ಬೆಂಗಳೂರು: 'ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ ಎನ್ನುವುದು ನನ್ನ ಅನುಮಾನ' ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್ ಪೋಸ್ಟ್ ಮಾಡಿರುವ ಅವರು, "ಪ್ರತಿಪಕ್ಷ ನಾಯಕರಿಗೆ ರಕ್ಷಣೆ ಇಲ್ಲ ಎಂದ ಮೇಲೆ ವಿಧಾನಮಂಡಲದಲ್ಲಿ ಯಾರ ಭಾವಚಿತ್ರ ಹಿಡಿದರೇನು ಫಲ? ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮೇಲೆ ಸುವರ್ಣಸೌಧದಲ್ಲಿಯೇ ಹಲ್ಲೆ ಯತ್ನ ನಡೆದಿರುವುದು ಖಂಡನೀಯ. ಸಚಿವೆ ಬಗ್ಗೆ ಸಿ.ಟಿ.ರವಿ ಅವರು ಅವಾಚ್ಯ ಪದ ಬಳಸಿದ್ದರೆ ಅದನ್ನು ನಾನು ಸಮರ್ಥಿಸುವುದಿಲ್ಲ. ಅದಕ್ಕೆ ಪ್ರತಿಯಾಗಿ ಸಚಿವೆ ವರ್ತಿಸಿದ ರೀತಿ, ಅವರ ಬೆಂಬಲಿಗರ ಗೂಂಡಾಗಿರಿ ಅತಿರೇಖದ್ದು ಎಂದು ಟೀಕಿಸಿದ್ದಾರೆ".
"ಎಲ್ಲದ್ದಕ್ಕೂ ಡಾ.ಅಂಬೇಡ್ಕರ್ ಅವರ ಸಂವಿಧಾನದಡಿ ರೂಪಿತವಾದ ಕಾನೂನಿದೆ. ಸಭಾಪತಿಗಳೂ ರೂಲಿಂಗ್ ನೀಡಿದ್ದಾರೆ. ಆ ನಂತರವೂ ನಡೆಯುತ್ತಿರುವ ಘಟನಾವಳಿಗಳು, ಸಭಾಪತಿಗಳನ್ನೇ ನಿಂದಿಸುವ ಕೆಟ್ಟ ನಡವಳಿಕೆಗಳು ಆಘಾತಕಾರಿ. ಸರಕಾರದಲ್ಲಿರುವ ಕೆಲವರು ಈ ಘಟನೆಗೆ ಜ್ವಾಲೆ ಸ್ವರೂಪ ನೀಡಿ ಪ್ರಚೋದಿಸುತ್ತಿರುವುದು ಕಳವಳಕಾರಿ" ಎಂದು ತಿಳಿಸಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ಎಕ್ಸ್ ಪೋಸ್ಟ್ (ಹೆಚ್.ಡಿ. ಕುಮಾರಸ್ವಾಮಿ ಅಧಿಕೃತ X ಖಾತೆ) "ಮೀಸಲಾತಿಗಾಗಿ ಪಂಚಮಸಾಲಿ ಮುಖಂಡರು ಸುವರ್ಣಸೌಧದ ಮುಂದೆ ಪ್ರತಿಭಟಿಸಿದ್ದಕ್ಕೆ ಪೊಲೀಸರಿಂದ ಲಾಠಿಚಾರ್ಜ್ ಮಾಡಿಸಿ ಪೌರುಷ ಮೆರೆದಿತ್ತು ರಾಜ್ಯ ಸರ್ಕಾರ. ಅಂದು ಪೊಲೀಸರ ಪ್ರತಾಪ ಹೇಳತೀರದು. ಗೇಟಿನಲ್ಲಿಯೇ ತಡೆದು ಆ ಪಂಚಮಸಾಲಿ ಜನರಿಗೆ ರಕ್ತ ಬರುವಂತೆ ಲಾಠಿ ಬೀಸಿದ ಪೊಲೀಸರೇ.., ಈ ಗೂಂಡಾಗಳು ಸುವರ್ಣಸೌಧದೊಳಕ್ಕೆ ಹೇಗೆ ಬಂದರು? ಅಥವಾ... ಅವರೇ ನಿಮ್ಮ ಕಣ್ತಪ್ಪಿಸಿ ಒಳ ನುಸಳಿದರೋ ಅಥವಾ ಸರಕಾರವೇ ಷಡ್ಯಂತ್ರ ಮಾಡಿ ಒಳ ನುಗ್ಗಿಸಿತೋ? ಇಲ್ಲವೇ ಯಾವುದಾದರೂ ಕಲ್ಲು ಬಂಡೆಯ ಕರಾಮತ್ತು, ಕುಮ್ಮಕ್ಕು ಇದೆಯಾ" ಎಂದು ಪ್ರಶ್ನಿಸಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ಎಕ್ಸ್ ಪೋಸ್ಟ್ (ಹೆಚ್.ಡಿ. ಕುಮಾರಸ್ವಾಮಿ ಅಧಿಕೃತ X ಖಾತೆ) "ಸದನದ ಕಾರಿಡಾರಿನಲ್ಲಿಯೇ ಆ ಗೂಂಡಾಗಳು ಶಾಸಕರನ್ನು ಅಟ್ಟಾಡಿಸುತ್ತಾರೆ. ಕೊಲೆಗೆತ್ನಿಸುತ್ತಾರೆ, ಮಾರ್ಷಲ್ಗಳನ್ನು ಕೆಳಕ್ಕೆ ಕೆಡವಿ ಕ್ರಿಮಿನಲ್ ಪ್ರವೃತ್ತಿ ಮೆರೆಯುತ್ತಾರೆ ಎಂದರೆ ಬಂಡೆ ಬೆಂಬಲವಿದೆ ಎಂದೇ ಅರ್ಥ. ಆ ಗೌರವಾನ್ವಿತ ಸಚಿವೆಯ ಆಪ್ತ ಸಹಾಯಕ ಶಾಸಕರ ಮೇಲೇರಿ ಹೋಗುವ, ಕಾರಿಡಾರಿನ ಕಬ್ಬಿಣದ ಬಾಗಿಲನ್ನೇ ಮುರಿಯಲೆತ್ನಿಸಿ ಹಲ್ಲೆಗೆ ಯತ್ನಿಸುವ ದೃಶ್ಯಗಳು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ರಾಜ್ಯದಲ್ಲಿ ಆಡಳಿತ ಸುರಕ್ಷಿತ ಕೈಗಳಲ್ಲಿ ಇಲ್ಲ ಎನ್ನುವುದಕ್ಕೆ ಆ ದೃಶ್ಯಗಳೇ ಸಾಕ್ಷಿ" ಎಂದಿದ್ದಾರೆ.
"ಸುವರ್ಣಸೌಧಕ್ಕೆ ನುಗ್ಗಿದ ಗೂಂಡಾಗಳನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ರೌಡಿಪಟ್ಟಿ ತೆರೆಯಬೇಕು. ಸಮಾಜದ ಶಾಂತಿಗೆ ಬೆದರಿಕೆಯಾಗಿರುವ ಆ ಕಿಡಿಗೇಡಿಗಳನ್ನು ಸುವರ್ಣಸೌಧ, ವಿಧಾನಸೌಧದಿಂದ ಶಾಶ್ವತವಾಗಿ ನಿರ್ಬಂಧಿಸಬೇಕು. ಪೊಲೀಸರೇ ಇಡೀ ಪ್ರಕರಣದ ಬಗ್ಗೆ ನೀವು ಉತ್ತರಿಸಬೇಕಾಗುತ್ತದೆ. ಇಡೀ ರಾತ್ರಿ ಸಿ.ಟಿ.ರವಿ ಅವರನ್ನು ಪೊಲೀಸ್ ಜೀಪಿನಲ್ಲಿ ಸುತ್ತಿಸುತ್ತೀರಿ ಎಂದರೆ, ಇದಕ್ಕೆ ಯಾರ ಫರ್ಮಾನು ಕಾರಣ?. ಈ ಗೂಂಡಾಗಳ ಗ್ಯಾಂಗ್ ಲೀಡರ್ ಯಾರು?. ನಿಮಗೆ ಎಲ್ಲಾ ಮಾಹಿತಿ ಇರುತ್ತದೆ, ನೀವೂ ಸತ್ಯ ಹೇಳಬೇಕಾಗುತ್ತದೆ" ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:'ಬಂಧಿಸಿದ್ದು ಯಾಕೆ ಅಂತಾನೇ ಗೊತ್ತಿಲ್ಲ': ನ್ಯಾಯಾಧೀಶರ ಮುಂದೆ ಸಿ.ಟಿ. ರವಿ ಹೇಳಿಕೆ; ಮಧ್ಯಾಹ್ನಕ್ಕೆ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ