ಹಾಸನ: ಇಲ್ಲಿಗೆ ಐಐಟಿ ತರಲು ದೇವೇಗೌಡರು ಕಳೆದ 20 ವರ್ಷದಿಂದ ಹೋರಾಟ ಮಾಡುತ್ತಿದ್ದು, ಅವರ ಆಸೆಯನ್ನು ಭಗವಂತ ಈಡೇರಿಸುತ್ತಾನೆ. ಮತ್ತು ಸದ್ಯದಲ್ಲೇ ಹಾಸನ ವಿಮಾನ ನಿಲ್ದಾಣದ ಕಾಮಗಾರಿ ವೇಗ ಪಡೆದುಕೊಳ್ಳಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ನಗರದ ಹೊರವಲಯದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬೃಹತ್ ಜೆಡಿಎಸ್ ಸಂಘಟನಾ ಸಮಾವೇಶ ಮಾಡುವ ಬಗ್ಗೆ ಹೆಚ್.ಡಿ.ದೇವೇಗೌಡರು ಹೇಳಿಕೆ ನೀಡಿರುವ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಪಕ್ಷ ಸಂಘಟನೆಯ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ನಾನೇ ಖುದ್ದು ಜವಾಬ್ದಾರಿ ತೆಗೆದುಕೊಳ್ಳಬೇಕಾಗಿದೆ. ಸದ್ಯ ಸಂಘಟನೆಯ ಜವಾಬ್ದಾರಿಯನ್ನು ರಾಷ್ಟ್ರೀಯ ಅಧ್ಯಕ್ಷರೇ ವಹಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಸಚಿವನದ ಬಳಿಕ ನನಗೆ ಬಿಡುವಿಲ್ಲದ ಕಾರ್ಯಕ್ರಮಗಳಿಂದಾಗಿ ದೇವೇಗೌಡರೇ ಪಕ್ಷದ ಶಾಸಕರು, ಮಾಜಿ ಶಾಸಕರು, ಕಾರ್ಯಕರ್ತರು ಜೊತೆಗೂಡಿ ಸಂಘಟನೆಗೆ ತೀರ್ಮಾನ ಮಾಡಿದ್ದಾರೆ ಎಂದರು.
ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುತ್ತೇನೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ, ಅವರು ಯಾವ ಅಭಿವೃದ್ಧಿ ಮಾಡಿದ್ದಾರೆ? ಅಭಿವೃದ್ಧಿ ಮಾಡಿರುವವನು ಇಲ್ಲಿದ್ದೀನಿ. ನಾನು ರಾಮನಗರಕ್ಕೆ ಹೋಗುವ ಮುಂಚೆ ಹೇಗಿತ್ತು? ಕನಕಪುರ ಹೇಗಿತ್ತು? ಇವತ್ತು ಯಾವ ಮಟ್ಟಕ್ಕೆ ಬೆಳೆದಿದೆ, ಕಾರಣ ಯಾರು?. ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಸಾಕ್ಷಿ ಗುಡ್ಡೆ ಕೇಳ್ತಾರೆ, ನಾನಂತೂ ದೊಡ್ಡಮಟ್ಟದ ಸಾಕ್ಷಿ ಗುಡ್ಡೆ ಇಟ್ಟುಕೊಂಡಿಲ್ಲ. ಕಷ್ಟಪಟ್ಟು 45 ಎಕರೆ ಖರೀದಿ ಮಾಡಿದ್ದೆ ಅದನ್ನು ಬಿಡ್ತಿಲ್ಲ. ಅದನ್ನು ಲಪಟಾಯಿಸಲು ಮುಂದಾಗಿದ್ದಾರೆ. ಇಲ್ಲಿಯವರ ಕೈಯಲ್ಲಿ ಆಗಲ್ಲ. ನಿನ್ನೆ ನನಗೆ ನೋಟಿಸ್ ಕೊಡದೇ ದಾಳಿ ಮಾಡಲು ಬಂದಿದ್ದರು. ನನ್ನ ಭೂಮಿ ಸರ್ವೇ ಮಾಡುವುದಾದರೆ ನೋಟಿಸ್ ಕೊಡಿ. ಅಂತಾರಾಷ್ಟ್ರೀಯ ಸರ್ವೇಯರ್ ಕರೆದುಕೊಂಡು ಬನ್ನಿ ಎಂದು ಸವಾಲು ಹಾಕಿದರು.
ಎಷ್ಟು ದಿನ ಆಟ ಆಡ್ತೀರಾ, ಆಡಿ. ತನಿಖೆ ಮಾಡಲು ಎಸ್ಐಟಿ ಬರಲಿ. ನಾನೇನು ತನಿಖೆ ಮಾಡಬೇಡಿ ಅಂತ ಹೇಳ್ತಿಲ್ಲ. ಯಾವುದಾದರೂ ಕಾನೂನುಬಾಹಿರವಾಗಿದ್ದರೆ ಬೆಳಿಗ್ಗೆನೇ ತೆಗೆದುಕೊಂಡು ಹೋಗಿ. ನನ್ನದು ಯಾವ ತಕರಾರಿಲ್ಲ, ಕಾನೂನಿನ ಪ್ರಕಾರ ಮಾಡಿ ಎಂದು ತಿಳಿಸಿದರು.