ಬೆಂಗಳೂರು: ನಟ ಧ್ರುವ ಸರ್ಜಾ ಮುಖ್ಯಭೂಮಿಕೆಯ 'ಮಾರ್ಟಿನ್' ಚಿತ್ರದಲ್ಲಿ ನಿರ್ದೇಶಕ ಎ.ಪಿ.ಅರ್ಜುನ್ ಹೆಸರನ್ನು ಬಿಟ್ಟು ಪ್ರಚಾರ ಮಾಡದಂತೆ ಹೈಕೋರ್ಟ್ ಚಿತ್ರ ನಿರ್ಮಾಣ ಸಂಸ್ಥೆಗೆ ಆದೇಶಿಸಿದೆ.
ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿದೆ. ನಿರ್ಮಾಪಕ ಮತ್ತು ನಿರ್ದೇಶಕನ ನಡುವೆ ಗೊಂದಲ ಉಂಟಾಗಿ, ತಮ್ಮ ನಡುವಿನ ಒಪ್ಪಂದ ರದ್ದಾಗಿತ್ತು. ಈ ನಡುವೆ 'ಎ.ಪಿ.ಅರ್ಜುನ್ ಸಿನಿಮಾ' ಎನ್ನುವ ಟ್ಯಾಗ್‌ಲೈನ್ ಅನ್ನು ಸಹ ತೆಗೆದು ಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ನಿರ್ದೇಶಕ ಎ.ಪಿ.ಅರ್ಜುನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಟಕುಮಾರ್ ಮತ್ತು ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ರಜಾಕಾಲದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಇದರೊಂದಿಗೆ ನಿರ್ದೇಶಕರಿಗೆ ತಾತ್ಕಾಲಿಕ ಜಯ ಸಿಕ್ಕಂತಾಗಿದೆ.
ನಿರ್ದೇಶಕ ಅರ್ಜುನ್ ಹೆಸರು ಕೈಬಿಟ್ಟು ಪ್ರಚಾರ ಮಾಡಬಾರದು, ಪ್ರಚಾರದಲ್ಲಿ ಅವರ ಹೆಸರು ಇರಬೇಕು ಎಂದು ನಿರ್ಮಾಪಕ ಉದಯ್ ಮೆಹ್ತಾ, ವಾಸವಿ ಎಂಟರ್ಪ್ರೈಸಸ್ಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ:ಆಕಸ್ಮಿಕ ಗುಂಡೇಟು; ನಟ ಗೋವಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್ - Actor Govinda Discharged
ವಿಚಾರಣೆ ವೇಳೆ ನಿರ್ದೇಶಕ ಅರ್ಜುನ್ ಪರ ವಕೀಲರು, ''ಈ ಚಿತ್ರದ ನಿರ್ದೇಶಕನಾದರೂ ಕೂಡಾ ನನ್ನ ಕಕ್ಷಿದಾರರ ಹೆಸರನ್ನು ಕೈಬಿಟ್ಟು ಚಿತ್ರದ ಪ್ರಚಾರ ಮಾಡಲಾಗುತ್ತಿದೆ. ಸಿನಿಮಾಗೆ ಸಂಬಂಧಿಸಿದ ಒಪ್ಪಂದಗಳನ್ನು ನಿರ್ಮಾಪಕರು ಪಾಲಿಸಿಲ್ಲ. ನಿರ್ದೇಶಕರ ಹೆಸರು ಕೈಬಿಟ್ಟು ಚಿತ್ರ ಬಿಡುಗಡೆ ಮಾಡದಂತೆ ನಿರ್ಬಂಧ ಹೇರಬೇಕು'' ಎಂದು ಕೋರಿದರು. ಜೊತೆಗೆ, ಚಲನಚಿತ್ರ ನಿರ್ಮಾಣದಲ್ಲಿ ನಿರ್ದೇಶಕರ ಪಾತ್ರ ಮಹತ್ವದ್ದು. ನಿರ್ದೇಶಕರ ಹೆಸರನ್ನೇ ಕೈಬಿಟ್ಟು ಸಿನಿಮಾ ಪ್ರಚಾರ ಮಾಡದಂತೆ ಆದೇಶಿಸಬೇಕು ಎಂದು ಮನವಿ ಮಾಡಿದರು.