ಕರ್ನಾಟಕ

karnataka

ETV Bharat / state

13 ವರ್ಷದ ಅತ್ಯಾಚಾರ ಸಂತ್ರಸ್ತೆಯ 28 ವಾರಗಳ ಭ್ರೂಣದ ಗರ್ಭಪಾತಕ್ಕೆ ಅನುಮತಿಸಿದ ಹೈಕೋರ್ಟ್

13 ವರ್ಷದ ಅತ್ಯಾಚಾರ ಸಂತ್ರಸ್ತೆಗೆ 28 ವಾರಗಳ ಭ್ರೂಣವನ್ನು ತೆಗೆಸಿಕೊಳ್ಳಲು ಹೈಕೋರ್ಟ್​ ಅನುಮತಿ ನೀಡಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : Nov 6, 2024, 7:00 PM IST

ಬೆಂಗಳೂರು: ಅತ್ಯಾಚಾರಕ್ಕೊಳಗಾಗಿ 28 ವಾರಗಳ ಗರ್ಭಧರಿಸಿರುವ 13 ವರ್ಷದ ಬಾಲಕಿಯ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಜೊತೆಗೆ ಪ್ರಕರಣದ ತನಿಖೆ ಸಂಬಂಧ ಡಿಎನ್‌ಎ ಪರೀಕ್ಷೆಗಾಗಿ ಭ್ರೂಣ ಸಂರಕ್ಷಣೆ ಮಾಡಲು ನಗರದ ವಾಣಿವಿಲಾಸ ಆಸ್ಪತ್ರೆಗೆ ನಿರ್ದೇಶನ ನೀಡಿದೆ.

13 ವರ್ಷದ ಸಂತ್ರಸ್ತೆಯ ಗರ್ಭಪಾತಕ್ಕೆ ವಾಣಿವಿಲಾಸ ಆಸ್ಪತ್ರೆಗೆ ನಿರ್ದೇಶನ ನೀಡುವಂತೆ ಕೋರಿ ಸಂತ್ರಸ್ತೆಯ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.

ಅಲ್ಲದೆ, ಸಂತ್ರಸ್ತೆಯ ಜೀವಕ್ಕೆ ಹಾನಿಯಾಗದಂತೆ ಗರ್ಭಪಾತ ಮಾಡುವ ಸಂಬಂಧ ವೈದ್ಯರಿಂದ ಅಗತ್ಯ ಪರೀಕ್ಷೆಗಳ ಬಳಿಕ ನಿರ್ಧರಿಸಿ ಕ್ರಮಕ್ಕೆ ಮುಂದಾಗಬೇಕು. ಈ ಪ್ರಕ್ರಿಯೆಯಲ್ಲಿ ವೈದ್ಯಕೀಯ ಗರ್ಭಪಾತ ನಿಯಮಗಳು 1971ರ ಪ್ರಕಾರ ವೈದ್ಯಕೀಯ ಗರ್ಭಪಾತ ಚಿಕಿತ್ಸೆಗೆ ಹಣವನ್ನು ಸಂತ್ರಸ್ತೆಯಿಂದ ಪಡೆದುಕೊಳ್ಳದೇ ಸರ್ಕಾರಿ ವೆಚ್ಚದಲ್ಲಿ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಕೈಗೊಳ್ಳಬೇಕು ಎಂದು ಪೀಠ ಹೇಳಿದೆ.

ಗರ್ಭಪಾದ ಭ್ರೂಣವನ್ನು ಡಿಎನ್‌ಎ ಪರೀಕ್ಷೆಗೆ ಅನುಕೂಲವಾಗುವಂತೆ ಸಂರಕ್ಷಿಸಿ ಅದರ ಮಾದರಿಯನ್ನು ಡಿಎನ್‌ಎ ಪರೀಕ್ಷೆಗಾಗಿ ಬೆಂಗಳೂರಿನ ಕೇಂದ್ರ ವಿಧಿವಿಜ್ಞಾನ ಪರೀಕ್ಷಾ ಪ್ರಯೋಗಾಲಯಕ್ಕೆ ರವಾನಿಸಬೇಕು ಎಂದು ವಾಣಿ ವಿಲಾಸ ಆಸ್ಪತ್ರೆಗೆ ನಿರ್ದೇಶನ ನೀಡಿದೆ.

ಗರ್ಭಪಾತ ಮತ್ತು ಆಕೆಯ ಆರೋಗ್ಯ ಪರೀಕ್ಷೆಗಾಗಿ ಸಂತ್ರಸ್ತೆ ಹಾಗೂ ಆಕೆಯ ಕುಟುಂಬಸ್ಥರಿಗೆ ವಾಣಿ ವಿಲಾಸ ಆಸ್ಪತ್ರೆಗೆ ಹೋಗಿ ಬರುವುದಕ್ಕೆ ಉಚಿತವಾಗಿ ವಾಹನ ವ್ಯವಸ್ಥೆ ಮಾಡಬೇಕು. ವೈದ್ಯರ ಸಲಹೆಯ ಮೇರೆಗೆ ಹೆಚ್ಚುವರಿ ಚಿಕಿತ್ಸೆ ಅಗತ್ಯವಿದ್ದಲ್ಲಿ ವಾಹನ ವ್ಯವಸ್ಥೆ ಕಲ್ಪಿಸಬೇಕು ಎಂದು ಚಂದ್ರಾಲೇಔಟ್ ಬಡಾವಣೆ ಪೊಲೀಸರಿಗೆ ಸೂಚನೆ ನೀಡಿದೆ.

ಸಂತ್ರಸ್ತೆಯ ಚಿಕಿತ್ಸೆ ಮತ್ತು ಮುಂದಿನ ಆರೋಗ್ಯ ಸುಧಾರಣೆಗಾಗಿ ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ 3 ಲಕ್ಷ ರೂ.ಗಳ ಹಣವನ್ನು ಮಂಜೂರು ಮಾಡಬೇಕು ಎಂದು ನಿರ್ದೇಶಿಸಿದೆ.

ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಚಂದ್ರಾಲೇಔಟ್ ಬಡಾವಣೆ ಪೊಲೀಸರು, ವಾಣಿವಿಲಾಸ ಆಸ್ಪತ್ರೆ ವೈದ್ಯಾಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಆದೇಶದ ಅನುಪಾಲನಾ ವರದಿಯನ್ನು ಮುಂದಿನ ಎರಡು ವಾರಗಳಲ್ಲಿ ಸಲ್ಲಿಸಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣ ಹಿನ್ನೆಲೆ:ಸುಮಾರು 13 ವರ್ಷದ ಅಪ್ರಾಪ್ತೆ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದರು. ಈ ವಿಚಾರ ಗೊತ್ತಾದ ತಕ್ಷಣ ಆಕೆಯ ತಾಯಿ ಆರೋಪಿಗಳ ವಿರುದ್ಧ ಪೋಕ್ಸೋ ಕಾಯಿದೆಯಡಿ ದೂರು ದಾಖಲಿಸಿದ್ದರು. ಜತೆಗೆ, ಸಂತ್ರಸ್ತೆಗೆ ಗರ್ಭಪಾತ ಮಾಡಲು ವಾಣಿವಿಲಾಸ ಆಸ್ಪತ್ರೆಗೆ ನಿರ್ದೇಶನ ನೀಡಬೇಕು ಮತ್ತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕಾಗಿ ಭ್ರೂಣವನ್ನು ಡಿಎನ್‌ಎ ಪರೀಕ್ಷೆಗಾಗಿ ಸಂಗ್ರಹ ಮಾಡಲು ಸೂಚನೆ ನೀಡಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಭೂಸ್ವಾಧೀನದ ವೇಳೆ ರೈತರು ಪಡೆದ ಪರಿಹಾರಕ್ಕೆ ತೆರಿಗೆ ವಿನಾಯಿತಿ: ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಸೂಚಿಸಿದ ಹೈಕೋರ್ಟ್

ABOUT THE AUTHOR

...view details