ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರ ಜಾಹೀರಾತುಗಳಿಂದ ಜಾಹೀರಾತುಗೋಸ್ಕರವೇ ನಡೆಯುತ್ತಿರುವ ಸರ್ಕಾರ. ಅಚ್ಚರಿ ಎಂದರೆ ಸರ್ಕಾರದ ವಾಲ್ಮೀಕಿ ಜಯಂತಿ ಜಾಹೀರಾತಿನಲ್ಲಿ ಸತ್ಯಮೇಯ ಜಯತೇ ವಾಕ್ಯ ನಾಪತ್ತೆಯಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರ ಕೆಲಸದಲ್ಲಿ ಅಸಮರ್ಥ, ಪ್ರಚಾರದಲ್ಲಿ ಮಾತ್ರ ಶರವೇಗದಲ್ಲಿದೆ ಎಂದು ಟೀಕಿಸಿದರು. ಕರ್ನಾಟಕ ರಾಜ್ಯದಲ್ಲಿ ಈಗಿನ ಸರ್ಕಾರದ ವೈಫಲ್ಯಗಳೇ ಎದ್ದು ಕಾಣುತ್ತಿವೆ. ಈ ರಾಜ್ಯದಲ್ಲಿ ನಿಜಕ್ಕೂ ಸರ್ಕಾರ ಇದೆಯಾ ಎನ್ನುವ ಅನುಮಾನ ಕಾಡುತ್ತಿದೆ. ಬೆಂಗಳೂರನಲ್ಲಿ ಮಳೆಯ ಅನಾಹುತದಿಂದ ಜನರು ಕಂಗೆಟ್ಟಿದ್ದಾರೆ. ಗ್ರಾಮೀಣ ಭಾಗದಲ್ಲಿ ರೈತರು ಕೂಡ ನಷ್ಟ ಅನುಭವಿಸುತ್ತಿದ್ದಾರೆ. ಬೆಳೆಗಳು ನಷ್ಟವಾಗುತ್ತಿವೆ. ಹಿಂಗಾರು ಮಳೆಯಿಂದ ರೈತರು ಸಂಕಷ್ಟ ಸಿಲುಕಿದ್ದಾರೆ. ಆದರೆ, ಜನರ ನೆರವಿಗೆ ಸರ್ಕಾರ ಧಾವಿಸುತ್ತಿಲ್ಲ ಎಂದು ಅವರು ದೂರಿದರು.
ಇಡೀ ಬೆಂಗಳೂರು ನಗರವೇ ಪ್ರವಾಹದಲ್ಲಿ ಮುಳುಗಿತು. ಆದರೆ, ಮುಖ್ಯಮಂತ್ರಿಯಾಗಲಿ, ಯಾವೊಬ್ಬ ಸಚಿವರೂ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಕಷ್ಟ ವಿಚಾರಿಸಲಿಲ್ಲ. ಸಿಎಂ ಮಳೆಯ ಬಗ್ಗೆ ಒಂದು ಹೇಳಿಕೆ ಕೂಡ ಕೊಡಲಿಲ್ಲ. ಬೆಂಗಳೂರಲ್ಲಿ ನೀರು ತುಂಬಿದ್ದರೆ ಅರ್ಧ ಗಂಟೆಯಲ್ಲಿ ಖಾಲಿ ಮಾಡೋದು ನಮಗೆ ಗೊತ್ತಿದೆ ಅಂತ ಡಿಸಿಎಂ ಹೇಳುತ್ತಾರೆ. ಜನರಿಗೆ ಊಟ ಇಲ್ಲ, ಮಲಗಲು ಜಾಗ ಇಲ್ಲ, ಮನೆಗಳಲ್ಲಿ ನೀರು ತುಂಬಿದೆ. ಹೊಟೇಲ್‌ನಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಇದೆ. ಈ ಸಮಸ್ಯೆ ಹಲವಾರು ವರ್ಷಗಳಿಂದ ಇದೆ. ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎಂದವರು ಬೆಂಗಳೂರು ನಗರವನ್ನು ಮಳೆಯಲ್ಲಿ ಮುಳುಗಿಸಿದ್ದಾರೆ ಎಂದು ಟೀಕಿಸಿದರು.
ಬೆಂಗಳೂರಿನ ಹೆಸರು ಹಾಳು ಮಾಡುವ ಕೆಲಸ ವಿಪಕ್ಷಗಳು ಮಾಡುತ್ತಿವೆ ಎಂದು ಡಿಸಿಎಂ ಹೇಳಿದ್ದಾರೆ. ಅವರು ಬೆಂಗಳೂರು ಉಸ್ತುವಾರಿ ಸಚಿವರಾಗಿ ಒಂದೂವರೆ ವರ್ಷ ಆಯಿತು. ಆದರೆ, ಒಳಚರಂಡಿ ವ್ಯವಸ್ಥೆ ಯಾಕೆ ಸರಿ ಮಾಡಲಿಲ್ಲ, ರಸ್ತೆಗಳು ನದಿಗಳಂತೆ ದೃಶ್ಯ ಮಾಧ್ಯಮಗಳಲ್ಲಿ ಕಾಣುತ್ತಿದ್ದವು. ಇದಕ್ಕೆ ಪ್ರಕೃತಿ ಹೊಣೆಯೇ? ಮಳೆ ಬರುತ್ತದೆ ಎನ್ನುವುದು ಗೊತ್ತಿರಲಿಲ್ಲವೇ?. ಇಷ್ಟೆಲ್ಲ ಅನಾಹುತ ಆಗಿದೆ. ಯಾವ ಕ್ರಮ ಕೈಗೊಳ್ಳುತ್ತೇವೆ ಅಂತ ಸ್ಪಷ್ಟವಾಗಿ ಹೇಳದ ಸರ್ಕಾರ ಪ್ರಚಾರದಲ್ಲಿ ಮಾತ್ರ ಸದಾ ಮುಂದೆ ಇರುತ್ತದೆ. ಜನರಿಗೆ ಮಾನಸಿಕ ಸ್ಥೈರ್ಯ ಹೇಳದೆ ಕೇವಲ ಬಡಾಯಿ ಕೊಚ್ಚಿಕೊಳ್ಳುವ ಇವರಿಗೆ ನಾಚಿಕೆ ಆಗಬೇಕು ವಾಗ್ದಾಳಿ ನಡೆಸಿದರು.