ಬೆಂಗಳೂರು: ಮೈಸೂರು ಅರಸರು ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯಿಂದ ಹೆಚ್ಎಂಟಿ ಕಾರ್ಖಾನೆ ಸ್ಥಾಪನೆಯಾಗಿದೆ. ಒಂದು ಕಾಲದಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಅನನ್ಯ ಕೊಡುಗೆ ನೀಡಿದ್ದ ಈ ಕಾರ್ಖಾನೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲ ಮಹತ್ವದ ಹೆಜ್ಜೆಗಳನ್ನು ಇಡಲಾಗಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಜಾಲಹಳ್ಳಿಯಲ್ಲಿರುವ ಹೆಚ್ಎಂಟಿ ಕಾರ್ಖಾನೆಯ ಟೂಲ್ಸ್ ಮತ್ತು ಮಶೀನ್ ವಿಭಾಗಕ್ಕೆ ಇಂದು ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ದೆಹಲಿಯ ಸಚಿವಾಲಯದ ಕಚೇರಿಯಲ್ಲಿ ಈ ಕಾರ್ಖಾನೆಯ ಪುನರುದ್ಧಾರದ ಬಗ್ಗೆ ಅನೇಕ ಸಭೆಗಳು ಆಗಿವೆ. ಎಲ್ಲಾ ಸಾಧಕ ಬಾಧಕಗಳ ಬಗ್ಗೆ ಸಮಾಲೋಚನೆ ನಡೆದಿದೆ ಎಂದು ತಿಳಿಸಿದರು.
ಕಾರ್ಖಾನೆ ಉಳಿಸುವ ವಿಚಾರದಲ್ಲಿ ನಾನು ರಾಜಿ ಆಗಲ್ಲ, ಅದಕ್ಕೆ ಅಗತ್ಯ ಸಲಹೆ ಪಡೆಯಲು ಒಂದು ಸಲಹಾ ಸಂಸ್ಥೆಯನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಚಿಂತನೆ ಮಾಡಲಾಗಿದೆ. ನೀತಿ ಆಯೋಗದ ಜತೆಯೂ ಸಮಾಲೋಚನೆ ನಡೆಸುತ್ತಿದ್ದೇನೆ. ಒಳ್ಳೆಯ ದಿನ ಬರಬಹುದು. ಆಶಾವಾದಿಗಳಾಗಿರಿ ಎಂದು ಕಾರ್ಮಿಕರಿಗೆ ಭರವಸೆ ನೀಡಿದರು.
ಮೂರು ನಾಲ್ಕು ತಿಂಗಳು ಅವಕಾಶ ಕೊಡಿ. ಎಲ್ಲಾ ಹಂತಗಳಲ್ಲಿಯೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಪ್ರಯತ್ನಗಳು ಯಶಸ್ವಿ ಆಗಬಹುದು. ಪ್ರಧಾನಮಂತ್ರಿಗಳು ಕೈಗಾರಿಕೆಗಳ ಅಭಿವೃದ್ಧಿ ಬಗ್ಗೆ ಸ್ಪಷ್ಟ ದೂರದೃಷ್ಟಿ ಹೊಂದಿದ್ದಾರೆ. ಕಾಯಿರಿ ಎಂದು ಅವರು ಹೇಳಿದರು.