ಕರ್ನಾಟಕ

karnataka

ETV Bharat / state

ಬೆಂಗಳೂರು ವಿವಿ ಬಿಕಾಂ ಪರೀಕ್ಷೆಗಳಿಗೆ ದಿನಾಂಕ ಮರು ನಿಗದಿ ಮಾಡಿದ್ದ ಆದೇಶಕ್ಕೆ ದ್ವಿಸದಸ್ಯ ಪೀಠದಿಂದ ತಡೆಯಾಜ್ಞೆ - HC STAY ON ORDER

ಏಕ ಸದಸ್ಯ ಪೀಠದ ಬಿಕಾಂ ಪರೀಕ್ಷೆ ಮುಂದೂಡಿದ್ದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯ ಮಾಪನ ವಿಭಾಗದ ರಿಜಿಸ್ಟ್ರಾರ್ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್‌
ಹೈಕೋರ್ಟ್‌ (ETV Bharat)

By ETV Bharat Karnataka Team

Published : Jan 12, 2025, 2:50 PM IST

ಬೆಂಗಳೂರು:ಚಾರ್ಟ್‌ಡ್ ಅಕೌಂಟೆಂಟ್(ಸಿಎ) ಫೌಂಡೇಷನ್ ಕೋರ್ಸ್‌ಗ ಪರೀಕ್ಷೆ ಮತ್ತು ಸಿಎ ಮಧ್ಯಂತರ ಪರೀಕ್ಷೆಗೆ ಅಡ್ಡಿಯಾಗಲಿದೆ ಎಂದು ಸೋಮವಾರದಿಂದ (ಜನವರಿ 13) ನಡೆಯಬೇಕಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯ ಅಧೀನದ ಕಾಲೇಜುಗಳಲ್ಲಿ ಬಿಕಾಂ ಮೊದಲನೇ, ಮೂರನೇ ಮತ್ತು ಐದನೇ ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ಮುಂದೂಡಿ ಮರು ದಿನಾಂಕ ನಿಗದಿ ಪಡಿಸುವಂತೆ ಸೂಚಿಸಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ಹೈಕೋರ್ಟ್‌ನ ದ್ವಿಸದಸ್ಯ ಪೀಠ ತಡೆ ನೀಡಿ ಆದೇಶ ಹೊರಡಿಸಿದೆ.

ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯ ಮಾಪನ ವಿಭಾಗದ ರಿಜಿಸ್ಟ್ರಾರ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಭಾನುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ಎಂ. ಐ. ಅರುಣ್ ಅವರಿದ್ದ ವಿಶೇಷ ನ್ಯಾಯಪೀಠ ಈ ಆದೇಶ ನೀಡಿದೆ. ಈ ಆದೇಶದಿಂದ ನಾಳೆಯಿಂದ ನಡೆಯಬೇಕಿರುವ ಬಿಕಾಂ ಪರೀಕ್ಷೆಗಳಿಗೆ ಹಾದಿ ಸುಗಮವಾದಂತಾಗಿದೆ.

ಅಲ್ಲದೆ, ಬಿಕಾಂ ಮತ್ತು ಚಾರ್ಟ್‌ಡ್ ಅಕೌಂಟೆಂಟ್ ಪರೀಕ್ಷೆಗಳು ಏಕ ಕಾಲದಲ್ಲಿ ದಿನಾಂಕ ನಿಗದಿಯಾಗಿದೆ. ಆದರೆ, ಐದು ಜನ ವಿದ್ಯಾರ್ಥಿಗಳು ಮಾತ್ರ ಬಿಕಾಂ ಪರೀಕ್ಷೆಗಳ ದಿನಾಂಕ ಮರು ನಿಗದಿಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಅನುಮತಿಸಿದರೆ ಬಿಕಾಂ ಪರೀಕ್ಷೆಗಳನ್ನು ಬರೆಯುತ್ತಿರುವ ಸುಮಾರು 35 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಪರೀಕ್ಷಾ ವೇಳಾ ಪಟ್ಟಿಗಳನ್ನು ನಿಗದಿ ಪಡಿಸುವುದು ಸಂಪೂರ್ಣ ವಿಶ್ವವಿದ್ಯಾಲಯದ ವಿವೇಚನೆಗೆ ಬಿಟ್ಟಿದ್ದಾಗಿದೆ. ಈ ವಿಚಾರದಲ್ಲಿ ಸಾಂವಿಧಾನಿಕ ನ್ಯಾಯಾಲಯಗಳು ಪರಿಗಣಿಸುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಐವರು ವಿದ್ಯಾರ್ಥಿಗಳ ಕೋರಿಕೆಯನ್ನು ಪರಿಗಣಿಸಲಾಗುವುದಿಲ್ಲ. ಏಕ ಸದಸ್ಯ ಪೀಠದ ಆದೇಶಕ್ಕೆ ಮಧ್ಯಂತರ ತಡೆ ನೀಡುತ್ತಿದ್ದು, ನಿಗದಿಯಂತೆ ಪರೀಕ್ಷೆಗಳು ನಡೆಯಲಿವೆ ಎಂದು ಪೀಠ ಹೇಳಿದೆ.

ಈ ಸಂಬಂಧ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಎರಡೂ ಪರೀಕ್ಷೆಗಳಿಗೆ ಹಾಜರಾಗಬೇಕಾಗಿರುವುದು ಸಂವಿಧಾನ ಪರಿಚ್ಛೇದ 21 ಎ ಅಡಿಯಲ್ಲಿ ವಿದ್ಯಾರ್ಥಿಗಳ ಹಕ್ಕಾಗಿದೆ. ಆದರೆ, ಬಿಕಾಂ ಮತ್ತು ಸಿಎ ಪರೀಕ್ಷೆಗಳೆರಡನ್ನೂ ಒಂದೇ ದಿನಾಂಕದಂದು ನಡೆಸುತ್ತಿರುವುದರಿಂದ ಎರಡೂ ಪರೀಕ್ಷೆಗಳಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳ ಹಕ್ಕನ್ನು ಬೆಂಗಳೂರು ವಿವಿ ಮೊಟಕುಗೊಳಿಸಲಿದೆ. ಅಲ್ಲದೆ, ವಿದ್ಯಾರ್ಥಿಗಳ ಮೂಲಕ ಮೂಲಭೂತ ಹಕ್ಕನ್ನು ಮೊಟುಕುಗೊಳಿಸಲಿದೆ ಎಂದು ತಿಳಿಸಿದ್ದ ಏಕ ಸದಸ್ಯಪೀಠ, ಪರೀಕ್ಷೆಗಳ ದಿನಾಂಕವನ್ನು ಮರು ನಿಗದಿ ಮಾಡುವಂತೆ ಸೂಚನೆ ನೀಡಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ವಿವಿ ಹೈಕೋರ್ಟ್​ನ ದ್ವಿಸದಸ್ಯ ಪೀಠದ ಮುಂದೆ ಅರ್ಜಿ ಸಲ್ಲಿಸಿತ್ತು.

ಇದನ್ನೂ ಓದಿ:ಬಿಪಿಎಸ್​ಸಿ ಪರೀಕ್ಷೆ ಅವ್ಯವಹಾರ: ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡ ಪ್ರಶಾಂತ್ ಕಿಶೋರ್ ಬಂಧನ

ABOUT THE AUTHOR

...view details