ಮಂಗಳೂರು: ಭಾರೀ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ನಿನ್ನೆಯಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬೆಳ್ತಂಗಡಿ ಮತ್ತು ಬಂಟ್ವಾಳದಲ್ಲಿ ಮಳೆಯ ಅಬ್ಬರ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಎರಡು ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ತೋಡು ಹಳ್ಳ ಕೈಸೇತುವೆಗಳನ್ನು ದಾಟಿ ಶಾಲೆಗೆ ಹಲವಾರು ವಿದ್ಯಾರ್ಥಿಗಳು ಬರುತ್ತಿರುವ ಕಾರಣ ಬೆಳ್ತಂಗಡಿ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಪೋಷಕರು ಮಕ್ಕಳನ್ನು ನೀರಿಗೆ ಇಳಿಯದಂತೆ, ನೀರಲ್ಲಿ ಆಟವಾಡದಂತೆ ಜಾಗೃತೆ ವಹಿಸಬೇಕೆಂದು ಬೆಳ್ತಂಗಡಿ ತಹಶೀಲ್ದಾರ್ ಮತ್ತು ಬಿ.ಇ.ಒ ತಿಳಿಸಿದ್ದಾರೆ.
ಬೈಂದೂರು ಶಿಕ್ಷಣ ವಲಯ ವ್ಯಾಪ್ತಿ ಶಾಲೆಗಳಿಗೆ ಇಂದು ರಜೆ ಘೋಷಣೆ
ಉಡುಪಿ: ಬೈಂದೂರು ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ವಲಯ ವ್ಯಾಪ್ತಿಯ ಶಾಲೆಗಳಿಗೆ ಇಂದು ಜು.4 ರಂದು ರಜೆ ಘೋಷಿಸಲಾಗಿದೆ. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಶಿಕ್ಷಣ ವಲಯ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಇಡೀ ಬೈಂದೂರು ತಾಲೂಕಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಮಾಹಿತಿ ನೀಡಿದ್ದಾರೆ.
ಹಲವೆಡೆ ಹಲವಾರು ವಿದ್ಯಾರ್ಥಿಗಳು ಹಳ್ಳ ಕೈ ಸೇತುವೆಗಳನ್ನು ದಾಟಿ ಶಾಲೆಗೆ ಬರುತ್ತಿರುವ ಕಾರಣ ಮುಂಜಾಗ್ರತ ಕ್ರಮವಾಗಿ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದು, ಮಕ್ಕಳನ್ನು ನೀರಿಗೆ ಇಳಿಯದಂತೆ ನೀರಲ್ಲಿ ಆಟವಾಡದಂತೆ ಎಚ್ಚರ ವಹಿಸಲು ತಿಳಿಸಿದ್ದಾರೆ.
ಇದನ್ನೂ ಓದಿ:ಕರಾವಳಿ ಜಿಲ್ಲೆಗಳಲ್ಲಿ ಮುಂದುವರೆದ ಮುಂಗಾರು ಮಳೆ ಪ್ರಭಾವ; ಐದು ದಿನ ಯೆಲ್ಲೋ ಅಲರ್ಟ್ ಘೋಷಣೆ - Rain in Karnataka