ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ತಮ್ಮ ಹುಟ್ಟೂರು ಚೆಕ್ಕೆರೆ ಗ್ರಾಮವನ್ನೇ ಅಭಿವೃದ್ಧಿ ಮಾಡಿಲ್ಲ, ಇನ್ನು ಇಡೀ ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಅಭ್ಯರ್ಥಿಯ ಹುಟ್ಟೂರು ಚೆಕ್ಕೆರೆ ಗ್ರಾಮದಲ್ಲಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪ್ರಚಾರ ಭಾಷಣ ಮಾಡಿದ ಹೆಚ್ಡಿಕೆ, ಆ ವ್ಯಕ್ತಿ ಹುಟ್ಟಿದ ಊರನ್ನೇ ಯಾವ ರೀತಿ ಇಟ್ಟುಕೊಂಡಿದ್ದರು ಎಂಬುದನ್ನು ನೋಡಿದ್ದೀರಿ. ನಾವು ಎಷ್ಟು ಅಭಿವೃದ್ಧಿ ಮಾಡಿದ್ದೇವೆ ನೋಡಲಿ. ಎಲ್ಲವೂ ಜನರ ಕಣ್ಣು ಮುಂದೆಯೇ ಇದೆ. ಹಿಂದೆ ಇದೇ ವ್ಯಕ್ತಿ ಡಿಕೆ ಸಹೋದರರನ್ನು ಬೈದುಕೊಂಡು ಓಡಾಡಿದ್ದರು. ಈಗ ಅವರನ್ನೇ ತಬ್ಬಿಕೊಂಡಿದ್ದಾರೆ. ನನ್ನನ್ನು ರಾಮನಗರಕ್ಕೆ ಹೊರಗಿನವನು ಎನ್ನುತ್ತಿದ್ದಾರೆ. ನಾನು ಹುಟ್ಟಿದ್ದು ಹಾಸನದಲ್ಲಿ, ಬೆಳೆಸಿದ್ದು ರಾಮನಗರ ಜಿಲ್ಲೆಯ ಜನ. ನಾನು ಕೊನೆಗೆ ಭೂಮಿಗೆ ಹೋಗೋದು ಈ ಮಣ್ಣಿನಲ್ಲೇ ಎಂದು ಕೇಂದ್ರ ಸಚಿವರು ಭಾವುಕರಾದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ ಕೇಳುತ್ತಿರುವ ಆ ವ್ಯಕ್ತಿ ಈ ತಾಲೂಕಿಗೆ 20 ವರ್ಷ ಶಾಸಕರಾಗಿ ಏನು ಮಾಡಿದ್ದಾರೆ? ದಾಖಲೆಗಳಿವೆ, ಪರಿಶೀಲನೆ ಮಾಡಿ. ನಾನು ಐದು ವರ್ಷದಲ್ಲಿ ಏನು ಮಾಡಿದ್ದೇನೆ ಎಂಬುದು ನಿಮ್ಮ ಕಣ್ಣ ಮುಂದೆಯೇ ಇದೆ. ನೀವು ಯಾರಿಗೂ ಹೆದರದೇ ಚುನಾವಣೆ ಮಾಡಿ. ಈಗ ಕಾಂಗ್ರೆಸ್ನಲ್ಲಿರುವ ಅಭ್ಯರ್ಥಿ ಚುನಾವಣೆ ಬಳಿಕ ಎಲ್ಲಿ ಹೋಗುತ್ತಾರೋ ಗೊತ್ತಿಲ್ಲ? ರಾಮನಗರಲ್ಲಿ ಕೂಪನ್ ಹಂಚಿಕೊಂಡು ಚುನಾವಣೆ ಮಾಡಿದರು. ಚನ್ನಪಟ್ಟಣದಲ್ಲೂ ಆ ಕೆಲಸ ಆಗುತ್ತದೆ. ಎಲ್ಲರೂ ಎಚ್ಚರಿಕೆಯಿಂದ ಮತ ನೀಡಿ ಎಂದು ಕೇಂದ್ರ ಸಚಿವರು ಮನವಿ ಮಾಡಿದರು.
ಜೆಡಿಎಸ್ನಿಂದ ಸ್ಪರ್ಧೆ ಮಾಡಿ ಅಂತ ಆ ಅಭ್ಯರ್ಥಿಗೆ ಹೇಳಿದ್ದೆವು. ಆ ಬಳಿಕ ಅವರು ಬಿಜೆಪಿಯಲ್ಲಿ ನಿಲ್ಲಬೇಕು ಎಂದು ಹಠ ಮಾಡಿದರು. ಅದಕ್ಕೂ ನಾನು ಒಪ್ಪಿಗೆ ಕೊಟ್ಟೆ. ಆದರೆ, ಹೇಳದೆ ಕೇಳದೆ ಬಿಜೆಪಿ ನಾಯಕರಿಗೂ ಟೋಪಿ ಹಾಕಿ ಕಾಂಗ್ರೆಸ್ ಸೇರಿದ್ದಾರೆ. ಈಗ ಚುನಾವಣೆಯಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಕುಮಾರಸ್ವಾಮಿ ಪ್ರಚಾರಕ್ಕೆ ಬಿಜೆಪಿ ರಾಜ್ಯ ನಾಯಕರು ಸಾಥ್ ನೀಡಿದರು. ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ, ಮಾಜಿ ಸಚಿವ ಸಿ.ಟಿ.ರವಿ, ಸಂಸದ ಡಾ.ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ರಮೇಶ್ ಮುಂತಾದವರು ಇದ್ದರು.