ಕರ್ನಾಟಕ

karnataka

By ETV Bharat Karnataka Team

Published : Jun 18, 2024, 5:27 PM IST

ETV Bharat / state

ನಾನು ಸೆಂಟ್ರಲ್ ಮಿನಿಸ್ಟರ್, ದರ್ಶನ್ ಕೇಸ್ ಬಗ್ಗೆ ಚರ್ಚೆ ಮಾಡಲ್ಲ : ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ - H D Kumaraswamy

ಕೇಂದ್ರ ಸಚಿವ ಹೆಚ್​. ಡಿ ಕುಮಾರಸ್ವಾಮಿ ಅವರು ನಟ ದರ್ಶನ್ ಕೇಸ್ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ದರ ಹೆಚ್ಚಳದ ಕುರಿತು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ. ಅಲ್ಲದೇ, ಬಿಬಿಎಂಪಿಯಲ್ಲಿ ಒಂದು ಕೆಲಸಕ್ಕೆ ಎರಡು ಬಿಲ್ ಮಾಡಿಕೊಂಡು ಕೋಟ್ಯಂತರ ರೂ. ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

H D Kumaraswamy
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (ETV Bharat)

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (ETV Bharat)

ಹುಬ್ಬಳ್ಳಿ (ಧಾರವಾಡ) :ನಾನು ಕೇಂದ್ರ ಸಚಿವನಾಗಿ ನಟ ದರ್ಶನ್ ಕೇಸ್ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ. ಕಾನೂನು ವ್ಯಾಪ್ತಿಯಲ್ಲಿ ಯಾರೂ ಕೂಡ ದೊಡ್ಡವರಲ್ಲ. ಕಾನೂನು ಬಾಹಿರ ಕೃತ್ಯಗಳಿಗೆ ಕಾನೂನು ರೀತಿಯಲ್ಲಿ ಕ್ರಮವನ್ನು ಜರುಗಿಸಬೇಕು ಎಂದು ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಂಬಿಕೆ‌ ಇಟ್ಟು ಎರಡು ಪ್ರಮುಖ ಖಾತೆ ಕೊಟ್ಟಿದ್ದಾರೆ. ನಾನು ಕೇಂದ್ರದಲ್ಲಿ ಪ್ರಥಮವಾಗಿ ಸಚಿವನಾಗಿದ್ದೇನೆ.‌ ಜಿಡಿಪಿ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಯ ಬಗ್ಗೆ ಶ್ರಮಿಸುತ್ತೇನೆ. ಎಲ್ಲರಿಗೂ ಹುಟ್ಟಿದಾಗಲೇ ತಿಳುವಳಿಕೆ ಇರುವುದಿಲ್ಲ. ಖಾತೆಯ ಬಗ್ಗೆ ಹಾಗೂ ಜವಾಬ್ದಾರಿ ನಿರ್ವಹಣೆ ಬಗ್ಗೆ ಮತ್ತಷ್ಟು ತಿಳಿದುಕೊಂಡು ನಿಮ್ಮ ಮುಂದೆ ಬರುತ್ತೇನೆ ಎಂದರು.

ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯ ವಿವಿಧ ಕಂತಿನ ಮೂಲಕ ರೈತರಿಗೆ ಹಣ ಸಂದಾಯ ಮಾಡಲಾಗುತ್ತಿದೆ. 17 ನೇ ಕಂತಿನ ಹಣ ಇಂದು ಬಿಡುಗಡೆ ಮಾಡಲಾಗುತ್ತಿದೆ. ವಾರಾಣಸಿಯಲ್ಲಿ ಮೋದಿಯವರ‌ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದೆ. ದೇಶದ 50 ಕಡೆ ರೈತರನ್ನು ಉದ್ದೇಶಿಸಿ ವಿಡಿಯೋ ಕಾನ್ಫರನ್ಸ್ ಮೂಲಕ ಮಾತನಾಡಿದ್ದಾರೆ ಎಂದು ಹೇಳಿದರು.

ಪ್ರಧಾನಿಯವರು ನಂಬಿಕೆಯಿಟ್ಟು ಪ್ರಮುಖ ಎರಡು ಖಾತೆಗಳನ್ನು ನೀಡಿದ್ದಾರೆ. ನನ್ನ ಇಲಾಖೆ ಅರ್ಥ ಮಾಡಿಕೊಳ್ಳಲು ಸಮಯ ಬೇಕು. ಈ ಖಾತೆಗಳಲ್ಲಿ ದೇಶದ ಜಿಡಿಪಿ ಅಭಿವೃದ್ಧಿಪಡಿಸಲು ಮತ್ತು ನಿರುದ್ಯೋಗ ನಿರ್ಮೂಲನೆ ಮಾಡಲು ಸಾಕಷ್ಟು ಅವಕಾಶ ಇದೆ. ಇಲಾಖೆಯಲ್ಲಿನ ಪಾಸಿಟಿವ್, ನೆಗೆಟಿವ್ ಅರ್ಥ ಮಾಡಿಕೊಳ್ಳುವೆ ಎಂದು ಹೆಚ್​ಡಿಕೆ ಹೇಳಿದರು.

ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ : ಧಾರವಾಡದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ವಾಣಿಜ್ಯನಗರಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕುಮಾರಸ್ವಾಮಿಗೆ ಅಭಿಮಾನಿಗಳು, ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಹೆಚ್. ಡಿ ಕುಮಾರಸ್ವಾಮಿ ಅವರಿಗೆ ಪುಷ್ಪಗುಚ್ಛ ನೀಡಿ, ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಅಭಿನಂದನೆ ಸಲ್ಲಿಸಿದರು. ಜಿಲ್ಲಾಡಳಿತದಿಂದ‌ ಕೂಡ ಸ್ವಾಗತಿಸಲಾಯಿತು. ನಂತರ ರಸ್ತೆ ಮಾರ್ಗವಾಗಿ ಧಾರವಾಡಕ್ಕೆ ಪ್ರಯಾಣ ಬೆಳೆಸಿದರು.

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಉಪಕರವನ್ನು ಹೆಚ್ಚಳ ಮಾಡುವ ಅವಶ್ಯಕತೆ ಏನಿತ್ತು? :ಪೆಟ್ರೋಲ್ - ಡೀಸೆಲ್ ದರವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಬೇಕು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಅವರು, ಕೇಂದ್ರ ಸರ್ಕಾರ ಇಳಿಸೋದು, ಬಿಡೋದು ಆಮೇಲೆ ಚರ್ಚೆ ಮಾಡೋಣ. ಈಗ ತರಾತುರಿಯಲ್ಲಿ ಪೆಟ್ರೋಲ್​ಗೆ 3 ರೂ. ಡೀಸೆಲ್​​ಗೆ 3.50 ಏರಿಕೆ ಮಾಡುವುದು ಏನಿತ್ತು?. ಏತಕ್ಕೆ ಬೆಲೆ ಏರಿಕೆ ಮಾಡಿದ್ರಿ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಜೆಪಿ ನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರವನ್ನು ಬೆಲೆ ಇಳಿಸುವಂತೆ ಇಷ್ಟು ದಿನ ಏಕೆ ಕೇಳಲಿಲ್ಲ? ಸರ್ಕಾರದಲ್ಲಿ ಹಣದ ಕೊರತೆ ಉಂಟಾಗಿರುವುದರಿಂದ ಸೆಸ್‌‍ ಮೂಲಕ 3 ಸಾವಿರ ಕೋಟಿ ರೂ. ಸಂಗ್ರಹಿಸಲು ತೈಲಬೆಲೆ ಹೆಚ್ಚಳ ಮಾಡಿದ್ದೀರಾ?. ಜನರ ಜೇಬಿನಿಂದ ಕಿತ್ತುಕೊಳ್ಳಲು ಹೊರಟಿದ್ದೀರಾ?. ಗ್ಯಾರಂಟಿ ಅನುಷ್ಠಾನಗೊಳಿಸುವುದಾಗಿ ಹೇಳಿ ಜನರಿಂದ ತೆಗೆದುಕೊಂಡು, ಜನರಿಗೇ ಕೊಡುವುದಕ್ಕೆ ನೀವೇ ಬೇಕಾ? ಯಾರು ಬೇಕಾದರೂ ಇಂತಹ ಆಡಳಿತ ನಡೆಸುತ್ತಾರೆ ಎಂದು ಕುಮಾಸ್ವಾಮಿ ವಾಗ್ದಾಳಿ ನಡೆಸಿದರು.

ಕೋಟ್ಯಂತರ ರೂ‌. ಲೂಟಿ : ಬಿಬಿಎಂಪಿಯಲ್ಲಿ ಒಂದು ಕೆಲಸಕ್ಕೆ ಎರಡು ಬಿಲ್‌ ಮಾಡಿಕೊಂಡು ಕೋಟ್ಯಂತರ ರೂ. ಲೂಟಿ ಮಾಡಲಾಗುತ್ತಿದೆ ಎಂದು ಹೆಚ್​ಡಿಕೆ ಆರೋಪಿಸಿದರು. ನಿಗಮ ಮಂಡಳಿಗಳಲ್ಲಿನ ಹಣ ಎಲ್ಲಿ ಹೋಗಿದೆಯೋ, ಏನೋ? ಅದನ್ನು ಕೇಳೋರು ಇಲ್ಲ ಎಂದ ಹೆಚ್​ಡಿಕೆ, 25 ಸಾವಿರ ಎಕರೆ ಮೇಲೆ ರಾಜ್ಯಸರ್ಕಾರ ಕಣ್ಣು ಹಾಕಿದೆ. ಗ್ಯಾರಂಟಿಯಂತಹ ಕಾರ್ಯಕ್ರಮಗಳನ್ನು ಜಾರಿಗೆ ತರುವಾಗ ವಿವೇಕ ಇರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ :ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ: ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನಿಸಿದ ಬಿಜೆಪಿ ನಾಯಕರು ಪೊಲೀಸ್​ ವಶಕ್ಕೆ - BJP Protest

ABOUT THE AUTHOR

...view details