ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಕೋರಿ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜನವರಿ 15ಕ್ಕೆ ಮುಂದೂಡಿದೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಅರ್ಜಿ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಹಾಜರಾಗಿದ್ದ ಸಿದ್ದರಾಮಯ್ಯ ಬಾಮೈದುನ ಮಲ್ಲಿಕಾರ್ಜುನ ಸ್ವಾಮಿ ಪರ ವಕೀಲರು, "ಎರಡು ದಿನಗಳ ಹಿಂದೆಯಷ್ಟೇ ನೋಟಿಸ್ ಜಾರಿಯಾಗಿದೆ. ಅದಕ್ಕೆ ಆಕ್ಷೇಪಣೆ ಸಿದ್ದಪಡಿಸಬೇಕಾಗಿದೆ. ಆದ್ದರಿಂದ ಅರ್ಜಿಯ ವಿಚಾರಣೆ ಮುಂದೂಡಬೇಕು" ಎಂದು ಮನವಿ ಮಾಡಿದರು.
ಸಿದ್ದರಾಮಯ್ಯ ಪತ್ನಿ ಪರ ಹಾಜರಿದ್ದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಪೀಠ, ಜಾರಿ ನಿರ್ದೇಶನಾಲಯವನ್ನು(ಇ.ಡಿ) ಪ್ರತಿವಾದಿಯನ್ನಾಗಿಸಲು ಸೂಚನೆ ನೀಡಿತು.
ಇದೇ ವೇಳೆ, ಹಗರಣ ಸಂಬಂಧ ಲೋಕಾಯುಕ್ತ ಪೊಲೀಸರು ನಡೆಸುತ್ತಿರುವ ತನಿಖಾ ವರದಿ ಡಿಸೆಂಬರ್ 24ಕ್ಕೆ ಸಲ್ಲಿಸಬೇಕು. ಅಲ್ಲದೆ, ಸಿಬಿಐಗೆ ಕೋರಿರುವ ಅರ್ಜಿಯ ವಿಚಾರಣೆ ಪೂರ್ಣಗೊಳ್ಳುವವರೆಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ತನಿಖೆಗೆ ತಡೆ ನೀಡುತ್ತಿರುವುದಾಗಿ ಪೀಠ ತಿಳಿಸಿತು.
ಕೋರ್ಟ್ ಆದೇಶಕ್ಕೆ ಸಿದ್ದರಾಮಯ್ಯ ಪತ್ನಿ ಪರ ವಕೀಲರಿಂದ ಆಕ್ಷೇಪ:ವಿಚಾರಣೆ ವೇಳೆ ಸಿದ್ದರಾಮಯ್ಯ ಪರ ಹಾಜರಿದ್ದ ಪ್ರೊ.ರವಿವರ್ಮ ಕುಮಾರ್, ಪ್ರಕರಣ ಸಂಬಂಧ ನಮ್ಮ ಕಕ್ಷಿದಾರರಿಗೆ ಈವರೆಗೂ ನೋಟಿಸ್ ಜಾರಿಯಾಗಿಲ್ಲ. ಅಲ್ಲದೆ, ಈ ನಡುವೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ತನಿಖೆಗೆ ತಡೆ ನೀಡಲಾಗಿದೆ. ಇದು ಅಗತ್ಯವೇನು ಎಂದು ಪ್ರಶ್ನಿಸಿದರು.
ಅಲ್ಲದೆ, ಸಿಬಿಐ ತನಿಖೆಗೆ ಕೋರಿರುವ ಅರ್ಜಿಯಲ್ಲಿ ಲೋಕಾಯುಕ್ತ ನ್ಯಾಯಾಲಯದ ತನಿಖೆಗೆ ತಡೆ ನೀಡುವಂತೆ ಮನವಿಯೂ ಇಲ್ಲ. ಆದರೂ, ನ್ಯಾಯಾಲಯ ಸ್ವಯಂಪ್ರೇರಿತವಾಗಿ ಆದೇಶ ನೀಡುತ್ತಿದೆ. ಈ ನ್ಯಾಯಾಲಯದಲ್ಲಿ ಏನು ನಡೆಯುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಅಲ್ಲದೆ, ಲೋಕಾಯುಕ್ತ ತನಿಖೆಯಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಬಾರದು ಎಂದು ಪೀಠಕ್ಕೆ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿ ಸಲ್ಲಿಕೆಯಾಗಿ 35 ದಿನಗಳಾಗಿವೆ. ಆದರೂ ಪ್ರತಿವಾದಿಗಳಿಗೆ ನೋಟಿಸ್ ಜಾರಿಯಾಗಿರಲಿಲ್ಲ. ಹೀಗಾಗಿ ಹ್ಯಾಂಡ್ ಸಮನ್ಸ್ ಜಾರಿ ಮಾಡಿ ಆದೇಶಿಸಿದೆ. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಆದೇಶ ಪ್ರಶ್ನಿಸಿ ಪ್ರತಿವಾದಿಗಳು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಭಾಗೀಯ ಪೀಠ ಯಾವುದೇ ಮಧ್ಯಂತರ ತಡೆ ನೀಡಿಲ್ಲ.
ಅಲ್ಲದೆ, ಪ್ರಕರಣದ ತನಿಖೆಯನ್ನು ಸಿಬಿಐಗೆ ಕೋರಿ ಅರ್ಜಿ ಸಲ್ಲಿಕೆಯಾಗಿದೆ. ಈ ಸಂದರ್ಭದಲ್ಲಿ ಇದೇ ಪ್ರಕರಣ ಸಂಬಂಧ ಲೋಕಾಯುಕ್ತ ಅಂತಿಮ ವರದಿ ಸಲ್ಲಿಸಿದಲ್ಲಿ ಅರ್ಜಿ ಸಂಬಂಧ ಅಂತಿಮ ಆದೇಶ ಹೊರಡಿಸಲು ಅಡ್ಡಿಯಾಗುವುದಿಲ್ಲ. ಆದರೆ, ಅರ್ಜಿ ವಿಚಾರಣೆ ತೊಂದರೆಯಾಗಬಹುದು ಎಂಬ ಕಾರಣದಿಂದ ಲೋಕಾಯುಕ್ತ ವಿಚಾರಣೆಗೆ ತಡೆ ನೀಡಲಾಗಿದೆ ಎಂದು ಪೀಠ ಹೇಳಿತು.
ಅಲ್ಲದೆ, ಲೋಕಾಯುಕ್ತ ಪೊಲೀಸರ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಡಿಸೆಂಬರ್ 24ಕ್ಕೆ ಸಲ್ಲಿಸಬೇಕಿದ್ದು ಅವಧಿಯನ್ನು 2025ರ ಜನವರಿ 28ಕ್ಕೆ ವಿಸ್ತರಿಸುತ್ತಿರುವುದಾಗಿ ಪೀಠ ಹೇಳಿತು. ಅಲ್ಲದೆ, ಲೋಕಾಯುಕ್ತ ನ್ಯಾಯಾಲಯದ ವಿಚಾರಣೆ ಮುಂದುವರೆಯಬಹುದು ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಜನವರಿ 15ಕ್ಕೆ ಮುಂದೂಡಿತು.
ಇದನ್ನೂ ಓದಿ:ಮುಡಾ ಪ್ರಕರಣದಿಂದ ಹಿಂದೆ ಸರಿಯುವಂತೆ ಆಮಿಷ ಆರೋಪ: ಲೋಕಾಗೆ ಸ್ನೇಹಮಯಿ ಕೃಷ್ಣ ದೂರು, ಹೋರಾಟ ನಿಲ್ಲಸಬೇಡಿ ಎಂದ ವಿಶ್ವನಾಥ್ - SNEHAMAYI KRISHNA