ಕರ್ನಾಟಕ

karnataka

ETV Bharat / state

ಬಾಣಂತಿಯರ ಸಾವಿನ ಪ್ರಕರಣವನ್ನು ನ್ಯಾಯಾಧೀಶರ ಸುಪರ್ದಿಯಲ್ಲಿ ನ್ಯಾಯಾಂಗ ತನಿಖೆಗೆ ವಹಿಸಿ: ಆರ್.ಅಶೋಕ್ ಆಗ್ರಹ - R ASHOK DEMANDS

ಬೆಳಗಾವಿ ಅಧಿವೇಶನದ ವಿಧಾನಸಭೆಯಲ್ಲಿ ಇಂದು ನಿಯಮ 69ರಡಿ ಪ್ರತಿಪಕ್ಷದ ನಾಯಕ ಆರ್.​ ಅಶೋಕ್ ಅವರು ಬಾಣಂತಿಯರ ಸಾವು ಪ್ರಕರಣವನ್ನು ಪ್ರಸ್ತಾಪಿಸಿ, ನ್ಯಾಯಾಂಗ ತನಿಖೆಗೆ ವಹಿಸುವಂತೆ ಒತ್ತಾಯಿಸಿದರು.

Dinesh Gundu Rao, R. Ashok, Priyank Kharge
ದಿನೇಶ್ ಗುಂಡೂರಾವ್, ಆರ್​.ಅಶೋಕ್​, ಪ್ರಿಯಾಂಕ್​ ಖರ್ಗೆ (ETV Bharat)

By ETV Bharat Karnataka Team

Published : 6 hours ago

ಬೆಂಗಳೂರು/ಬೆಳಗಾವಿ: ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಭವಿಸಿರುವ ಬಾಣಂತಿಯರ ಸಾವಿನ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಪ್ರತಿಪಕ್ಷದ ನಾಯಕ ಆರ್.​ ಅಶೋಕ್ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಇಂದು ನಿಯಮ 69ರಡಿ ವಿಷಯ ಪ್ರಸ್ತಾಪಿಸಿದ ಅವರು, "ಬಾಣಂತಿಯರ ಸಾವಿನ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ಸುಪರ್ದಿಯಲ್ಲಿ ನ್ಯಾಯಾಂಗ ತನಿಖೆಗೆ ವಹಿಸಬೇಕು. ಕಳಪೆ ಔಷಧಿ ಪೂರೈಸಿದ ಕಂಪನಿಗಳಿಗೆ ಕಠಿಣ ಕ್ರಮದ ಸಂದೇಶ ನೀಡುವಂತಾಗಬೇಕು. ಈ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು. ಬಾಣಂತಿಯರ ಸಾವಿಗೆ ಬೆಲೆ ಕಟ್ಟಲಾಗದು. ಔಷಧಿ ತಯಾರಿಸುವ ಕಂಪನಿಗಳಿಗೆ ಕಡಿವಾಣ ಹಾಕಲು ಹೊಸ ಕಾಯ್ದೆಯನ್ನು ತನ್ನಿ. ಮೋಸ ಮಾಡುವ ಕಂಪನಿಗಳಿಗೆ ಕಡಿವಾಣ ಹಾಕಿ. ಬಾಣಂತಿಯರಿಗೆ ಬದುಕುವ ಗ್ಯಾರಂಟಿಯನ್ನು ನೀಡಬೇಕು" ಎಂದು ಒತ್ತಾಯಿಸಿದರು.

"ಸರ್ಕಾರಿ ಆಸ್ಪತ್ರೆಗಳ ಮೇಲೆ ಜನರಿಗೆ ನಂಬಿಕೆ, ವಿಶ್ವಾಸ ಮೂಡಿಸುವ ಕೆಲಸವಾಗಬೇಕು" ಎಂದ ಅಶೋಕ್, "ಕರ್ನಾಟಕದಲ್ಲಿ ಬೆಚ್ಚಿ ಬೀಳುವಂತಹ ಬಾಣಂತಿಯರ ಸರಣಿ ಸಾವು, ನವಜಾತ ಶಿಶುಗಳ ಸಾವಿನ ಬಗ್ಗೆ ವರದಿಗಳಾಗಿವೆ. ಬಳ್ಳಾರಿ ಮಾತ್ರವಲ್ಲದೆ ದಾವಣಗೆರೆ, ಚಿತ್ರದುರ್ಗ, ರಾಯಚೂರು, ಬೆಳಗಾವಿಯಲ್ಲೂ ಬಾಣಂತಿಯರ ಸಾವುಗಳು ಸಂಭವಿಸಿವೆ. ಆರೋಗ್ಯ ಇಲಾಖೆ, ರೋಗಪೀಡಿತವಾಗಿದ್ದು, ಅನಾರೋಗ್ಯ ಇಲಾಖೆಯಾಗಿದೆ. ಇಲಾಖೆಗೆ ರೋಗ ಬಂದಂತಾಗಿದೆ. ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಹೇಳುತ್ತಾರೆ. ನಮ್ಮದೇನೂ ತಪ್ಪಲ್ಲ. ಔಷಧ ದೋಷದಿಂದಲೇ ಸಾವು ಸಂಭವಿಸಿದೆ ಎಂದು ವೈದ್ಯರು ಹೇಳುತ್ತಾರೆ. 6 ತಿಂಗಳ ಹಿಂದೆಯೇ ಔಷಧದಿಂದ ಸತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ನಕಲಿ ವೈದ್ಯರ ಹಾವಳಿ ಕೂಡ ಕಂಡುಬರುತ್ತಿದೆ. ಆರೋಗ್ಯ ಇಲಾಖೆ ಕ್ರಿಯಾಶೀಲವಾಗಿಲ್ಲ" ಎಂದು ವಾಗ್ದಾಳಿ ನಡೆಸಿದರು.

"ಕೆ.ಸಿ. ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ್ದ ಲೋಕಾಯುಕ್ತರು, ಕಾರ್ಯ ನಿರ್ವಹಿಸದ ವೆಂಟಿಲೇಟರ್, ಬಾಣಂತಿಯರಿಗೆ ಬಿಸಿನೀರು ನೀಡದಿರುವುದು ಮೊದಲಾದ ಕೊರತೆಗಳು ಕಂಡುಬಂದಿರುವುದನ್ನು ತಿಳಿಸಿದ್ದಾರೆ. ಅವಧಿ ಮೀರಿದ ಔಷಧಗಳು ವಿಲೇವಾರಿಯಾಗಿಲ್ಲ. ಡ್ರಗ್ ಮಾಫಿಯಾದಲ್ಲಿ ಸರ್ಕಾರ ಸಿಲುಕಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯಕ್ಕೆ ತಕ್ಕ ಔಷಧಿ ದಾಸ್ತಾನು ಇಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ದರ ಏರಿಕೆ ಮಾಡಲಾಗಿದೆ" ಎಂದಾಗ, ಮಧ್ಯಪ್ರವೇಶಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ "ವೈದ್ಯಕೀಯ ಶಿಕ್ಷಣ ಇಲಾಖೆಯ ಆಸ್ಪತ್ರೆಗಳಲ್ಲಿ ಹೆಚ್ಚಳ ಮಾಡಲಾಗಿದೆ. ನಮ್ಮ ಆಸ್ಪತ್ರೆಗಳಲ್ಲಿ ಆಗಿಲ್ಲ" ಎಂದು ಸ್ಪಷ್ಟನೆ ನೀಡಿದರು.

ಚರ್ಚೆ ಮುಂದುವರೆಸಿದ ಅಶೋಕ್ ಅವರು, "ವೈದ್ಯಕೀಯ ಶಿಕ್ಷಣ ಇಲಾಖೆ ಆಸ್ಪತ್ರೆಗಳು ಬೇರೆ ರಾಜ್ಯದಲ್ಲಿದೆಯೇ? 100 ವಿವಿಧ ಪರೀಕ್ಷೆಗಳ ಬೆಲೆ ಹೆಚ್ಚಳ ಮಾಡಲಾಗಿದೆ. ಕೋವಿಡ್‍ನಿಂದ ಈಗತಾನೇ ಚೇತರಿಸಿಕೊಳ್ಳುತ್ತಿದ್ದೇವೆ. ಬೆಲೆ ಏರಿಕೆ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದರು.

"ಬಾಣಂತಿಯರಿಗೆ ನೀಡಲಾಗಿದ್ದ ಐವಿ ದ್ರಾವಣದಿಂದಲೇ ಅಂಗಾಂಗ ವೈಫಲ್ಯವಾಗಿ ಮೃತಪಟ್ಟಿರುವುದು ಎಂದು ಹೇಳಲಾಗಿದೆ. ಆದರೆ ವರದಿ ಬೇರೆ ರೀತಿ ಕೊಟ್ಟಿದ್ದಾರೆ. ಔಷಧ ಪೂರೈಸಿದ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿದರೆ ಇನ್ನು ಒಂದು ವರ್ಷದಲ್ಲಿ ಬೇರೆ ಹೆಸರಿನಲ್ಲಿ ಅದೇ ಕಂಪನಿಯೇ ಔಷಧ ಪೂರೈಸುವಂತಹ ವ್ಯವಸ್ಥೆ ಇದೆ" ಎಂದು ಹೇಳಿದರು.

"ನ್ಯಾಯಾಲಯದ ಆದೇಶದ ಮೇಲೆ ಅವರನ್ನು ಬಿಟ್ಟಿದ್ದೀರಿ" ಎಂದಾಗ, ಮಧ್ಯಪ್ರವೇಶಿಸಿದ ಉಪಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಅವರು, "ನ್ಯಾಯಾಲಯವು ತಡೆಯಾಜ್ಞೆ ಕೊಡುತ್ತದೆ. ಜೀವಕ್ಕೆ ಯಾರು ಜವಾಬ್ದಾರರು? ಒಂದು ಲ್ಯಾಬ್ ಸರಿಯಿಲ್ಲ ಎಂದರೆ, ಇನ್ನೊಂದು ಲ್ಯಾಬ್ ಸರಿ ಎಂದರೆ ಹೇಗೆ?" ಎಂದು ಪ್ರಶ್ನಿಸಿದರು.

ಆಗ ಅಶೋಕ್ ಅವರು "ಸರ್ಕಾರ ಏಕೆ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲಿಲ್ಲ?" ಎಂದು ಪ್ರಶ್ನೆ ಮಾಡಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ, "ನ್ಯಾಯಾಂಗದವರು ಕಾರ್ಯಾಂಗದ ಶಾಸನ ರಚಿಸುವ ಕೆಲಸ ಮಾಡುವುದಾದರೆ ನಾವು ಏಕೆ ಇರಬೇಕು. ಆಡಳಿತದಲ್ಲಿ ಹಸ್ತಕ್ಷೇಪ ಎಷ್ಟು ಸರಿ? ನಮ್ಮ ರಕ್ಷಣೆ ಯಾರು ಮಾಡುತ್ತಾರೆ?" ಎಂದು ಕೇಳಿದರು.

ಮಾತು ಮುಂದುವರೆಸಿದ ಅಶೋಕ್, "ಕಳಪೆ ಔಷಧ ಪೂರೈಸಿದ ಕಂಪನಿ ವಿಚಾರದಲ್ಲಿ ನ್ಯಾಯಾಲಯದ ಆದೇಶವಿದೆ ಎಂದರೆ ಸಾವಿಗೆ ಯಾರು ನ್ಯಾಯ ಕೊಡುತ್ತಾರೆ. ಕಲಬುರಗಿಯಲ್ಲಿ ನಿನ್ನೆ ಮೃತಪಟ್ಟಿದ್ದಾರೆ" ಎಂದು ಹಲವು ನಿದರ್ಶನ ಮತ್ತು ಅಂಕಿಅಂಶಗಳ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

"ಕ್ಯಾನ್ಸರ್​ಗೆ ನೀಡುವಂತಹ ಔಷಧಿಯನ್ನು 40 ರೂ.ಗೆ ಪಡೆದು ಜನರು ತೆಗೆದುಕೊಳ್ಳುತ್ತಿರುವ ವಿಡಿಯೋವನ್ನು ಮಹಿಳೆಯೊಬ್ಬರು ಹಾಕಿದ್ದಾರೆ. ಹೀಗಾದರೆ ಸರ್ಕಾರ ಇದೆಯೋ? ಸತ್ತಿದೆಯೋ, ಹಾದಿಬೀದಿಯಲ್ಲಿ ಡ್ರಗ್ ಸಿಗುತ್ತದೆ ಎಂದರೆ ಹೇಗೆ?" ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ:ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ಎಲ್ಲಾ ಸರ್ಕಾರಗಳಿಂದಲೂ ದ.ಕರ್ನಾಟಕ-ಉ.ಕರ್ನಾಟಕ ಎಂಬ ತಾರತಮ್ಯ: ಶಾಸಕರ ಅಸಮಾಧಾನ

ಬಾಣಂತಿಯರ ಸಾವಿಗೆ ಸರ್ಕಾರವೇ ಹೊಣೆ:ರಾಜ್ಯದಲ್ಲಿ ಸಂಭವಿಸಿರುವ ಬಾಣಂತಿಯರ ಸಾವಿಗೆ ಸರ್ಕಾರವೇ ನೇರ ಹೊಣೆ. ಈ ಸರ್ಕಾರ ಕೊಲೆಗಡುಕ ಸರ್ಕಾರ ಎಂದು ಮಾಜಿ ಡಿಸಿಎಂ, ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ವಿಧಾನಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಇಂದು ನಿಯಮ 69ರಡಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಅವರು, ಸಾವಿನ ಹೊಣೆಯನ್ನು ಆರೋಗ್ಯ ಸಚಿವರೇ ಹೊರಬೇಕು. ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಅವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಾದ ಡಾ.ರಂಗನಾಥ್, ಬೇಳೂರು ಗೋಪಾಲಕೃಷ್ಣ, ಕೋನರೆಡ್ಡಿ, ನಯನಾ ಮೋಟಮ್ಮ ಮೊದಲಾದವರು ಎದ್ದು ನಿಂತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆಗ, ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಎರಡೂ ಕಡೆ ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆದ ಪರಿಣಾಮ ಸ್ಪೀಕರ್ ಯು.ಟಿ.ಖಾದರ್ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಗದ್ದಲದ ನಡುವೆಯೇ ಮಾತನಾಡಿದ ಅಶ್ವತ್ಥ ನಾರಾಯಣ ಅವರು, ಸರ್ಕಾರ ಒಂದೇ ಒಂದು ಒಳ್ಳೆಯ ಕೆಲಸ ಮಾಡಿಲ್ಲ. ಸಂಪೂರ್ಣ ವಿಫಲವಾಗಿದೆ. ಬ್ರೈನ್ ಕ್ಲಿನಿಕ್ ಪ್ರಾರಂಭಿಸಿ ದೊಡ್ಡದಾಗಿ ಪ್ರಚಾರ ಪಡೆದರು. ಆದರೆ ಒಬ್ಬ ನ್ಯೂರಾಲಿಜಿಸ್ಟ್ ಅನ್ನು ನೇಮಕ ಮಾಡಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.

ವೈದ್ಯರ ವರ್ಗಾವಣೆ ಕೌನ್ಸಿಲ್ ಮೂಲಕ ಆಗಿಲ್ಲ. ವರ್ಗಾವಣೆ ಕಾಯ್ದೆ ಉಲ್ಲಂಘನೆಯಾಗಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದನಂತರ ವೈದ್ಯರ, ನರ್ಸ್‍ಗಳ ನೇಮಕವಾಗಿಲ್ಲ. ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಿಲ್ಲ. 16 ಜಂಟಿ ನಿರ್ದೇಶಕರ ಹುದ್ದೆಗಳು ಆರೋಗ್ಯ ಇಲಾಖೆಯಲ್ಲಿ ಖಾಲಿ ಇವೆ. 12 ಸಾವಿರ ಕೋಟಿ ರೂ. ಇಲಾಖೆಗೆ ಒದಗಿಸಿದ್ದರೂ ಈ ವರ್ಷ ಶೇ.23ರಷ್ಟು ಮಾತ್ರ ಬಳಕೆಯಾಗಿದೆ. 108 ಆ್ಯಂಬುಲೆನ್ಸ್​ಗಳಿಗೆ ಜಿಪಿಎಸ್ ವ್ಯವಸ್ಥೆಯೇ ಇಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಒಂದೊಂದು ಆಸ್ಪತ್ರೆ ಒಂದೊಂದು ಬಳಕೆದಾರರ ಶುಲ್ಕ ವಿಧಿಸುತ್ತಿವೆ. ಏಕರೂಪ ಶುಲ್ಕವಿಲ್ಲ. ಬಿಪಿಎಲ್ ಚೀಟಿದಾರರಿಗೂ ಶುಲ್ಕ ವಿಧಿಸಲಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಶುಲ್ಕ ವಿಧಿಸುವ ಕ್ಯಾಶ್ ಕೌಂಟರ್ ಅನ್ನೇ ತೆಗೆಯಬೇಕು. ಜಿಲ್ಲಾ, ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಐಸಿಯು, ಟ್ರಾಮಾ ಸೆಂಟರ್ ಮುಚ್ಚಿ ಹೋಗಿವೆ. 761 ವಿಧದ ಔಷಧಿಗಳು ಲಭ್ಯವಿರಬೇಕು. 253 ಮಾತ್ರ ಇದ್ದು, 508 ಔಷಧಿಗಳು ಡ್ರಗ್ ಲಾಜಿಸ್ಟಿಕಲ್‍ನಲ್ಲಿ ಇಲ್ಲ. ಬೇಡಿಕೆಯಷ್ಟು ಔಷಧಿ ಇರಬೇಕು ಎಂಬುದಿದೆ. ಔಷಧಿ ಗುಣಮಟ್ಟದಲ್ಲೂ ಲೋಪವಿದೆ. ಬಾಣಂತಿಯರ ಸಾವು ಹೆರಿಗೆ ಸಾವು ಎಂದೇ ಪರಿಗಣಿಸಬೇಕಾಗುತ್ತದೆ. ಒಬ್ಬ ವೈದ್ಯರು ಒಂದೇ ದಿನದಲ್ಲಿ 25 ಸಿಜೇರಿಯನ್ ಮಾಡಲು ಸಾಧ್ಯವೇ? ಶಸ್ತ್ರ ಚಿಕಿತ್ಸಾ ಕೊಠಡಿ ಶುಚಿತ್ವ ಹೊಂದಿರುತ್ತದೆಯೇ? ಎಂದು ಅಶ್ವತ್ಥ ನಾರಾಯಣ ಪ್ರಶ್ನಿಸಿದರು.

ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ: ಐವಿ ದ್ರಾವಣ ಉತ್ಪಾದಿಸದಂತೆ ಪಶ್ಚಿಮ್ ಬಂಗಾ ಕಂಪನಿಗೆ ನಿರ್ಬಂಧ - ಸಚಿವ ದಿನೇಶ್ ಗುಂಡೂರಾವ್

ABOUT THE AUTHOR

...view details