ಕರ್ನಾಟಕ

karnataka

ETV Bharat / state

ಮಂಡ್ಯ ನಾಯಕರ ಜೊತೆ ಸಭೆ ನಡೆಸಿದ ಹೆಚ್ ಡಿ ಕುಮಾರಸ್ವಾಮಿ - Nikhil Kumaraswamy

ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್​ ಡಿ ಕುಮಾರಸ್ವಾಮಿ ಅವರು ಮಂಡ್ಯ ನಾಯಕರ ಜೊತೆ ಮಹತ್ವದ ಸಮಾಲೋಚನೆ ನಡೆಸಿದರು.

ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ

By ETV Bharat Karnataka Team

Published : Mar 6, 2024, 10:39 PM IST

ಬೆಂಗಳೂರು: ಲೋಕಸಭೆ ಚುನಾವಣೆಯ ಪೂರ್ವ ತಯಾರಿ ಹಾಗೂ ಅಭ್ಯರ್ಥಿ ಆಯ್ಕೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್. ಡಿ ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ನಾಯಕರ ಜತೆ ಮಹತ್ವದ ಸಮಾಲೋಚನೆ ನಡೆಸಿದರು.

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಭೆಯ ನಂತರ ತಮ್ಮ ನಿವಾಸದಲ್ಲಿ ಮಂಡ್ಯ ನಾಯಕರ ಸಭೆ ನಡೆಸಿದ ಕುಮಾರಸ್ವಾಮಿ ಅವರು, ಜಿಲ್ಲೆಯ ಬಿಜೆಪಿ ನಾಯಕರು, ರಾಜ್ಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಆಯ್ಕೆ ಮಾಡುವುದಾಗಿ ಮುಖಂಡರಿಗೆ ತಿಳಿಸಿದರು.

ಮಾಜಿ ಸಚಿವರಾದ ಸಿ. ಎಸ್ ಪುಟ್ಟರಾಜು, ಡಿ. ಸಿ ತಮ್ಮಣ್ಣ ಹಾಗೂ ಮಾಜಿ ಶಾಸಕರಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಡಾ. ಅನ್ನದಾನಿ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ರಮೇಶ್ ಅವರು ಈ ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲೆಯ ಸ್ಥಿತಿಗತಿಗಳನ್ನು ವಿಸ್ತೃತವಾಗಿ ಚರ್ಚೆ ನಡೆಸಿದ ಮಾಜಿ ಮುಖ್ಯಮಂತ್ರಿಗಳು, ಬಿಜೆಪಿ ಮೈತ್ರಿ ನಂತರದ ಜಿಲ್ಲೆಯಲ್ಲಿನ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಅವಲೋಕನ ಮಾಡಿದರು.

ಅಭ್ಯರ್ಥಿ ಆಯ್ಕೆ ಬಗ್ಗೆ ನಾಯಕರಿಂದ ಮಾಹಿತಿ ಸಂಗ್ರಹ ಮಾಡಿದರಲ್ಲದೆ; ಚುನಾವಣೆಯಲ್ಲಿ ಗೆಲುವು ಮುಖ್ಯ. ಮೈತ್ರಿ ಅಭ್ಯರ್ಥಿಯನ್ನು ನಾವು ಗೆಲ್ಲಿಸಿಕೊಳ್ಳಲೇಬೇಕು. ಹಿಂದಿನ ಘಟನೆಗಳಿಂದ ಪಾಠ ಕಲಿಯಬೇಕು ಹಾಗೂ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಮೈತ್ರಿ ಪಕ್ಷಕ್ಕೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ನಿಮ್ಮ ಪಾಡಿಗೆ ನೀವು ಕೆಲಸ ಮಾಡಿ, ನಾನು ಯಾರ ಹೆಸರನ್ನು ಘೋಷಣೆ ಮಾಡುತ್ತೇನೆಯೋ ಅವರ ಪರವಾಗಿ ಕೆಲಸ ಮಾಡಿ. ಯಾವ ಕಾರಣಕ್ಕೂ ಮೈತ್ರಿ ಧರ್ಮ ಮೀರುವುದು ಬೇಡ. ಜಿಲ್ಲೆಯ ಬಿಜೆಪಿ ನಾಯಕರು, ರಾಜ್ಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ನೇರ ಮಾತುಗಳಲ್ಲಿ ಜಿಲ್ಲಾ ನಾಯಕರಿಗೆ ಹೇಳಿದರು.

ಪಕ್ಷಕ್ಕೆ ಹಾಗೂ ಚುನಾವಣೆ ಗೆಲುವಿಗೆ ಹಾನಿ ಆಗುವಂತಹ ಯಾವುದೇ ಕೆಲಸವನ್ನು ಯಾರೂ ಮಾಡಬಾರದು. ಅಭ್ಯರ್ಥಿ ಯಾರು ಆಗುತ್ತಾರೆ ಎನ್ನುವುದು ಮುಖ್ಯವಲ್ಲ, ಗೆಲುವೇ ಮುಖ್ಯ ಎಂದು ಎಲ್ಲಾ ನಾಯಕರಿಗೆ ಕುಮಾರಸ್ವಾಮಿ ಅವರು ಮನವರಿಕೆ ಮಾಡಿಕೊಟ್ಟರು. ಅಲ್ಲದೆ; ನಾಯಕರು ಕೊಟ್ಟ ಎಲ್ಲಾ ಸಲಹೆಗಳನ್ನು ಆಲಿಸಿದ ಮಾಜಿ ಮುಖ್ಯಮಂತ್ರಿಗಳು, ಇದೇ ವೇಳೆ ಅವರಿಗೆ ಕೆಲ ಮಹತ್ವದ ಸೂಚನೆಗಳನ್ನು ಕೊಟ್ಟರು. ಈ ಕ್ಷಣದಿಂದಲೇ ಚುನಾವಣೆ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಅವರು ನಿರ್ದೇಶನ ನೀಡಿದರು.

ಇದನ್ನೂ ಓದಿ :ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣಾ ಸಿದ್ದತೆ: ಹೆಚ್ಡಿಕೆ ನೇತೃತ್ವದಲ್ಲಿ ಎನ್​ಡಿಎ ನಾಯಕರ ಸಭೆ

ABOUT THE AUTHOR

...view details