ಹಾವೇರಿ:ಮಳೆಗೆ ಹಾವೇರಿ ತಾಲೂಕಾಡಳಿತ ಸೌಧ ಸೋರುತ್ತಿದೆ ಎಂಬ ದೂರುಗಳು ಪದೇ ಪದೇ ಕೇಳಿಬರುತ್ತಿವೆ. ಕಟ್ಟಡದಲ್ಲಿ ಆರಕ್ಕೂ ಹೆಚ್ಚು ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಈ ಕಚೇರಿಗಳು ಮಳೆಗಾಲದಲ್ಲಿ ಸೋರುತ್ತಿದ್ದು ಸಾರ್ವಜನಿಕರು, ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಮಹತ್ವದ ದಾಖಲೆಗಳು ಈ ಕಚೇರಿಗಳಲ್ಲಿದ್ದು ಮಳೆ ನೀರಿನಿಂದ ಹಾಳಾಗುತ್ತಿವೆ.
ಹಲವು ಬಾರಿ ತಾಲೂಕಾಡಳಿತ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಳೆ ನೀರಿನಿಂದ ತೊಟ್ಟಿಕ್ಕುವ ಕಚೇರಿಯಲ್ಲಿ ಸಿಬ್ಬಂದಿ ಗೋಣಿಚೀಲ, ಬಕೆಟ್, ಪ್ಲಾಸ್ಟಿಕ್ ಡಬ್ಬ ಸೇರಿದಂತೆ ವಿವಿಧ ವಸ್ತುಗಳನ್ನು ಹಾಕಿ ಒದ್ದೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಜನರು ತಲೆ ಮೇಲೆ ಕೈ ಇಟ್ಟುಕೊಂಡು ಓಡಾಡುವ ಪರಿಸ್ಥಿತಿ ಇದೆ.
ಈ ಕುರಿತಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ತೀವ್ರ ತರಾಟೆಗೂ ತೆಗೆದುಕೊಂಡಿದ್ದರು. ಹೀಗಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಕಾರಣ ತಾಲೂಕಾಡಳಿತ ಸೌಧ ಸೋರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ತಾಲೂಕಾಡಳಿತ ಸೌಧಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಹಾವೇರಿ ಶಾಸಕ, ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ ಸೋಮವಾರ ಸೌಧಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೊಟ್ಟಿಕ್ಕುವ ಕೊಠಡಿಗಳಿಗೆ ತೆರಳಿ ಸಾರ್ವಜನಿಕರು ಹಾಗು ಸಿಬ್ಬಂದಿಯಿಂದ ಮಾಹಿತಿ ಪಡೆದರು.