ಶಿವಣ್ಣ ಕಾರು ಡ್ರೈವರ್ ಆಗಿರುವ ಗೋವಿಂದ್ ಅವರು ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಶಿವಣ್ಣ ಮನೆಯಲ್ಲಿ ಪೂಜೆ ಮಾಡುವ ಗಂಗಾಧರ ಸ್ವಾಮೀಜಿಗಳು ಹೋಮ ನೆರವೇರಿಸಿದರು.
ಗಣಪತಿ ಪೂಜೆ, ಹೋಮ, ಗುರು ಪ್ರಾರ್ಥನ ಸಂಕಲ್ಪ, ನವಗ್ರಹ ಪೂಜೆ, ಮೃತ್ಯುಂಜಯ ಪೂಜೆ & ಹೋಮ, ಸುದರ್ಶನ ಪೂಜೆ & ಹೋಮವನ್ನು ಗೋವಿಂದ್ ದಂಪತಿ ಮಾಡಿಸಿದರು.

ಸಿಗಂದೂರಿನಲ್ಲಿ ಮಹಾ ಮೃತ್ಯುಂಜಯ ಹೋಮ: ಶಿವರಾಜ್ ಕುಮಾರ್ ಆರೋಗ್ಯಕ್ಕಾಗಿ ಸಾಗರ ತಾಲೂಕಿನ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಯಿತು. ದೇವಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ರವಿ ಕುಮಾರ್ ಅವರ ಸಮ್ಮುಖದಲ್ಲಿ ಕೆಪಿಸಿಸಿ ಓಬಿಸಿ ಸಂಯೋಜಕರಾದ ಜಿ.ಡಿ.ಮಂಜುನಾಥ್, ರಾಜಪ್ಪ, ಎಂ.ಬಿ.ರವಿಕುಮಾರ್, ಪುರದಾಳ್ ರಘು, ಚೇತನ್, ಸಂದೇಶ್ ಹಾಜರಿದ್ದರು.
ಶಿವಮೊಗ್ಗದ ಕೋಟೆ ಮಾರಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ: ಶಿವಮೊಗ್ಗ ಜಿಲ್ಲೆಯ ಅಳಿಯ ನಟ ಶಿವರಾಜ್ ಕುಮಾರ್ ಅವರು ಆರೋಗ್ಯವಾಗಿರಬೇಕೆಂದು ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್ ಅವರ ಅಭಿಮಾನಿಗಳು ನಗರದ ಕೋಟೆ ಮಾರಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಬಸವರಾಜ್, ಪಾಲಾಕ್ಷ ಸೇರಿದಂತೆ ಇತರರಿದ್ದರು.

ಮಲೆಮಹದೇಶ್ವರ ಬೆಟ್ಟದಲ್ಲಿ ಉರುಳು ಸೇವೆ, ಕೇಶ ಮುಂಡನೆ: ಕೆ.ಜಿ.ಕೊಪ್ಪಲಿನ ಶಿವು ಮತ್ತು ಮೈಸೂರಿನ ಅಭಿಮಾನಿಗಳು ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವಾಷ್ಟೋತ್ತರ, ಬಿಲ್ವಾರ್ಚನೆ ಪೂಜೆ ಮಾಡಿಸಿದ್ದಾರೆ. ಅಲ್ಲದೇ ದೇವಸ್ಥಾನದ ಸುತ್ತಲೂ ಮೂರು ಬಾರಿ ಉರುಳು ಸೇವೆ ಮಾಡಿ, ಕೇಶ ಮುಂಡನೆ ಮಾಡಿಸುವ ಮೂಲಕ ಪ್ರಾರ್ಥಿಸಿದರು.
ಅಷ್ಟೇ ಅಲ್ಲ, ಶಿವಸೈನ್ಯ ಟೀಮ್ ವತಿಯಿಂದ ಚಾಮರಾಜನಗರ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿಯೂ ವಿಶೇಷ ಪೂಜೆ ಸಲ್ಲಿಸಲಾಯಿತು. ಶಿವಸೈನ್ಯ ಟೀಮ್ ಬೆಳಗ್ಗೆ ಶಿವರಾಜ್ ಕುಮಾರ್ ಹೆಸರಿನಲ್ಲಿ ಆರ್ಚನೆ ಮಾಡಿಸಿ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿತು.
ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ: ದೊಡ್ಡಬಳ್ಳಾಪುರದಲ್ಲಿ ಘಾಟಿ ಸುಬ್ರಮಣ್ಯ ದೇವಸ್ಥಾನದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ, ನೆಚ್ಚಿನ ನಟ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್ ಅಭಿಮಾನಿ ಚೌಡರಾಜ್, ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೂ ರಾಜ್ ಕುಮಾರ್ ಕುಟುಂಬಕ್ಕೂ ಅವಿನಾಭವ ಸಂಬಂಧವಿದೆ. ದೊರೆ, ನಂಜುಂಡಿ, ನಮ್ಮೂರು ಹುಡ್ಗ ಸೇರಿದಂತೆ ಹಲವು ಚಿತ್ರಗಳ ಚಿತ್ರೀಕರಣ ಇದೇ ನೆಲದಲ್ಲಿ ಆಗಿತ್ತು. ಅಭಿಮಾನಿಗಳ ಮೆಚ್ಚಿನ ನಟ ಶಿವರಾಜ್ ಕುಮಾರ್ ಆದಷ್ಟು ಬೇಗ ಗುಣಮುಖರಾಗಿ ಭಾರತಕ್ಕೆ ಹಿಂದಿರುಗಲಿ ಎಂದು ಸಂಕಲ್ಪಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದೇವೆ ಎಂದರು.
ಸ್ಥಳೀಯ ಮುಖಂಡ ಹಳ್ಳಿ ರೈತ ಮಾತನಾಡಿ, ರಾಜ್ಯದ ಹೆಮ್ಮೆಯ ಕೆಎಂಎಫ್ ಸಂಸ್ಥೆಗೆ ರಾಯಭಾರಿಗಳಾಗಿ ಸದಾ ರೈತರ ಬೆನ್ನುಬಾಗಿ ನಿಂತಿರುವ ರಾಜ್ ಕುಮಾರ್ ಕುಟುಂಬಕ್ಕೆ ರಾಜ್ಯದ ಎಲ್ಲಾ ಹಳ್ಳಿ ರೈತರ ಶುಭ ಹಾರೈಕೆ ಸದಾ ಇರುತ್ತದೆ. ಘಾಟಿ ಸುಬ್ರಮಣ್ಯ ದನಗಳ ಜಾತ್ರೆ ಅಂಗವಾಗಿ ಉಚಿತ ಮೇವು ವಿತರಣೆಗೆ ಬೆಂಬಲವಾಗಿ ಒಂದು ಲೋಡ್ ಮೇವು ನೀಡಿರುವ ರಾಜ್ ಕುಟುಂಬದ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಹಾಗೂ ಶಿವರಾಜ್ ಕುಮಾರ್ ಬೇಗ ಚೇತರಿಸಿಕೊಂಡು ಭಾರತಕ್ಕೆ ವಾಪಸ್ ಬರಲಿ ಎಂದು ಆಶಿಸಿದರು.
101 ಈಡುಗಾಯಿ ಒಡೆದ ಫ್ಯಾನ್ಸ್: ರಾಮನಗರ ತಾಲೂಕಿನ ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಾಲಯದಲ್ಲಿ ಶಿವಣ್ಣನ ಹೆಸರಲ್ಲಿ ಅರ್ಚನೆ ಮಾಡಿಸಿದರು. ಜೊತೆಗೆ 101 ಈಡುಗಾಯಿ ಒಡೆದು ಬಳಿಕ ಶಿವರಾಜ್ ಕುಮಾರ್ ಫೋಟೋ ಹಿಡಿದು ಶುಭಹಾರೈಸಿದ್ದಾರೆ.
ದಾವಣಗೆರೆ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ: ನಗರದ ದೀಕ್ಷಿತ್ ರಸ್ತೆಯಲ್ಲಿ ಇರುವ ಮಹಾಗಣಪತಿ ದೇವಸ್ಥಾನದಲ್ಲಿ ಅಭಿಮಾನಿಗಳು ಡಾ. ಶಿವರಾಜ್ ಕುಮಾರ್ ಅವರ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಸಿಎಂ ಶುಭ ಹಾರೈಕೆ; ಅನಾರೋಗ್ಯದ ನಿಮಿತ್ತ ಇಂದು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಅವರಿಗೆ ಕರೆಮಾಡಿ ಮಾತನಾಡಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿರುವುದಾಗಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
''ನನಗೆ ತಿಳಿದಂತೆ ಶಿವರಾಜ್ ಕುಮಾರ್ ಅವರ ಆತ್ಮವಿಶ್ವಾಸ, ಧೈರ್ಯ ಮತ್ತು ಸಹೃದಯತೆ ಅವರನ್ನು ಈ ಹೋರಾಟದಲ್ಲಿ ಗೆಲ್ಲಿಸಿಕೊಂಡು ಬರಲಿದೆ ಎಂಬ ವಿಶ್ವಾಸವಿದೆ. ಬದುಕಿನ ದಾರಿಯಲ್ಲಿ ಎದುರಾಗಿರುವ ಈ ಸಣ್ಣ ಸಂಕಷ್ಟವನ್ನು ನಿವಾರಿಸಿಕೊಂಡು ಆರೋಗ್ಯವಂತರಾಗಿ ಬರಲಿರುವ ಶಿವರಾಜಕುಮಾರ್ ಅವರ ಆಗಮನವನ್ನು ಎದುರು ನೋಡುತ್ತಿರುವ ಅವರ ಹಿತೈಷಿಗಳಲ್ಲಿ ನಾನೂ ಒಬ್ಬ. ನಾಡಿನ ಹಿರಿಯರ ಆಶೀರ್ವಾದ ಮತ್ತು ಕಿರಿಯರ ಶುಭಹಾರೈಕೆ ಶಿವರಾಜಕುಮಾರ್ ಅವರ ಜೊತೆಗಿದ್ದು ಅವರನ್ನು ಕಾಪಾಡಲಿದೆ'' ಎಂದು ಸಿಎಂ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ನಟ ಶಿವಣ್ಣ ವಿಶ್ವದ ಬೆಸ್ಟ್ ಡಾಕ್ಟರ್ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅಭಿಮಾನಿಗಳು ಭಯಪಡಬೇಕಿಲ್ಲ : ಮಧು ಬಂಗಾರಪ್ಪ
ಇದನ್ನೂ ಓದಿ: 'ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ, ಜ.26ರಂದು ಸಿಗೋಣ': ಶಿವರಾಜ್ಕುಮಾರ್