ನಂಜನಗೂಡಿಗೆ ಭೇಟಿ ನೀಡಿದ ಹೆಚ್ಡಿಕೆ ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ದಕ್ಷಿಣಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡಿನ ಶ್ರೀನಂಜುಂಡೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರತಿ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ವರಿಷ್ಠ ಹೆಚ್.ಡಿ ದೇವೇಗೌಡ ಸೇರಿದಂತೆ ಇಡೀ ಕುಟುಂಬ ಶ್ರೀನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ ಚುನಾವಣೆ ಕಾರ್ಯದಲ್ಲಿ ತೊಡಗುತ್ತಾರೆ. ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇದೀಗ ದೇವಸ್ಥಾನಕ್ಕೆ ತೆರಳಿ ತುಲಾಭಾರ ಸೇವೆ ನೆರವೇರಿಸಿದ್ದಾರೆ.
ದೇವಸ್ಥಾನ ಆವರಣದಲ್ಲಿರುವ ಪಾರ್ವತಮ್ಮ, ಚಂಡಿಕೇಶ್ವರ, ಗಣಪತಿ, ಸುಬ್ರಹ್ಮಣ್ಯ ದೇವರ ದರ್ಶನವನ್ನೂ ಪಡೆದು, ತಮ್ಮ ಹರಕೆ ತೀರಿಸಿದ್ದಾರೆ. ಈ ವೇಳೆ ಶಾಸಕ ಜಿ.ಟಿ. ದೇವೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಿನ್ನೆ ದಿನ ಮೈಸೂರಿಗೆ ತೆರಳಿದ್ದ ಹೆಚ್ಡಿಕೆ ಖಾಸಗಿ ಹೋಟೆಲ್ವೊಂದರಲ್ಲಿ ನಡೆದ ಬಿಜೆಪಿ ಜೆಡಿಎಸ್ ಮೊದಲ ಕೋರ್ ಕಮಿಟಿ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಜಿ.ಟಿ ದೇವೇಗೌಡ, ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ, ಸಂಸದ ಪ್ರತಾಪ್ ಸಿಂಹ, ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಹಾಗೂ ಸ್ಥಳೀಯ ಶಾಸಕರು ಸೇರಿದಂತೆ ಎರಡು ಪಕ್ಷದ ಮುಖಂಡರು ಭಾಗಿಯಾಗಿದ್ದರು.
ಇದನ್ನೂ ಓದಿ:ನಾಮಪತ್ರ ಸಲ್ಲಿಕೆಗೂ ಮುನ್ನ ಮನೆ ದೇವರಿಗೆ ಪೂಜೆ ಸಲ್ಲಿಸಿದ ಡಿ.ಕೆ.ಸುರೇಶ್ - D K Suresh