ಮಂಡ್ಯ: ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿವಾದ ತಾರಕಕ್ಕೇರಿದ್ದು, ಇಂದು ರಾಜ್ಯಾದ್ಯಂತ ಹೋರಾಟದ ರೂಪ ಪಡೆದಿದೆ. ಹನುಮ ಧ್ವಜ ತೆರವು ವಿರೋಧಿಸಿ ಬಿಜೆಪಿಯವರು ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದಾರೆ. ಈ ಹಿನ್ನೆಲೆ ಇಂದು ಬೆಳಗ್ಗೆ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಿಂದ ಬಿಜೆಪಿ ಬೃಹತ್ ಪಾದಯಾತ್ರೆ ಆರಂಭಿಸಿದೆ. ಬೆಳಗ್ಗೆ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಹುಲಿವಾನ, ಸಾತನೂರು, ಚಿಕ್ಕಮಂಡ್ಯ ಮಾರ್ಗವಾಗಿ ಮಂಡ್ಯದ ಶ್ರೀ ಕಾಳಿಕಾಂಭ ದೇವಾಲಯಕ್ಕೆ ಈ ಪಾದಯಾತ್ರೆ ಸಾಗಲಿದೆ. ಬಳಿಕ ಕಾಳಿಕಾಂಭ ದೇವಾಲಯದಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ಮುಂದುವರೆಯಲಿದೆ. ಬಿಜೆಪಿ ಹೋರಾಟಕ್ಕೆ ಜೆಡಿಎಸ್ ನಾಯಕರು ಕೂಡ ಕೈಜೋಡಿಸಿದ್ದು, ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಮಧ್ಯೆ ಜೆಡಿಎಸ್ ಹಾಗೂ ಬಿಜೆಪಿ ರಾಜ್ಯ ನಾಯಕರು ಕೂಡ ಪಾದಯಾತ್ರೆಗೆ ಸೇರಿಕೊಳ್ಳಲಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಸಿ ಟಿ ರವಿ ಹಾಗೂ ಶಾಸಕ ಜನಾರ್ದನ ರೆಡ್ಡಿ ಭಾಗಿಯಾಗಲಿದ್ದಾರೆ.