ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಭಾರಿ ಮಳೆ: 17 ವಿಮಾನಗಳು ಚೆನ್ನೈಗೆ ಡೈವರ್ಟ್, ಕೆಂಪೇಗೌಡ ಏರ್​ಪೋರ್ಟ್​ ಟರ್ಮಿನಲ್ 2ರಲ್ಲಿ ಸೋರಿಕೆ - Rain In Bengaluru - RAIN IN BENGALURU

ಗುರುವಾರ ತಡರಾತ್ರಿ ಧಾರಾಕಾರ ಮಳೆಯಾಗಿದ್ದು ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ಕ್ಕೆ ಮಳೆ ನೀರು ನುಗ್ಗಿದೆ. ಇನ್ನು ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ವಿಮಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

RAIN IN BENGALURU
ವಿಮಾನ ನಿಲ್ದಾಣದಲ್ಲಿ ಧಾರಾಕಾರ ಮಳೆ (ETV Bharat)

By ETV Bharat Karnataka Team

Published : May 10, 2024, 2:59 PM IST

ದೇವನಹಳ್ಳಿ:ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಗುರುವಾರ ಸಂಜೆ ಭಾರಿ ಮಳೆಯಾಗಿದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆ ಸುರಿದ ಪರಿಣಾಮ ಟರ್ಮಿನಲ್ 2ರ ಮೇಲ್ಛಾವಣಿಯಲ್ಲಿ ಸೋರಿಕೆಯಾಗಿದ್ದು, ವಿಮಾನ ನಿಲ್ದಾಣದ ಒಳಗೆ ನೀರು ನುಗ್ಗಿದೆ. ಮಂದ ಬೆಳಕು ಮತ್ತು ಬಿರುಗಾಳಿ ಮಳೆಯಿಂದ ವಿಮಾನಗಳ ಲ್ಯಾಂಡಿಂಗ್​ ಮಾಡಲು ಸಾಧ್ಯವಾಗದ ಹಿನ್ನೆಲೆ 17 ವಿಮಾನಗಳನ್ನು ಚೆನ್ನೈನತ್ತ ಡೈವರ್ಟ್ ಮಾಡಬೇಕಾಯಿತು.

''ಭಾರಿ ಗಾಳಿ ಮತ್ತು ಮಳೆ ಪರಿಣಾಮ ರಾತ್ರಿ 9.35 ರಿಂದ 10.29ರ ನಡುವೆ ವಿಮಾನಗಳನ್ನು ಲ್ಯಾಂಡಿಂಗ್ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಕೆಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಬೇಕಾಯಿತು. ಗುರುವಾರ 13 ದೇಶೀಯ ವಿಮಾನಗಳು, ಮೂರು ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳು ಮತ್ತು ಒಂದು ಅಂತಾರಾಷ್ಟ್ರೀಯ ಸರಕು ವಿಮಾನವನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಮಾಡಬೇಕಾಯಿತು. ವಿಮಾನ ನಿಲ್ದಾಣ ಪ್ರದೇಶದಲ್ಲಿ ಗುಡುಗು ಮಿಂಚು ಸಹಿತ ಬಾರಿ ಮಳೆ ಸುರಿದ ಪರಿಣಾಮ ವಿಮಾನಗಳನ್ನು ಬೇರೆಡೆಗೆ ಡೈವರ್ಟ್ ಮಾಡಲಾಗಿದೆ'' ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

''ಬೆಂಗಳೂರಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಕೆಲವು ವಿಮಾನಗಳ ಸೇವೆಯಲ್ಲಿ ವ್ಯತ್ಯಯ ಸಹ ಉಂಟಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳು ಸೇರಿದಂತೆ ಹಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ'' ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ಟರ್ಮಿನಲ್ 2ರ ಛಾವಣಿಯಲ್ಲಿ ಮಳೆ ನೀರು ಸೋರಿಕೆಯಾಗಿದ್ದು, ಮಳೆ ನೀರು ನೆಲದ ಮೇಲೆ ನಿಂತಿರುವುದನ್ನು ಕಂಡ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರ ದೂರುಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕೆಐಎ ಅಧಿಕಾರಿಗಳು, ''ಗುರುವಾರ ರಾತ್ರಿ ಅಲ್ಪ ಅವಧಿಯಲ್ಲಿ ಅಧಿಕ ಮಳೆ ಸುರಿದಿದೆ. ಪರಿಣಾಮ ಛಾವಣಿಯಲ್ಲಿ ಮಳೆ ನೀರು ಸೋರಿಕೆಯಾಗಿದೆ. ಪ್ರಯಾಣಿಕರಿಗೆ ಆದ ತೊಂದರೆಗಳಿಗೆ ನಾವು ವಿಷಾಧಿಸುತ್ತೇವೆ'' ಎಂದು ಹೇಳಿದ್ದಾರೆ.

ಭಾರೀ ಮಳೆಯಿಂದಾಗಿ ವಿಮಾನ ನಿಲ್ದಾಣದಲ್ಲಿ 1 ಗಂಟೆಗಳ ಕಾಲ ವಿಮಾನಗಳ ಕಾಲ ಲ್ಯಾಂಡ್ ಮಾಡಲು ಸಾಧ್ಯವಾಗಲಿಲ್ಲ. ಈ ವೇಳೆ ಬೆಂಗಳೂರಿಗೆ ಬರಬೇಕಿದ್ದ 17 ವಿಮಾನಗಳನ್ನು ಚೆನ್ನೈನತ್ತ ಡೈವರ್ಟ್ ಮಾಡಬೇಕಾಯಿತು. ಮಳೆ ನಿಂತ ಬಳಿಕ ಚೆನ್ನೈನಿಂದ ಬೆಂಗಳೂರಿಗೆ ವಿಮಾನಗಳು ಬಂದು ಲ್ಯಾಂಡ್ ಆದವು.

ಇನ್ನು ಗಾಳಿ ಸಹಿತ ಮಳೆಗೆ ಜಯನಗರ, ನೃಪತುಂಗ ನಗರ ಮತ್ತು ಆರ್‌ಆರ್ ನಗರ ಸೇರಿದಂತೆ ನಗರದ ಹಲವೆಡೆ ಮರಗಳು ಧರೆಗುರುಳಿವೆ. ನಗರದಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು ಬೇಸಿಗೆಯ ಬಿಸಿಲ ತಾಪದಿಂದ ಬೆಂಗಳೂರಿಗರಿಗೆ ಈ ಮಳೆ ಸಮಾಧಾನ ತಂದಿದೆ. ಶುಕ್ರವಾರ ಬೆಳಗ್ಗೆ 8.30 ರವರೆಗಿನ 24 ಗಂಟೆಗಳ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ 14 ಮಿಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ನಗರದ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 33 ಮತ್ತು 22 ಡಿಗ್ರಿ ಸೆಲ್ಸಿಯಸ್‌ನಲ್ಲಿದೆ ಎಂದು ಕೂಡ ಮಾಹಿತಿ ನೀಡಿದೆ.

ಇದನ್ನೂ ಓದಿ: ಬರಗಾಲದಿಂದ ನೆಲಕಚ್ಚಿದ ನೂರಾರು ಎಕರೆ ಕಬ್ಬು, ಅಡಿಕೆ, ತೆಂಗು: ಸಂಕಷ್ಟದಲ್ಲಿ ರೈತ - Crop Loss

ABOUT THE AUTHOR

...view details