ಕರ್ನಾಟಕ

karnataka

ETV Bharat / state

ಹಾಸನ ಲೋಕಸಭಾ ಫಲಿತಾಂಶದ ಮೇಲೆ ದೇಶದ ಕಣ್ಣು: ವಿವಾದದ ಮಧ್ಯೆ ಗೆಲ್ತಾರಾ ಪ್ರಜ್ವಲ್ ರೇವಣ್ಣ? - Prajwal Revanna - PRAJWAL REVANNA

ಲೋಕಸಭೆ ಚುನಾವಣೆಯ ಮಧ್ಯೆ ಹಾಸನ ಪೆನ್‌ಡ್ರೈವ್ ಪ್ರಕರಣ ದೇಶಾದ್ಯಂತ ಸದ್ದು ಮಾಡಿತು. ಇದೀಗ ಫಲಿತಾಂಶದ ಮೇಲೂ ಪ್ರಕರಣ ಪರಿಣಾಮ ಬೀರುತ್ತಾ ಎಂಬುದು ಸದ್ಯದ ಪ್ರಶ್ನೆ. ಇದಕ್ಕೆ ನಾಳೆ ಮತದಾರ ಉತ್ತರ ಕೊಡಲಿದ್ದಾನೆ.

ಹಾಸನ ಲೋಕಸಭಾ ಫಲಿತಾಂಶದ ಮೇಲೆ ದೇಶದ ಕಣ್ಣು
ಪ್ರಜ್ವಲ್ ರೇವಣ್ಣ VS ಶ್ರೇಯಸ್ ಪಟೇಲ್ (ETV Bharat)

By ETV Bharat Karnataka Team

Published : Jun 3, 2024, 4:17 PM IST

Updated : Jun 3, 2024, 4:48 PM IST

ಹಾಸನ:ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ಸಂದರ್ಭದಲ್ಲಿ ಹಾಸನದಲ್ಲಿ ಏನಾಗಲಿದೆ ಎಂಬ ಕುತೂಹಲ ಮತದಾರರಲ್ಲಿ ಹೆಚ್ಚಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಎರಡನೇ ಬಾರಿ ಕಣದಲ್ಲಿದ್ದರೆ, ಕಾಂಗ್ರೆಸ್​ನಿಂದ ಎಂ.ಶ್ರೇಯಸ್ ಪಟೇಲ್ ಇವರಿಗೆ ಪ್ರತಿಸ್ಪರ್ಧಿಯಾಗಿದ್ದಾರೆ.

ಹಾಸನ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರ ತವರು ಕ್ಷೇತ್ರ. ದೇವೇಗೌಡರ ಕುಟುಂಬಕ್ಕೆ ರಾಜಕೀಯ ನೆಲೆ ಒದಗಿಸಿದ ಕ್ಷೇತ್ರವೂ ಹೌದು. ಹಾಸನದ ಚುನಾವಣೆ ಎಂದರೆ ಅದು ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಪೈಪೋಟಿ. ಏಪ್ರಿಲ್ 26ರಂದು ನಡೆದ ಚುನಾವಣೆಯಲ್ಲಿ ಹಾಸನದಲ್ಲಿ ಈ ಬಾರಿ ಶೇ 77.68ರಷ್ಟು ಮತದಾನವಾಗಿದೆ. ಕ್ಷೇತ್ರ ವ್ಯಾಪ್ತಿಗೆ ಹಾಸನ ಜಿಲ್ಲೆಯ 7 ವಿಧಾನಸಭಾ ಮತ್ತು ಚಿಕ್ಕಮಗಳೂರಿನ ಕಡೂರು ಸೇರಿ 8 ವಿಧಾನಸಭಾ ಕ್ಷೇತ್ರಗಳು ಸೇರುತ್ತವೆ. ಇದರಲ್ಲಿ ನಾಲ್ಕು ಕಡೆ ಜೆಡಿಎಸ್ ಶಾಸಕರು ಮತ್ತು ಬಿಜೆಪಿ, ಕಾಂಗ್ರೆಸ್ ತಲಾ​ ಎರಡು ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿದೆ.

ಪೆನ್​ ಡ್ರೈವ್ ಎಫೆಕ್ಟ್ ಹೇಗಿರಲಿದೆ?: ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯದ ಪ್ರಕರಣ ಚುನಾವಣೆಗೂ ಮುನ್ನ ಸಾರ್ವಜನಿಕವಾಗಿ ಮುನ್ನೆಲೆಗೆ ಬಂದಿರಲಿಲ್ಲ. ಆದರೆ ಪ್ರಜ್ವಲ್ ಅವರನ್ನು ಮೈತ್ರಿಕೂಟದಿಂದ ಬದಲಿಸಿ ಬೇರೆ ಅಭ್ಯರ್ಥಿ ಕಣಕ್ಕಿಳಿಸಬೇಕು ಎನ್ನುವ ಚರ್ಚೆಗಳು ನಡೆದಿದ್ದವು. ಆದರೆ ಅದಕ್ಕೆ ಅವಕಾಶ ನೀಡದೇ ಪ್ರಜ್ವಲ್ ಅವರನ್ನೇ ರೇವಣ್ಣ ಕುಟುಂಬ ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿತ್ತು. ಮತದಾನಕ್ಕೆ ಕೆಲವೇ ದಿನ ಬಾಕಿ ಇರುವಾಗ ಹಾಸನದಲ್ಲಿ ಪೆನ್​ಡ್ರೈವ್ ಹರಿದಾಡಿವೆ. ಆದರೆ ಮತದಾನ ನಡೆದ ಮರುದಿನದಿಂದಲೇ ಇದು ತೀವ್ರ ಸ್ವರೂಪ ಪಡೆದಿತ್ತು. ಇದರ ನಡುವೆಯೇ ಪ್ರಜ್ವಲ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದು ಕ್ಷೇತ್ರದಲ್ಲಿ ಏನಾಗಬಹುದು ಎನ್ನುವುದು ಸದ್ಯದ ಪ್ರಶ್ನೆ.

ಇದನ್ನೂ ಓದಿ:ತುಮಕೂರು: ಸ್ಥಳೀಯ V/S ವಲಸಿಗ ಹಣಾಹಣಿಯಲ್ಲಿ ಗೆಲ್ಲೋರ್‍ಯಾರು?, ಸೋಲೋರ್‍ಯಾರು? - Tumakuru Lok Sabha Constituency

ಸಮೀಕ್ಷೆಗಳಲ್ಲಿ ಪ್ರಜ್ವಲ್‌ ಮೇಲುಗೈ:ಹಲವು ಖಾಸಗಿ ವಾಹಿನಿಗಳು ಮತ್ತು ಸುದ್ದಿಸಂಸ್ಥೆಗಳು ಪ್ರಕಟಿಸಿರುವ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಹಾಸನದಲ್ಲಿ ಎನ್​​ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಗೆಲ್ಲಬಹುದು. ಸಾಕಷ್ಟು ವಿವಾದ, ರಾಜಕೀಯ ಸವಾಲುಗಳ ನಡುವೆಯೇ ಗೆಲುವು ಸಾಧಿಸಬಹುದು ಎಂದು ಭವಿಷ್ಯ ನುಡಿದಿರುವುದು ಕುತೂಹಲ ಮೂಡಿಸಿದೆ. ಜೆಡಿಎಸ್ ಪ್ರಭಾವದ ಜೊತೆಗೆ ಬಿಜೆಪಿಯ ಬಲವೂ ಸೇರಿದ್ದು, ಮೈತ್ರಿಕೂಟಕ್ಕೆ ಗೆಲುವು ಎಂಬುದು ಸದ್ಯದ ಜನರ ಅಭಿಪ್ರಾಯ.

5 ಬಾರಿ ದೇವೇಗೌಡರಿಗೆ ಜಯ:ಹಾಸನ ಲೋಕಸಭಾ ಕ್ಷೇತ್ರದಿಂದ 5 ಬಾರಿ ಹೆಚ್.ಡಿ.ದೇವೇಗೌಡರು ಆಯ್ಕೆಯಾಗಿದ್ದರು. 2019ರ ಚುನಾವಣೆಯಲ್ಲಿ ಅವರು ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟರು. ಮೊದಲ ಚುನಾವಣೆಯಲ್ಲಿಯೇ ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ಬೆಂಬಲವನ್ನು ಪಡೆದು, ಸಂಸತ್ ಪ್ರವೇಶ ಮಾಡಿದ್ದರು.

2019ರ ಚುನಾವಣೆಯಲ್ಲಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಆಗ ಮೊದಲ ಚುನಾವಣೆ ಎದುರಿಸಿದ್ದ ಪ್ರಜ್ವಲ್ ರೇವಣ್ಣ 6,76,606 ಮತಗಳನ್ನು ಪಡೆದಿದ್ದು, 1,41,224 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಎದುರಾಳಿಯಾಗಿದ್ದ ಬಿಜೆಪಿಯ ಎ.ಮಂಜು 5,35,282 ಮತಗಳನ್ನು ಪಡೆದು ಸೋಲುಂಡಿದ್ದರು. ಈ ಬಾರಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ಕಣದಲ್ಲಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಎಂ.ಶ್ರೇಯಸ್ ಪಟೇಲ್ ಅವರು ಜಿ.ಪುಟ್ಟಸ್ವಾಮಿಗೌಡ ಮೊಮ್ಮಗ. ಪುಟ್ಟಸ್ವಾಮಿಗೌಡರು 1985ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದರು. 1989, 1999ರ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದ್ದರು. ಇನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಶ್ರೇಯಸ್ ಪಟೇಲ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪರಾಭವಗೊಂಡಿದ್ದರು. ಈಗ ಅವರ ಮಗನ ವಿರುದ್ಧ ಲೋಕ ಸಮರಕ್ಕಿಳಿದಿದ್ದಾರೆ.

ಇದನ್ನೂ ಓದಿ: ಜೋಶಿ ವರ್ಸಸ್ ಅಸೂಟಿ: ಯಾರಿಗೆ ಸಿಗುತ್ತೆ 'ಧಾರವಾಡ ಪೇಢಾ'? - Dharwad Lok Sabha Constituency

Last Updated : Jun 3, 2024, 4:48 PM IST

ABOUT THE AUTHOR

...view details