ಕರ್ನಾಟಕ

karnataka

ETV Bharat / state

ವಿಷಮುಕ್ತ ಭಾರತ ನಿರ್ಮಾಣಕ್ಕೆ ಬೆಳಗಾವಿ ರೈತನ ಪಣ: ಸಾವಯವ ಕೃಷಿಯಲ್ಲೇ ಸುಖ ಕಂಡ ಹಾದಿಮನಿ ಮನೆತನ - Organic Farming - ORGANIC FARMING

ರಾಸಾಯನಿಕ ಕೃಷಿ ಭೂಮಿಯನ್ನು ವಿಷಕಾರಿ ಮಾಡುತ್ತಿದೆ. ವಿಷವನ್ನೇ ಬಿತ್ತಿ ವಿಷವನ್ನೇ ಉತ್ಪಾದಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆದರೆ, ಇಲ್ಲೊಬ್ಬ ರೈತ ಸಾವಯವ ಪದ್ಧತಿ ಮೂಲಕ ವಿಷಮುಕ್ತ ಭಾರತ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿದ್ದಾರೆ. ತಮ್ಮ ಜಮೀನಿನಲ್ಲಿ ಸಂಪೂರ್ಣ ಸಾವಯವ ಪದ್ಧತಿ ರೂಢಿಸಿಕೊಂಡು ಯಶಸ್ವಿ ಮತ್ತು ಮಾದರಿ ರೈತರಾಗಿ ಹೊರಹೊಮ್ಮಿದ್ದಾರೆ.

HADIMANI FAMILY  FARMER AWARD  MOTIVATION FOR FARMERS  BELAGAVI
ರೈತ ಶಂಕರಗೌಡ ಹಾದಿಮನಿ ಕುಟುಂಬ (ETV Bharat)

By ETV Bharat Karnataka Team

Published : Jun 25, 2024, 3:49 PM IST

Updated : Jun 25, 2024, 6:16 PM IST

ಸಾವಯವ ಕೃಷಿಯಿಂದಲೇ ಬದುಕು ಬಂಗಾರ - ಹಾದಿಮನಿ ಕುಟುಂಬಸ್ಥರ ಅಭಿಮತ (ETV Bharat)

ಬೆಳಗಾವಿ:ಇಂದು ಬಹುತೇಕ ರೈತರು ವಿವಿಧ ಕಂಪನಿಗಳ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸಿ ಕಡಿಮೆ‌ ಸಮಯದಲ್ಲಿ ಹೆಚ್ಚು ಫಸಲು ತೆಗೆಯುವ ಧಾವಂತದಲ್ಲಿದ್ದಾರೆ. ಆದರೆ, ತಾವು ಭೂಮಿಗೆ ವಿಷ ಹಾಕುತ್ತಿದ್ದೇವೆ ಎನ್ನುವ ಆತಂಕದ ವಿಚಾರ ಅವರಿಗೆ ಗೊತ್ತಾಗುತ್ತಿಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಂಡ ಬೆಳಗಾವಿ ತಾಲ್ಲೂಕಿನ ಸಿದ್ದನಭಾವಿ ಗ್ರಾಮದ ರೈತ ಶಂಕರಗೌಡ ಪಡಿಗೌಡ ಹಾದಿಮನಿ ಅವರು ಸಂಪೂರ್ಣ ಸಾವಯವ ಪದ್ಧತಿ ಮೂಲಕ ಕೃಷಿ ಕ್ರಾಂತಿ ಮಾಡಿದ್ದಾರೆ.

ಸಗಣಿ ಗೊಬ್ಬರ (ETV Bharat)

ತಮ್ಮ 15 ಎಕರೆ ಜಮೀನಿನಲ್ಲಿ ಸೊಯಾಬೀನ್, ಕಬ್ಬು, ತೊಗರೆ, ಹೆಸರು, ಉದ್ದು, ಜೋಳ, ತರಕಾರಿ ಸೇರಿ ವಿವಿಧ ಬೆಳೆ ಬೆಳೆಯುವ ಶಂಕರಗೌಡ ತಮಗೆ ಬೇಕಾದ ಬೀಜ ಮತ್ತು ಗೊಬ್ಬರಗಳನ್ನು ತಮ್ಮ ಮನೆಯಲ್ಲೇ ತಯಾರಿಸುತ್ತಾರೆ. ತಮ್ಮ ಮನೆಯ ಹಿತ್ತಲಿನಲ್ಲಿ 25ಕ್ಕೂ ಅಧಿಕ ಗಿಡಮೂಲಿಕೆ ಬೆಳೆದಿದ್ದಾರೆ. ಸಣ್ಣಪುಟ್ಟ ಕಾಯಿಲೆಗಳಿಗೆ ಇವರು ವೈದ್ಯರ ಬಳಿ ಹೋಗೋದಿಲ್ಲ. ಅಲ್ಲದೇ ಜೇನು, ಅರಿಶಿನ, ತರಕಾರಿ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಇಡೀ ಕುಟುಂಬ ಸಾವಯವ ಕೃಷಿಯಲ್ಲಿ ನೆಮ್ಮದಿ ಮತ್ತು ಸ್ವಾವಲಂಬಿ ಬದುಕು ಕಟ್ಟಿಕೊಂಡಿದೆ.

ಪುದೀನಾ ಸೊಪ್ಪು (ETV Bharat)

ಬೆಳೆಗಳಿಗೆ ದಶಪರ್ನಿ ಬಳಕೆ; ಕಳೆದ ಎಳೆಂಟು ವರ್ಷಗಳಿಂದ ಸಂಪೂರ್ಣವಾಗಿ ರಾಸಾಯನಿಕ ಕೀಟನಾಶಕ ಕೈ ಬಿಟ್ಟಿರುವ ಇವ್ರು, ಸಗಣಿ ಮತ್ತು ಎರೆಹುಳು ಗೊಬ್ಬರ ಬಳಸುತ್ತಿದ್ದು, ಕೀಟನಾಶಕ ಬದಲಿಗೆ ದಶಪರ್ನಿ ಉಪಯೋಗಿಸುತ್ತಿದ್ದಾರೆ. ದಶಪರ್ನಿ 40 ದಿನಕ್ಕೆ ತಯಾರಾಗುತ್ತದೆ. 6 ತಿಂಗಳವರೆಗೆ ಉಪಯೋಗಿಸಿಕೊಳ್ಳಬಹುದು. ಯಾವುದೇ ಬೆಳೆಗೆ 3 ಬಾರಿ ಸಿಂಪಡಣೆ ಮಾಡುತ್ತೇವೆ. 200 ಲೀಟರ್ ನೀರಿನ ಡ್ರಮ್​ನಲ್ಲಿ 10 ಲೀಟರ್ ದಶಪರ್ನಿ, 10 ಲೀಟರ್ ಗೋಕೃಪಾಮೃತ, 10 ಲೀಟರ್ ಜೀವಾಮೃತ, 5 ಲೀಟರ್ ಹುಳಿ ಮಜ್ಜಿಗೆ ಮಿಶ್ರಣ ಮಾಡಿ ಸಿಂಪಡಿಸುವುದರಿಂದ ಯಾವುದೇ ರೋಗಗಳು ಬರುವುದಿಲ್ಲ‌. ನಮ್ಮ ಜೀವನಕ್ಕೆ ಉಪಯೋಗ ಆಗಲೆಂದು ಕುರಿ, ಕೋಳಿ, ಆಕಳು, ಎಮ್ಮೆಗಳನ್ನು ಸಾಕಿದ್ದೇವೆ. ಬೀಜಗಳನ್ನು ಹೊರಗಿನಿಂದ ತರುವುದಿಲ್ಲ. ಉತ್ತಮ ಇಳುವರಿ ತೆಗೆದ ರೈತರ ಬಳಿ ಬೀಜ ತಂದು ಬಿತ್ತಿ, ಅವುಗಳನ್ನೇ ಮುಂದಿನ‌ ವರ್ಷದ ಬೀಜಗಳಾಗಿ ಉಪಯೋಗಿಸುತ್ತೇವೆ ಎಂದು ಈಟಿವಿ ಭಾರತಕ್ಕೆ ರೈತ ಶಂಕರಗೌಡ ಹಾದಿಮನಿ ವಿವರಿಸಿದರು.

ಸಾವಯವ ಬೀಜಗಳ ದಾಸ್ತಾನು (ETV Bharat)

ಸಾವಯವ ಕೃಷಿ ಎಂದರೆ ನೆಮ್ಮದಿಯ ಬದುಕು. ಟ್ರ್ಯಾಕ್ಟರ್​ಗೆ ಡೀಸೆಲ್ ಅಷ್ಟೇ ನಾವು ಹೊರಗಿನಿಂದ ಖರೀದಿಸುತ್ತೇವೆ. ಬೆಳೆ ಬೆಳೆಯಲು ನಮಗೆ ಅಷ್ಟೇನು ಖರ್ಚು ಆಗೋದಿಲ್ಲ. ಹಾಗಾಗಿ, ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದೇವೆ. ಸಾವಯವ ಮಾಡುವವರನ್ನು ಜನ ಹುಚ್ಚ ಅಂತಾರೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ನಮ್ಮ ಪಾಡಿಗೆ ಕೆಲಸ ಮಾಡಬೇಕು. ಸಾವಯವ ಲೋಕದೊಳಗೆ ಒಮ್ಮೆ ಹೋಗಿ ಬಿಟ್ಟರೆ ಬೇರೆ ಲೋಕಕ್ಕೆ ಹೋಗಲು ಆಗೋದಿಲ್ಲ. ನಮ್ಮ ಭೂಮಿ ತಾಯಿ ವಿಷ ಬಿತ್ತಿದರೆ ವಿಷವನ್ನೆ ಕೊಡುತ್ತಾಳೆ. ಅಮೃತ ಬಿತ್ತಿದರೆ ಅಮೃತ ನೀಡುತ್ತಾಳೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯ, ಬೆಳಗಾವಿಯ ಕೃಷಿ ಇಲಾಖೆ, ಮತ್ತಿಕೊಪ್ಪದ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ ಇವುಗಳಿಂದ ನಮಗೆ ತುಂಬಾ ಅನುಕೂಲ ಆಗಿದೆ. ಕೃಷಿ ವಿಜ್ಞಾನಿಗಳೇ ನನಗೆ ಪ್ರೇರಣೆ ಎನ್ನುವುದು ಸಾವಯವ ಶಂಕರಗೌಡ ಅಭಿಮತ.

ಸಾವಯವ ಕೃಷಿಯಿಂದ ಪಡೆದ ಧಾನ್ಯಗಳು (ETV Bharat)

ಕಷ್ಟಪಟ್ಟು ದುಡಿದರೆ ಫಲ: ಇತ್ತೀಚಿನ‌ ದಿನಗಳಲ್ಲಿ ಕ್ಯಾನ್ಸರ್, ಮಧುಮೇಹ ಮತ್ತಿತರ ರೋಗಗಳು ಹೆಚ್ಚಾಗುತ್ತಿವೆ. ವಾಣಿಜ್ಯದ ಉದ್ದೇಶದ ಬೆನ್ನು ಹತ್ತದೆ, ತಮ್ಮ ಮನೆ ಸಲುವಾಗಿಯಾದರೂ ಸಾವಯವ ಮಾಡಿ. ರಾಸಾಯನಿಕ, ಕೀಟನಾಶಕ ಮುಕ್ತ ಭಾರತ ನಿರ್ಮಿಸೋಣ. ನಮ್ಮಲ್ಲೇ ಸಾಕಷ್ಟು ಔಷಧೀಯ ಗುಣ ಹೊಂದಿರುವ ಸಸಿಗಳಿವೆ. ಅವುಗಳಿಂದ ಔಷಧ ತಯಾರಿಸೋಣ. ಮಾಹಿತಿ ನೀಡಲು ಸಾಕಷ್ಟು ಗ್ರಂಥಗಳಿವೆ. ಅಂಗೈಯಲ್ಲಿ ಆಕಾಶ ಎನ್ನುವಂತೆ ಪ್ರತಿಯೊಬ್ಬರು ತಮ್ಮ ಮೊಬೈಲ್​ನಲ್ಲಿ ಸಾವಯವದ ಬಗ್ಗೆ ತಿಳಿದುಕೊಳ್ಳಿ. ಸುಮ್ಮನೆ ಮೊಬೈಲ್ ಹಿಡಿದುಕೊಂಡು ವ್ಯರ್ಥ ಕಾಲಹರಣ ಮಾಡದೆ, ಅಧ್ಯಯನ ಮಾಡಿ, ಕಷ್ಟ ಪಟ್ಟು ದುಡಿಯಿರಿ. ಪ್ರಯತ್ನಿಸಿದರೆ ಫಲ ಸಿಕ್ಕೇ ಸಿಗುತ್ತದೆ ಎಂದು ಯುವ ರೈತರಿಗೆ ಶಂಕರಗೌಡ ಹಾದಿಮನಿ ಕಿವಿ‌ಮಾತು ಹೇಳಿದರು.

ಹೊಲಕ್ಕೆ ಬಳಸುವ ಜೀವಾಮೃತ (ETV Bharat)

ಶಂಕರಗೌಡರ ಪತ್ನಿ ಸುವರ್ಣಾ ಮಾತನಾಡಿ, ಸಾವಯವ ಕೃಷಿಯನ್ನೇ ನಾವು ನಂಬಿದ್ದೇವೆ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು, ಕಾಯಕವೇ ಕೈಲಾಸ ತತ್ವದಡಿ ಮನೆಯವರೆಲ್ಲ ಒಗ್ಗಟ್ಟಾಗಿ ದುಡಿಯುತ್ತಿದ್ದು, ಇದರಲ್ಲಿ ನಮಗೆ ಸಂತೃಪ್ತಿ ಮತ್ತು ಖುಷಿಯಿದೆ ಎಂದು ಅಭಿಪ್ರಾಯ ಪಟ್ಟರು‌. ಗ್ರಾಮದ ರೈತ ನಾಗನಗೌಡ ಹಾದಿಮನಿ ಮಾತನಾಡಿ, ಸಾವಯವ ಕೃಷಿಯಲ್ಲಿ ಶಂಕರಗೌಡರ ಸಾಧನೆ ನೋಡಿ ತುಂಬಾ ಖುಷಿ‌ ಆಗುತ್ತಿದ್ದು, ನಮಗೆ ಪ್ರೇರಣೆ ಆಗಿದ್ದಾರೆ. ಅವರಂತೆ ನಾವು ಸಾಧನೆ ಮಾಡಬೇಕು ಎನ್ನುವ ಆಸೆ ಆಗಿದೆ. ಸಾವಯವದಲ್ಲಿ ಖರ್ಚು ಕಮ್ಮಿ, ಒಳ್ಳೆಯ ಬೆಳೆ ಬರುತ್ತದೆ ಎಂದು ಹೇಳಿದರು.

ದೇಸಿ ಜಾನುವಾರುಗಳು (ETV Bharat)

ರಾಷ್ಟ್ರಮಟ್ಟದ ಅನ್ವೇಷಕ ರೈತ ಪ್ರಶಸ್ತಿ:ಸಾವಯವ ಕೃಷಿಯಲ್ಲಿ ಶಂಕರಗೌಡರ ಸಾಧನೆ ಗುರುತಿಸಿ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ರಾಷ್ಟ್ರ ಮಟ್ಟದ "ಅನ್ವೇಷಕ ರೈತ" ಪ್ರಶಸ್ತಿ ನೀಡಿ ಗೌರವಿಸಿದೆ. ಕೃಷಿ ಇಲಾಖೆ "ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ" ಸೇರಿ ವಿವಿಧ ಸಂಘ ಸಂಸ್ಥೆಗಳಿಂದ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಶಂಕರಗೌಡರ ಪತ್ನಿ ಸುವರ್ಣಾ ಅವರು ಪತಿ ಹೆಗಲಿಗೆ ಹೆಗಲು ಕೊಟ್ಟಿದ್ದು, ಇಡೀ ಕುಟುಂಬ ಒಗ್ಗಟ್ಟಾಗಿ ಕೃಷಿ ಕಾಯಕದಲ್ಲಿ ತೊಡಗಿದೆ.

ಸಾವಯವ ಕೃಷಿಕ ಶಂಕರಗೌಡ ಹಾದಿಮನಿ (ETV Bharat)

ಇನ್ನು, ಸುವರ್ಣಾ ಅವರಿಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯ "ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ" ಲಭಿಸಿದೆ. ಶಂಕರಗೌಡರ ಈ ಕೃಷಿ ಸಾಧನೆ ನೋಡಿ ಅವರ ಇಳಿ ವಯಸ್ಸಿನ ತಂದೆ-ತಾಯಿ ಸಾರ್ಥಕತೆ ಭಾವ ಕಾಣುತ್ತಿದ್ದು, ಇಡೀ ಊರು ಹೆಮ್ಮೆ ಪಡುತ್ತಿದೆ. ನಾಡಿನ ಮೂಲೆ ಮೂಲೆಯಿಂದ ಆಗಮಿಸುವ ವಿದ್ಯಾರ್ಥಿಗಳು, ರೈತರಿಗೆ ಶಂಕರಗೌಡರು ಸಾವಯವ ಕೃಷಿ ಪಾಠ ಮಾಡುತ್ತಿದ್ದಾರೆ. ಇವರ ಬದುಕು ಮತ್ತಷ್ಟು ರೈತರಿಗೆ ಪ್ರೇರಣೆ ಆಗಲಿ ಎಂಬುದೇ ನಮ್ಮ ಆಶಯ.

ಓದಿ:ರಾಜ್ಯದ ಜನತೆಗೆ ಮತ್ತೊಂದು ಶಾಕ್​: ಹಾಲಿನ ದರ ಪ್ರತಿ ಲೀಟರ್​ಗೆ 2 ರೂ. ಹೆಚ್ಚಳ! - MILK PRICE HIKE

Last Updated : Jun 25, 2024, 6:16 PM IST

ABOUT THE AUTHOR

...view details