ಬೆಂಗಳೂರು: ಸರ್ಕಾರಿ ಕೆಲಸದ ಭರವಸೆ ನೀಡಿ ಹಣ ಪಡೆದು ವಂಚಿಸಿದ್ದ ಆರೋಪದ ಮೇಲೆ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಓರ್ವರನ್ನ ಅಮಾನತುಗೊಳಿಸಲಾಗಿದೆ. ನಗರದ ಸಶಸ್ತ್ರ ಮೀಸಲು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಪ್ರಶಾಂತ್ ಕುಮಾರ್ ಅಮಾನತುಗೊಂಡವರು.
ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಆರೋಪದಡಿ ಭಾಗ್ಯಮ್ಮ ಎಂಬುವವರು ನೀಡಿದ್ದ ದೂರಿನನ್ವಯ ಪ್ರಶಾಂತ್ ಕುಮಾರ್ ಸೇರಿದಂತೆ ಮೂವರ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಹಿನ್ನೆಲೆ:ಮಹಾಲಕ್ಷ್ಮೀ ಲೇಔಟ್ ನಿವಾಸಿಯಾಗಿರುವ ಭಾಗ್ಯಮ್ಮ ಅವರು ನೀಡಿದ ದೂರಿನ ವಿವರ ಹೀಗಿದೆ. "2011ರಲ್ಲಿ ಪರಿಚಯವಾಗಿದ್ದ ಪ್ರಶಾಂತ್ ಕುಮಾರ್ ಬಳಿ 'ತಮ್ಮ ಇಬ್ಬರು ಮಕ್ಕಳಿಗೆ ಸರ್ಕಾರಿ ಕೆಲಸ ಕೊಡಿಸಿ' ಎಂದು ಕೇಳಿದ್ದೆ. ಆಗ ತನಗೆ ಹಲವು ಸರ್ಕಾರಿ ಅಧಿಕಾರಿಗಳು ಪರಿಚಯವಿದ್ದಾರೆ, ನಾನು ಕೆಲಸ ಕೊಡಿಸುತ್ತೇನೆ ಎಂದು ಪ್ರಶಾಂತ್ ಭರವಸೆ ನೀಡಿದ್ದರು. 'ನಿಮ್ಮ ಇಬ್ಬರು ಮಕ್ಕಳಿಗೆ 3 ತಿಂಗಳಲ್ಲಿ ಎಫ್ಡಿಎ, ಎಸ್ಡಿಎ ಶ್ರೇಣಿಯ ಕೆಲಸ ಕೊಡಿಸುವುದಾಗಿ' ಭರವಸೆ ನೀಡಿದ್ದರು. ಮತ್ತು ಅದಕ್ಕೆ ಪ್ರತಿಯಾಗಿ 25 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ನಂತರ ಮಂಜುನಾಥ್ ಪ್ರಸಾದ್ ಎಂಬಾತನನ್ನ ತನ್ನ ಪಿಎ ಎಂದು ಪ್ರಶಾಂತ್ ಕುಮಾರ್ ಪರಿಚಯ ಮಾಡಿಸಿದ್ದರು. ಆ ಬಳಿಕ ಹಂತಹಂತವಾಗಿ ಒಟ್ಟು 47 ಲಕ್ಷ ರೂ. ಹಣ, 857 ಗ್ರಾಂ ಚಿನ್ನಾಭರಣವನ್ನೂ ಪಡೆದಿದ್ದು, ಯಾವುದೇ ಸರ್ಕಾರಿ ನೌಕರಿ ಕೊಡಿಸಿಲ್ಲ' ಎಂದು ಆರೋಪಿಸಿ ಭಾಗ್ಯಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಭಾಗ್ಯಮ್ಮ ನೀಡಿರುವ ದೂರಿನನ್ವಯ ಹೆಡ್ ಕಾನ್ಸ್ಟೇಬಲ್ ಪ್ರಶಾಂತ್ ಕುಮಾರ್, ಅವರ ಪತ್ನಿ ದೀಪಾ ಮತ್ತು ಮಂಜುನಾಥ್ ಪ್ರಸಾದ್ ವಿರುದ್ಧ ನಂದಿನಿ ಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಪ್ರಶಾಂತ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ದರ್ಶನ್‌ಗೆ ವಿಶೇಷ ಸೌಲಭ್ಯ ನೀಡಿದ್ದ ಜೈಲು ಅಧೀಕ್ಷಕ ಮಲ್ಲಿಕಾರ್ಜುನ ಸ್ವಾಮಿ ಅಮಾನತು ಎತ್ತಿಹಿಡಿದ ಕೆಎಟಿ