ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ್ದರಿಂದ, ವಿಚಾರಣೆಯನ್ನು ಇಂದು ಹೈಕೋರ್ಟ್ ಮುಂದೂಡಿತು.
ಈ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಯಡಿಯೂರಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಮತ್ತು ಪ್ರಕರಣ ರದ್ದು ಕೋರಿ ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ವಿಚಾರಣೆ ನಡೆಸಿದರು.
ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸರ್ಕಾರಿ ವಿಶೇಷ ಅಭಿಯೋಜಕ ಬಿ.ಎನ್.ಜಗದೀಶ್, ತನಿಖಾಧಿಕಾರಿಗಳು ಈಗಾಗಲೇ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಬೇಕಾಗಿದ್ದು ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಈ ಅಂಶವನ್ನು ನ್ಯಾಯಪೀಠ ಪರಿಗಣಿಸಿತು.
ಪೋಕ್ಸೋ ಪ್ರಕರಣದ ದೂರುದಾರರ ಪರ ವಕೀಲ ಎಸ್.ಬಾಲನ್ ಅವರು ಯಡಿಯೂರಪ್ಪರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಕೋರಿರುವ ಅರ್ಜಿಗೆ ಪೂರಕವಾಗಿ, ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಆದೇಶಿಸಿರುವ ತೀರ್ಪುಗಳನ್ನು ಸಲ್ಲಿಸಬೇಕು. ಮುಂದಿನ ವಿಚಾರಣೆಗೆ ಅವುಗಳನ್ನು ಇಟ್ಟುಕೊಳ್ಳಬೇಕು. ಕಂತಿನಲ್ಲಿ ವಿಚಾರಣೆ ನಡೆಸಲಾಗದು ಎಂದು ಪೀಠ ಹೇಳಿತು. ಇದಕ್ಕೆ ಮುಂದಿನ ವಿಚಾರಣೆ ವೇಳೆಗೆ ತೀರ್ಪುಗಳನ್ನು ಸಲ್ಲಿಸಲಾಗುವುದು ಎಂದು ವಕೀಲರು ಹೇಳಿದರು.
ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಯಡಿಯೂರಪ್ಪರನ್ನು ಬಂಧಿಸಬಾರದು. ಸಿಐಡಿ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಜೂ.17ರಂದು ಯಡಿಯೂರಪ್ಪ ವಿಚಾರಣೆಗೆ ಹಾಜರಾಗಬೇಕು ಎಂದು ನಿರ್ದೇಶಿಸಿತ್ತು. ಅಲ್ಲದೆ, ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾದವರು. ಈ ಹಿಂದೆ ಶಾಸನರೂಪಕರಾಗಿದ್ದರು. ತಮ್ಮ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಸ್ವಾಭಾವಿಕವಾಗಿಯೇ ಆರೋಗ್ಯದ ಸಮಸ್ಯೆಗಳಿರುತ್ತವೆ. ಇಂತಹ ವ್ಯಕ್ತಿಯ ಬಗ್ಗೆ ತನಿಖೆ ನಡೆಸುವಾಗ ಪೊಲೀಸರು ತಮ್ಮ ನಡೆಯ ಬಗ್ಗೆ ಸಂಶಯ ಬಾರದಂತೆ ಮುಂದುವರಿಯಬೇಕು. ಪ್ರತೀಕಾರದ ಮೇಲೆ ನಡೆದುಕೊಳ್ಳಲಾಗುತ್ತಿದೆ ಎಂಬ ಭಾವನೆ ಮೂಡಬಾರದು ಎಂದು ಸೂಚನೆ ನೀಡಿತ್ತು.
ಇದನ್ನೂ ಓದಿ: ಪೋಕ್ಸೋ ಪ್ರಕರಣ: ಯಡಿಯೂರಪ್ಪ ವಿರುದ್ಧ ಸಲ್ಲಿಸಲಾದ ಚಾರ್ಜ್ಶೀಟ್ನಲ್ಲೇನಿದೆ? - CID charge sheet against BSY