ಬೆಂಗಳೂರು:ಹೆಚ್ಡಿಕೆಗೆ ನನ್ನ ಕಂಡರೆ ಭಯ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ಕೊಟ್ಟ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ''ಯಾರಿಗೆ ಭಯ? ಸಿಎಂ ಅವರು ದೆವ್ವ ಆಗಿದ್ರೆ ಭಯ ಬೀಳಬೇಕು. ದೆವ್ವ ಅಲ್ಲವಲ್ಲಾ, ಅವರಂದ್ರೆ ನಾನು ಯಾಕೆ ಭಯಪಡಲಿ'' ಎಂದು ಹೇಳಿದ್ದಾರೆ.
ಜೆಪಿ ನಗರದ ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ''ಜೆಡಿಎಸ್ ವೀಕ್ ಆಗುತ್ತೊ?, ಸ್ಟ್ರಾಂಗ್ ಆಗುತ್ತೊ?, ಅದನ್ನು ಭಗವಂತ ತೀರ್ಮಾನ ಮಾಡುತ್ತಾನೆ. ಮೊದಲು ಸಮಸ್ಯೆಯಲ್ಲಿದ್ದಿರಲ್ಲಪ್ಪ, ಅದನ್ನು ಸರಿಪಡಿಸಿಕೊಳ್ಳಿ. ಕುಮಾರಸ್ವಾಮಿ ಅವರನ್ನು ಹೆದರಿಸೋಕೆ ಆಗಲ್ಲ. ನಾನು ಯಾರಿಗೂ ಹೆದರಲ್ಲ. ಹೆದರೋದು ದೇವರಿಗೆ, ಜನರಿಗೆ. ಇಂತಹ ಸಿದ್ದರಾಮಯ್ಯನಂತವರು ಲಕ್ಷ ಜನ ಬರಲಿ, ನಾನು ಹೆದರಲ್ಲ. ಹೆದರೋದು ನನ್ನ ಬೆಳೆಸಿರುವ ನಾಡಿನ ಜನಕ್ಕೆ. ಇಂತಹ ಸಿದ್ದರಾಮಯ್ಯಗೆ ನಾನು ಹೆದರುತ್ತೀನಾ?'' ಎಂದು ತಿರುಗೇಟು ನೀಡಿದರು.
''ನಾನು ರಾಜಕೀಯದಲ್ಲಿ ಸಿದ್ದರಾಮಯ್ಯ ನೆರಳಲ್ಲಿ ಬಂದಿದ್ದೀನಾ?. ಸ್ವತಃ ದುಡಿಮೆ, ಕಾರ್ಯಕರ್ತರ ದುಡಿಮೆ ಮೇಲೆ ಬಂದಿದ್ದೇನೆ. ಸಿದ್ದರಾಮಯ್ಯ ಹೆಸರಲ್ಲಿ ನಾನು ರಾಜಕೀಯ ಮಾಡಿಲ್ಲ. ನನ್ನ ಸ್ವತಃ ದುಡಿಮೆ ಮೇಲೆ ಬಂದಿದ್ದೇನೆ. ಹಾಗೆ ನೋಡಿದರೆ ಸಿಎಂ ಸಿದ್ದರಾಮಯ್ಯನವರು ನನ್ನ ಪಕ್ಷದ ಕಾರ್ಯಕರ್ತರು ಮತ್ತು ದೇವೇಗೌಡರ ನೆರಳಿನಲ್ಲಿ ಬಂದವರು. ನಾನು ನೆಲದಿಂದ ದುಡಿಮೆ ಮಾಡಿ ಬಂದಿದ್ದೇನೆ. ನನ್ನ ಹೆರಿಸುವುದಕ್ಕೆ ಆಗುತ್ತಾ? ಅದು ಯಾವುದೋ ಕೇಸ್ ಹಾಕಿಕೊಂಡು ನನ್ನ ಹೆದರಿಸೋಕೆ ಆಗುತ್ತಾ'' ಎಂದು ಪ್ರಶ್ನಿಸಿದರು.
''ನಿನ್ನೆ ಕುಮಾರಸ್ವಾಮಿಗೆ ಬಂಧನದ ಭೀತಿ ಅಂತ ಹಾಕಿದ್ದೀರಾ, ನನಗೆ ಅದು ಯಾವುದೋ ಬಂಧನ ಭೀತಿಯೋ, ದೇವರೇ ಕಾಪಾಡಬೇಕಪ್ಪ'' ಎಂದರು.