ಬೆಂಗಳೂರು: ನಾನು ಬೆಂಕಿ ಹಚ್ಚಲು ಮಂಡ್ಯಕ್ಕೆ ಹೋಗಿರಲಿಲ್ಲ. ಬೆಂಕಿ ಹಚ್ಚಿದ್ದೇ ನೀವು. ಮಂಡ್ಯ ಜಿಲ್ಲೆಯ ಕೆರಗೋಡು ಘಟನೆಗೂ, ನನಗೂ ಸಂಬಂಧವಿಲ್ಲ. ಕೆರಗೋಡು ಘಟನೆಗೆ ಸರ್ಕಾರದ ನಡವಳಿಕೆಗಳೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
"ಕೆರಗೋಡು ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ನನಗೆ ಆಹ್ವಾನ ನೀಡಲಾಗಿತ್ತು. ಹಾಗಾಗಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ. ಕುಮಾರಸ್ವಾಮಿ ಕೇಸರಿ ಶಾಲು ಹಾಕಿಕೊಂಡು ಜೆಡಿಎಸ್ ಕಾರ್ಯಕರ್ತರ ಶಕ್ತಿ ಕೊನೆಗೊಳಿಸಲು ಹೊರಟಿದ್ದಾರೆ ಎಂದು ಪಾಪ ಹಳೆಯ ಸ್ನೇಹಿತರು (ಸಚಿವ ಚಲುವರಾಯಸ್ವಾಮಿ) ಹೇಳಿದ್ದಾರೆ. ನಾನು ಕೇಸರಿ ಶಾಲು ಹಾಕಿಕೊಂಡಿದ್ದು ಮಹಾಪರಾಧನಾ? ಕಾಂಗ್ರೆಸ್ನವರಿಗೆ ಕೇಸರಿ ಮೇಲೆ ಯಾಕೆ ಇಷ್ಟೊಂದು ಸಂಕುಚಿತ ಮನೋಭಾವ? ಮಂಡ್ಯ ಉಸ್ತುವಾರಿ ಸಚಿವರಿಂದ ನಾನು ನನ್ನ ಪಕ್ಷವನ್ನು ಹೇಗೆ ಉಳಿಸಿಕೊಳ್ಳಬೇಕೆಂಬುದನ್ನು ಕಲಿಯಬೇಕಿಲ್ಲ. ನನಗೆ ಅಲ್ಲಿನ ಜನ ಕೊಟ್ಟಿರುವ ಪ್ರೀತಿ ಇದೆ" ಎಂದು ತಿರುಗೇಟು ನೀಡಿದ್ದಾರೆ.
"ಕೇಸರಿ ಶಾಲು ಹಾಕಿದ್ದು ಅಪರಾಧವಾದರೆ, ದಲಿತ ಸಮಾವೇಶದಲ್ಲಿ ಜೈ ಭೀಮ್ನ ನೀಲಿ ಶಾಲನ್ನು ನಾನು ಹಾಕಿಕೊಂಡಿದ್ದೆ. ಅದು ಕಾಂಗ್ರೆಸ್ ನಾಯಕರಿಗೆ ಕಾಣಿಸಲಿಲ್ಲವೆ?" ಎಂದು ಪ್ರಶ್ನಿಸಿದ ಹೆಚ್ಡಿಕೆ, 'ತ್ರಿವರ್ಣಧ್ವಜದಲ್ಲೂ ಕೇಸರಿ ಬಣ್ಣವಿದೆ' ಎಂದರು.
"ಮಂಡ್ಯದ ಕೆರಗೋಡುವಿನಲ್ಲಿ ನಿನ್ನೆ ನಾನು ಹಿಂದುತ್ವದ ಬಗ್ಗೆಯಾಗಲಿ, ಹನುಮಧ್ವಜದ ಬಗ್ಗೆಯಾಗಲಿ ಮಾತನಾಡಿಲ್ಲ. ಈ ಅಹಿತಕರ ಘಟನೆಗೆ ಕಾಂಗ್ರೆಸ್ ಕಾರಣ ಎಂದಿದ್ದೇನೆ. ಸ್ಥಳೀಯ ಶಾಸಕರನ್ನು ಧ್ವಜಸ್ತಂಭ ಉದ್ಘಾಟನೆಗೆ ಕರೆಯದಿದ್ದದ್ದೇ ಇದಕ್ಕೆಲ್ಲ ಕಾರಣ. ಮೊದಲು ಸ್ಥಳೀಯ ಶಾಸಕರಿಗೆ, ಕೆಲಸ ಮಾಡುವುದನ್ನು ಕಾಂಗ್ರೆಸ್ ನಾಯಕರು ಹೇಳಿಕೊಡಲಿ" ಎಂದು ಕುಟುಕಿದರು.
"ಮಂಡ್ಯದಲ್ಲಿ ನಾನು ಸಂಘರ್ಷಕ್ಕೆ ಎಡೆಮಾಡುವ ಮಾತುಗಳನ್ನೇ ಆಡಿಲ್ಲ. ಅಧಿಕಾರಿಗಳ ವೈಫಲ್ಯವನ್ನು ಹೇಳಿದ್ದೇನೆ. ಸರ್ಕಾರದ ತಪ್ಪು ನಿರ್ಧಾರದಿಂದ ಹೀಗೆ ಆಗಿದೆ. ಅಲ್ಲಿ ಲಾಠಿ ಪ್ರಹಾರ ಮಾಡುವ ಅವಶ್ಯಕತೆಯೇ ಇರಲಿಲ್ಲ. ನಾನು ಜಿಲ್ಲಾಧಿಕಾರಿಗಳಿಗೆ ಐದಾರು ಬಾರಿ ಕರೆ ಮಾಡಿದ್ದೇನೆ. ಸರ್ಕಾರದವರು ಅಧಿಕಾರಿಗಳಿಗೆ ಬುದ್ಧಿ ಹೇಳಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ಮಂಡ್ಯ ಘಟನೆಗೆ ಸಂಬಂಧಿಸಿದಂತೆ ವಾಸ್ತಾವಂಶ ಹೇಳಿದ್ದೇನೆ. ಘಟನೆ ಬಗ್ಗೆ ತನಿಖೆಯಾಗಲಿ, ನಾನು ಇದರಲ್ಲಿ ತಪ್ಪು ಮಾಡಿದ್ದರೆ ನನಗೆ ನೇಣು ಹಾಕಿ. ಏನು ಕ್ರಮ ಕೈಗೊಳ್ಳುತ್ತಾರೋ ತೆಗೆದುಕೊಳ್ಳಲಿ, ಏನು ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ" ಎಂದರು.
ಸುಳ್ಳು ದಾಖಲೆ ಸೃಷ್ಟಿ: 'ಕೆರಗೋಡು ಘಟನೆಗೆ ಸಂಬಂಧಿಸಿದಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಪೊಲೀಸ್ ಅಧಿಕಾರಿಗಳನ್ನು ಗುಲಾಮರಂತೆ ನಡೆಸಿಕೊಳ್ಳಲಾಗುತ್ತಿದೆ. ನನಗೆ ಬೆಂಕಿ ಹಚ್ಚಲು ಹೋಗಿದ್ದೆ ಎಂದು ಆರೋಪ ಮಾಡಿರುವ ಕಾಂಗ್ರೆಸ್‌ನವರು ಹಿಂದೆ ರಾಮನಗರ ಮತ್ತು ಚನ್ನಪಟ್ಟಣದ ಎರಡೂ ಕಡೆಗಳಲ್ಲೂ ಹಿಂದೂ-ಮುಸ್ಲಿಂ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದರು. ಶೋಷಿತ ಸಮಾವೇಶದಲ್ಲಿ ಮುಖ್ಯಮಂತ್ರಿ ಮಾಡಿರುವ ಭಾಷಣ ನೋಡಿದ್ದೇನೆ' ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದರು.