ಬೆಂಗಳೂರು:ನಗರದ ಸಾಯಿಬಾಬಾ ಮಂದಿರಗಳು, ರಾಯರ ಮಠಗಳು ಸೇರಿದಂತೆ ಹಲವೆಡೆಗಳಲ್ಲಿ ಭಾನುವಾರ ಗುರುಪೂರ್ಣಿಮೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಎಂ.ಎಸ್. ರಾಮಯ್ಯ ಲೇಔಟ್‌ನ ಸಾಯಿ ಮಂದಿರ, ವಸಂತಪುರದ ಸಾಯಿಬಾಬಾ ದೇವಾಲಯಗಳಲ್ಲಿ ಕಿಲೋ ಮೀಟರ್ಗಟ್ಟಲೆ ಕ್ಯೂನಲ್ಲಿ ಭಕ್ತರು ಸಾಗಿ ಬಂದರು. ಸಾಯಿಬಾಬಾ, ಗುರುರಾಘವೇಂದ್ರ ಸ್ವಾಮಿ ಮತ್ತಿತರ ದೇವರಿಗೆ ಅಭಿಷೇಕ ನೆರವೇರಿಸಿ, ನಂತರ ವಿಶೇಷ ಅಲಂಕಾರದೊಂದಿಗೆ ಪೂಜೆ ನಡೆಯಿತು. ದೇವರ ದರ್ಶನಕ್ಕಾಗಿ ಬೆಳಗ್ಗೆಯಿಂದಲೇ ಭಕ್ತರು ಸಾಲುಗಟ್ಟಿ ಆಗಮಿಸುತ್ತಿದ್ದುದು ಕಂಡು ಬಂತು. ಗುರುಪೂರ್ಣಿಮೆಯ ಹಿಂದಿನ ದಿನವೇ ವಿಶೇಷವಾಗಿ ದೇವಾಲಯಗಳ ಒಳಾಂಗಣ ಮತ್ತು ಹೊರಾಂಗಣಗಳನ್ನು ತಳಿರು-ತೋರಣ, ಹೂವು, ಹಣ್ಣು ಹಾಗೂ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು.
ತ್ಯಾಗರಾಜನಗರದಲ್ಲಿ ಕಂಡು ಬಂದ ಭಕ್ತರ ಸಾಲು:ತ್ಯಾಗರಾಜನಗರದ ಸಾಯಿ ಅಧ್ಯಾತ್ಮ ಕೇಂದ್ರದ ಸಾಯಿಮಂದಿರದಲ್ಲಿ ಗುರುಪೂರ್ಣಿಮೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಎರಡು ದಿನಗಳಿಂದ ವಿಶೇಷವಾಗಿ ದೇವಸ್ಥಾನವನ್ನು ವಿವಿಧ ಹೂವಿನಿಂದ ಅಲಂಕರಿಸಲಾಗಿತ್ತು. ವ್ಯಾಸ ಪೂಜೆ, ಆರತಿ, ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಇಡೀ ದಿನ ನಾನಾ ಸಂಘಗಳಿಂದ ಭಜನೆ ನಡೆಯಿತು. ಭಾನುವಾರ ಬೆಳಗ್ಗಿನಿಂದ ರಾತ್ರಿಯವರೆಗೆ ಸುಮಾರು 60 ಸಾವಿರ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. 9 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಉಚಿತವಾಗಿ ಅನ್ನ ದಾಸೋಹ ಮಾಡಲಾಯಿತು.