ಚಿಕ್ಕಮಗಳೂರು:ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದ್ದು, ತ್ಯಾಗದಬಾಗಿ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಹಳ್ಳ ಉಕ್ಕಿ ಹರಿದಿದ್ದರಿಂದ ಹಿಟಾಚಿ ಮುಳುಗಿದೆ. ಗ್ರಾಮದಲ್ಲಿ ಸೇತುವೆ ಇಕ್ಕೆಲಗಳನ್ನು ಕ್ಲೀನ್ ಮಾಡುವಾಗ ಈ ಘಟನೆ ನಡೆದಿದೆ.
ಕೆಮ್ಮಣ್ಣುಗುಂಡಿ - ಕಲ್ಲತ್ತಿಗರಿ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಇದ್ದಕ್ಕಿದ್ದಂತೆ ಹಳ್ಳದಲ್ಲಿ ನೀರು ಹೆಚ್ಚಾಗಿ ಹಿಟಾಚಿ ಮುಳುಗಿದೆ. ಹಿಟಾಚಿ ಬಿಟ್ಟು ಮೇಲೆ ಬಂದು ಕಾರ್ಮಿಕರು ಜೀವ ಉಳಿಸಿಕೊಂಡಿದ್ದಾರೆ. ಹಲವು ಮಂದಿ ಕಾರ್ಮಿಕರಿದ್ದರು ಹಿಟಾಚಿಯನ್ನು ಹಳ್ಳದಿಂದ ಹೊರ ತೆಗೆಯಲು ಸಾಧ್ಯವಾಗಿಲ್ಲ. ಮಳೆ ಕಡಿಮೆ ಆಗುವವರೆಗೂ ಹಳ್ಳದಲ್ಲೇ ಹಿಟಾಚಿ ಲಾಕ್ ಆಗಲಿದೆ.
ಮೈದುಂಬಿ ಹರಿಯುತ್ತಿರುವ ಕಲ್ಲತ್ತಿಗಿರಿ ಜಲಪಾತ: ಮತ್ತೊಂಡೆ, ಭಾರೀ ಮಳೆಯಿಂದಾಗಿ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಕಲ್ಲತ್ತಿಗಿರಿ ಜಲಪಾತ ಮೈದುಂಬಿ ಹರಿಯುತ್ತಿದೆ. ಮೊನ್ನೆವರೆಗೂ ಜಲಪಾತದಲ್ಲಿ ನೀರಿನ ಪ್ರಮಾಣ ಕಡಿಮೆ ಇತ್ತು. ರಾತ್ರಿ ಸುರಿದ ಒಂದೇ ಮಳೆಗೆ ಕಲ್ಲತ್ತಿಗಿರಿ ಜಲಪಾತ ಧುಮ್ಮಿಕ್ಕುತ್ತಿದೆ. ಕೆಮ್ಮಣ್ಣುಗುಂಡಿ ಗುಡ್ಡಗಾಡು ತಪ್ಪಲ್ಲಿನಲ್ಲಿ ಭಾರೀ ಮಳೆಯಾಗುತ್ತಿದೆ. ಜಲಪಾತವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ.