ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ವಾಡಿಕೆಗಿಂತ ಶೇ.22ರಷ್ಟು ಹೆಚ್ಚು ಮಳೆ; 29 ಆರೈಕೆ ಕೇಂದ್ರಗಳ ಸ್ಥಾಪನೆ: ಸಚಿವ ಕೃಷ್ಣ ಬೈರೇಗೌಡ - Krishna Byre Gowda - KRISHNA BYRE GOWDA

ಮಳೆ ಹಾನಿ ಪರಿಹಾರದ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

Minister Krishna Byre Gowda
ಸಚಿವ ಕೃಷ್ಣಭೈರೇಗೌಡ (ETV Bharat)

By ETV Bharat Karnataka Team

Published : Jul 19, 2024, 6:59 PM IST

ಬೆಂಗಳೂರು: ರಾಜ್ಯದಲ್ಲಿ ಮಳೆ ಹಾನಿ ಪರಿಹಾರಕ್ಕಾಗಿ ಜಿಲ್ಲೆಗಳಿಗೆ 774.5 ಕೋಟಿ ರೂ. ಒದಗಿಸಲಾಗಿದ್ದು, 29 ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಇಂದು ಸದನದಲ್ಲಿ ಆಡಳಿತ ಪಕ್ಷದ ಹಲವು ಶಾಸಕರು ಮಾತನಾಡಿದ ಮಳೆಹಾನಿ ಕುರಿತ ಚರ್ಚೆಗೆ ಉತ್ತರ ನೀಡಿದ ಸಚಿವರು, ಮಳೆಹಾನಿ ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ. ಅಗತ್ಯವಿದ್ದರೆ 100 ರಿಂದ 200 ಕೋಟಿ ರೂ. ಒದಗಿಸಲು ಸಿದ್ಧರಿದ್ದೇವೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ 10 ಕೋಟಿ ರೂ.ಗಿಂತ ಕಡಿಮೆಯಾದ ಕೂಡಲೇ ಹಣ ಬಿಡುಗಡೆ ಮಾಡುತ್ತೇವೆ. ಮಳೆಹಾನಿಗೆ ಸಂಬಂಧಿಸಿದಂತೆ ಎಸ್​​ಡಿಆರ್​ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಆರೈಕೆ ಕೇಂದ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಊಟ ಉಪಚಾರ ಮಾಡುತ್ತಿದ್ದೇವೆ. ರಾಜ್ಯದಲ್ಲಿ ವಾಡಿಕೆಗಿಂತ ಶೇ.22ರಷ್ಟು ಹೆಚ್ಚು ಮಳೆ ಜೂನ್​​ನಿಂದ ಈವರೆಗೆ ಆಗಿದೆ. ಹೀಗಾಗಿ, ಕೆಲವಡೆ ಅತಿವೃಷ್ಠಿಯಾಗಿದ್ದು, ರಸ್ತೆ, ಸೇತುವೆ, ಮನೆ, ಬೆಳೆ, ವಿದ್ಯುತ್ ಸಂಪರ್ಕಕ್ಕೆ ಹಾನಿ ಉಂಟಾಗಿದೆ. ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಕಷ್ಟ ನಿವಾರಣೆಗೆ ಸರ್ಕಾರ ಸಿದ್ಧವಿದೆ ಎಂದರು.

ಬೆಳಗಾವಿ ಹಾಗೂ ಮಲೆನಾಡು ಸೇರಿದಂತೆ ಪ್ರವಾಹ ಉಂಟಾಗುವ ಆರು ಜಿಲ್ಲೆಗಳಲ್ಲಿ ಎನ್​​ಡಿಆರ್​ಎಫ್​​ನ ಐದು ತುಕಡಿಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಅತಿವೃಷ್ಠಿಯಿಂದ ಸಮಸ್ಯೆಗೆ ಒಳಗಾಗುವವ 2,225 ಗ್ರಾಮಗಳನ್ನು ಗುರುತಿಸಿದ್ದು, ಅಲ್ಲಿ 2.38 ಲಕ್ಷ ಜನರು ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ. 1,200 ಗ್ರಾಮ ಪಂಚಾಯಿತಿಗಳಲ್ಲಿ ಟಾಸ್ಕ್ ಪೋರ್ಸ್ ರಚನೆ ಮಾಡಲಾಗಿದ್ದು, ತಾಲೂಕು ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ಮಾಡಿ ಅಗತ್ಯ ಹಣ ನೀಡಲು ಸೂಚಿಸಲಾಗಿದೆ ಎಂದರು.

ಅಂಕೋಲಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿದೆ. ಇದಕ್ಕೆ ಅವೈಜ್ಞಾನಿಕ ಹೆದ್ದಾರಿ ವಿನ್ಯಾಸವೇ ಕಾರಣವಾಗಿದ್ದು, ಸರಿಪಡಿಸುವಂತೆ ರಾಜ್ಯದ ಮುಖ್ಯಕಾರ್ಯದರ್ಶಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಮಾತನಾಡಿದ್ದಾರೆ. ಸಕಲೇಶಪುರ ಮತ್ತು ಕೊಡಗಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿ ರಸ್ತೆ ಸಂಚಾರವನ್ನು ನಿರ್ಬಂಧಿಸಲಾಗಿದೆ. ಕಡಲ ಕೊರೆತ ತಡೆಯಲು ಮೀನುಗಾರಿಕೆ ಇಲಾಖೆಯಿಂದ ವಿಶೇಷ ಯೋಜನೆ ರೂಪಿಸಲಾಗುವುದು. ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ ಎಂದು ಹೇಳಿದರು.

ಇದನ್ನೂ ಓದಿ:ಕೃಷಿಹೊಂಡದ ಸುತ್ತ ಬೇಲಿ ನಿರ್ಮಾಣಕ್ಕೂ ಅನುದಾನ: ಸಚಿವ ಚಲುವರಾಯಸ್ವಾಮಿ - Minister Chaluvarayaswamy

ಮಳೆ ಹಾನಿಯಿಂದ ಹಾಳಾದ ಮನೆಗಳಿಗೆ ಮನೆ ಮಂಜೂರು ಮಾಡಿ, ಬೆಳೆಹಾನಿಗೂ ಪರಿಹಾರ ನೀಡಲು ಸೂಚಿಸಲಾಗಿದೆ. ಈ ವರ್ಷ ಜಲಾಶಯಗಳಲ್ಲಿ ಶೇ.60ರಷ್ಟು ಅಂದರೆ, 536 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಕೇವಲ 243 ಟಿಎಂಸಿ ನೀರು ಇತ್ತು. ಪ್ರತಿ ನದಿಯಲ್ಲೂ ಸ್ವಾಭಾವಿಕ ಮಟ್ಟ, ಅಪಾಯದ ಮಟ್ಟ ಗುರುತಿಸಿ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಕೃಷ್ಣಾ ಹಾಗೂ ಕಾವೇರಿ ಕೊಳ್ಳದ ಯಾವ ನದಿಗಳು ಸಹ ಅಪಾಯದಮಟ್ಟ ಮೀರಿಲ್ಲ. ಭಾರಿ ಮಳೆಯಾಗುತ್ತಿರುವ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಅಗ್ನಿಶಾಮಕ ಅಧಿಕಾರಿಗಳ ಜೊತೆ ಇಂದು ವಿಡಿಯೋ ಸಂವಾದ ನಡೆಸಿ ಹಾಳಾಗಿರುವ ರಸ್ತೆಗಳಲ್ಲಿ ವಾಹನ ಓಡಾಟಕ್ಕೆ ಅನುಕೂಲವಾಗುವಂತೆ ದುರಸ್ತಿಗೆ ಸೂಚಿಸಲಾಗುವುದು. ಹಾಳಾದ ಅಂಗನವಾಡಿ ಶಾಲೆ ಕಟ್ಟಡದ ರಿಪೇರಿಗೆ ಮಂಜೂರಾತಿ ನೀಡುವಂತೆ ನಿರ್ದೇಶನ ನೀಡಲಾಗುವುದು ಎಂದರು.

ABOUT THE AUTHOR

...view details