ಕರ್ನಾಟಕ

karnataka

ETV Bharat / state

ಮಾದಕ ದ್ರವ್ಯ ಮಾರಾಟ: ಇಬ್ಬರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್ - High Court

ಮಾದಕ ದ್ರವ್ಯ ಮಾರಾಟವು ಸಮಾಜದ ವಿರುದ್ಧದ ಅಪರಾಧ ಎಂದಿರುವ ಹೈಕೋರ್ಟ್‌, ಇಬ್ಬರು ಆರೋಪಿಗಳಿಗೆ ಜಾಮೀನು ನಿರಾಕರಿಸಿತು.

high-court-denies-bail-to-two-accused-in-drug-sale-case
ಮಾದಕ ದ್ರವ್ಯ ಮಾರಾಟ: ಇಬ್ಬರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

By ETV Bharat Karnataka Team

Published : Mar 8, 2024, 9:33 AM IST

ಬೆಂಗಳೂರು:ಮಾದಕ ದ್ರವ್ಯ ಸಂಗ್ರಹಣೆ ಮತ್ತು ಮಾರಾಟವು ರಾಜ್ಯದ ಆರ್ಥಿಕತೆ ಹಾಗೂ ಸಮಾಜದ ವಿರುದ್ಧದ ಅಪರಾಧವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್‌, ಎಂಡಿಎಂ ಮಾದಕ ದ್ರವ್ಯ ಹೊಂದಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಇಬ್ಬರಿಗೆ ಜಾಮೀನು ನಿರಾಕರಿಸಿದೆ.

ಜಾಮೀನು ಕೋರಿ ರಾಜಸ್ಥಾನದ ಸುನೀಲ್‌ ಕುಮಾರ್‌ (28) ಮತ್ತು ಬೆಂಗಳೂರಿನ ಕೊಡುಗೆಹಳ್ಳಿ ನಿವಾಸಿ ಅಶೋಕ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರ ಪೀಠ ಈ ಆದೇಶ ನೀಡಿದೆ.

ಪ್ರಕರಣದಲ್ಲಿ ದಾಖಲೆ ಪರರಿಶೀಲಿಸಿದಾಗ ವಾಣಿಜ್ಯ ಪ್ರಮಾಣದಲ್ಲಿ ಮಾದಕ ದ್ರವ್ಯವಾದ ಎಂಡಿಎಂ ಅನ್ನು ಆರೋಪಿಗಳಿಂದ ತನಿಖಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಮಾದಕ ದ್ರವ್ಯ ಮಾರಾಟವು ಸಮಾಜದ ಮತ್ತು ರಾಜ್ಯ ಆರ್ಥಿಕತೆ ವಿರುದ್ಧದ ಅಪರಾಧವಾಗಿದೆ. ಮಾದಕ ದ್ರವ್ಯ ಮಾರಾಟಕ್ಕೆ ವಿಶೇಷವಾಗಿ ಶಾಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಯುವ ಜನಾಂಗವನ್ನು ಗುರಿಯಾಗಿಸಿಕೊಳ್ಳಲಾಗಿದೆ‌ ಎಂದು ಪೀಠ ತಿಳಿಸಿದೆ.

ಅಲ್ಲದೆ, ಈ ಘಟನೆಯನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲವಾಗಿದ್ದು, ಕಬ್ಬಿಣದ ಕೈಗಳಿಂದ ವ್ಯವಹರಿಸಬೇಕಿದೆ. ಹಾಗಾಗಿ, ಜಾಮೀನು ಮಂಜೂರು ಮಾಡಲು ಅರ್ಹ ಪ್ರಕರಣ ಇದಾಗಿಲ್ಲ. ಪ್ರಕರಣದ ಸ್ವರೂಪ ಹಾಗೂ ಗಂಭೀರತೆ ಆಧರಿಸಿ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ:ದಾವಣಗೆರೆ ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ-48ರ ಸರ್ವಿಸ್‌ ರಸ್ತೆಯ ಪಕ್ಕದಲ್ಲಿರುವ ಮಯೂರ್‌ ಗ್ಲೋಬಲ್‌ ಶಾಲೆ ಸಮೀಪ ಕೆಲ ವ್ಯಕ್ತಿಗಳು ಅಕ್ರಮವಾಗಿ ಎಂಡಿಎಂ ಮಾದಕ ದ್ರವ್ಯ ಸಂಗ್ರಹಿಸಿಕೊಂಡು ಸೇವನೆ ಮಾಡುತ್ತಿದ್ದ ಬಗ್ಗೆ 2023ರ ನವೆಂಬರ್​ 5ರಂದು ಸಂಜೆ ಸಿಇಎನ್‌ ಠಾಣೆಯ ಇನ್ಸ್​ಪೆಕ್ಟರ್‌ಗೆ ಮಾಹಿತಿ ಲಭ್ಯವಾಗಿತ್ತು. ಪೊಲೀಸ್‌ ಅಧೀಕ್ಷಕರ ಅನುಮತಿ ಪಡೆದು ಪೊಲೀಸರು ಸಂಜೆ 4.40ಕ್ಕೆ ದಾಳಿ ನಡೆಸಿದ್ದರು. ಕಾರೊಂದರಲ್ಲಿದ್ದ ಐವರ ನಡೆ ಅನುಮಾನಾಸ್ಪದವಾಗಿತ್ತು. ಬಳಿಕ ಅವರನ್ನು ಬಂಧಿಸಿದ್ದ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಅವರ ಪೈಕಿ ಓರ್ವ ಆರೋಪಿಯಾದ ರಾಮ್‌ ರತನ್‌ ನೀಡಿದ್ದ ಮಾಹಿತಿ ಮೇರೆಗೆ ಬೆಂಗಳೂರಿನ ಬಸವೇಶ್ವರ ಬಡಾವಣೆಯಲ್ಲಿನ ಏಳನೇ ಆರೋಪಿಯಾದ ಸುನೀಲ್‌ ಕುಮಾರ್‌ ಮನೆಯ ಮೇಲೆ 2023ರ ಡಿಸೆಂಬರ್​​ 3ರಂದು ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಎಂಟನೇ ಆರೋಪಿ ಅಶೋಕ್‌ ಕುಮಾರ್‌ ಕೂಡ ಸ್ಥಳದಲ್ಲಿದ್ದ. ಆತನಿಂದ 27 ಗ್ರಾಂ ಎಂಡಿಎಂ ಮಾದಕ ದ್ರವ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು. ವಿಚಾರಣಾ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದ್ದರಿಂದ ಆರೋಪಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು.

ಇದನ್ನೂ ಓದಿ:5, 8, 9 ಮತ್ತು 11ನೇ ತರಗತಿ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಅನುಮತಿ

ABOUT THE AUTHOR

...view details