ಬೆಂಗಳೂರು:ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರನ್ನು ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರು ಹಾಗೂ ಸದಸ್ಯರನ್ನಾಗಿ ನೇಮಿಸಿ ಸಂಪುಟ ದರ್ಜೆ ಸ್ಥಾನಮಾನ ಹಾಗೂ ಸೌಲಭ್ಯಗಳನ್ನು ಒದಗಿಸಿರುವ ಕ್ರಮ ಸಂವಿಧಾನಬಾಹಿರ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಇಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಬೆಂಗಳೂರು ನಿವಾಸಿ ಸೂರಿ ಪಾಯಲ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ವಿಭಾಗೀಯ ಪೀಠ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ಪ್ರಕರಣಲ್ಲಿ ಪ್ರತಿವಾದಿಗಳಾಗಿರುವ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುವ ಶಾಸಕರಿಗೆ ಹ್ಯಾಂಡ್ ಸಮನ್ಸ್ ನೀಡಿದೆ.
ಅರ್ಜಿಯಲ್ಲಿ ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಪ್ರಾಮುಖ್ಯತೆಗೆ ಸಂಬಂಧಿಸಿದ ಅಂಶಗಳು ಎದುರಾಗಿದ್ದು, ಸಂವಿಧಾದ ಪರಿಚ್ಛೇದ 191ರ ಉಲ್ಲಂಘನೆ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅಲ್ಲದೆ, ಪ್ರತಿವಾದಿಗಳಾಗಿರುವ ಶಾಸಕರು ಲಾಭದಾಯಕ ಹುದ್ದೆ ಹೊಂದಿದ್ದು, ಅಧಿಕಾರದಲ್ಲಿ ಮುಂದುವರೆಯುವುದು ಸಂವಿಧಾನದಕ್ಕೆ ವಿರುದ್ಧ. ಈ ಎಲ್ಲ ಅಂಶಗಳಿಗೂ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರದಿಂದ ಸಮಗ್ರ ಪ್ರತಿಕ್ರಿಯೆ ಅತ್ಯಗತ್ಯವಿದ್ದು, ನೋಟಿಸ್ ಜಾರಿ ಮಾಡಲಾಗುತ್ತಿದೆ ಎಂದು ತಿಳಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಾರ್ಚ್ 27ಕ್ಕೆ ಮುಂದೂಡಿತು. ಅಲ್ಲದೆ, ಮಾರ್ಚ್ 18ರ ಅಂತ್ಯದೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬೇಕು ಎಂದು ತಿಳಿಸಿತು.
ಅರ್ಜಿದಾರರು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಅವಕಾಶ ಸಿಕ್ಕಿಲ್ಲ ಎಂಬ ಕಾರಣದಿಂದ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು, ಅರ್ಜಿಯು ವಿಚಾರಣೆಗೆ ಅರ್ಜಿ ಅರ್ಹವಿಲ್ಲ ಎಂಬ ಅಡ್ವೋಕೇಟ್ ಜನರಲ್ ಅವರ ವಾದವನ್ನು ತಳ್ಳಿ ಹಾಕಿದ ನ್ಯಾಯಪೀಠ, ಅರ್ಜಿಯಲ್ಲಿನ ಅಂಶಗಳು ಸಂವಿಧಾನ ಮತ್ತು ಪ್ರಜಾಸತ್ತಾತ್ಮ ಅಂಶಗಳಿದ್ದು, ಅವುಗಳ ಪರಿಹಾರಕ್ಕಾಗಿ ವಿಚಾರಣೆ ಅಗತ್ಯವಿದೆ ಎಂದು ಹೇಳಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ''ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುವ ಸಚಿವರಿಗೆ ಇರುವ ಸೌಲಭ್ಯಗಳನ್ನು ನಿಗಮ, ಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರಿಗೆ ವಿತರಣೆ ಮಾಡಿದಂತಾಗಿದೆ. ಸಂವಿಧಾನ ಪರಿಚ್ಛೇದ 164(1)(ಎ)ರ ಪ್ರಕಾರ ಮಂತ್ರಿಮಂಡಲದಲ್ಲಿ ಮುಖ್ಯಮಂತ್ರಿ ಸೇರಿದಂತೆ ಒಟ್ಟು ಸದಸ್ಯರು ಸೇರಿದಂತೆ ಶೇ.15ರಷ್ಟು ಮಾತ್ರ ಇರಬೇಕು ಎಂದು ಮಿತಿ ಹೇರಲಾಗಿದೆ. ಆದರೆ, ಅಧಿಸೂಚನೆ ಹೊರಡಿಸುವ ಮೂಲಕ ನಿಗಮ ಮಂಡಳಿಗಳ ಅಧ್ಯಕ್ಷ ಮತ್ತು ಸದಸ್ಯರಿಗೂ ಸಂಪುಟ ಸ್ಥಾನಮಾನ ನೀಡಿದ್ದು, ಮಿತಿ ಮೀರಿದೆ" ಎಂದು ಪೀಠಕ್ಕೆ ವಿವರಿಸಿದರು.