ಬೆಂಗಳೂರು:ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಎಂದಿಗೂ ಬಂದ್ ಆಗುವುದಿಲ್ಲ. ಇದು ನಿತ್ಯ ಸತ್ಯವಾಗಿದೆ, ನಿರಂತರವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನರಿಂದ ಜಾತಿ ನಿಂದನೆ, ಜೀವ ಬೆದರಿಕೆ ಪ್ರಕರಣ ಸಂಬಂಧ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಮನೆಗೆ ಸಚಿವರು ಸೋಮವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಆ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈಗಾಗಲೇ ಹಲವು ಸಲ ಗೃಹಲಕ್ಷ್ಮಿ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಮತ್ತೊಮ್ಮೆ ಸ್ಪಷ್ಟನೆ ಕೊಡುತ್ತಿದ್ದೇನೆ. ಗೃಹಲಕ್ಷ್ಮಿ ಹಣ ನಿತ್ಯ, ಸತ್ಯ, ನಿರಂತರವಾಗಿದೆ. ಕಳೆದೆರಡು ತಿಂಗಳಿಂದ ಬಾರದಿರುವ ಹಣ ಒಂದೇ ಸಲ ಅಕೌಂಟ್‌ಗೆ ಪಾವತಿಯಾಗಲಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಮೂರು ತಿಂಗಳ ಹಿಂದಷ್ಟೆ ಅರ್ಜಿ ಹಾಕಲು ಅವಕಾಶ ನೀಡಲಾಗಿತ್ತು. ಅವರಿಗೂ ಕೂಡ ಅಷ್ಟು ಬಾಕಿ ಹಣ ಒಟ್ಟಿಗೆ ಜಮೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.
ಮಹಿಳೆಯರ ರಕ್ಷಣೆಗೆ ಸಮಿತಿ ರಚನೆಯಾಗಲಿ:ಚಿತ್ರರಂಗದ ಕಲಾವಿದೆಯರ ಜೊತೆ ಮಹಿಳಾ ಆಯೋಗ ಸಭೆ ಆಯೋಜಿಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಖಂಡಿತಾ ಸಮಿತಿ ರಚನೆ ಆಗಬೇಕು. ನಾನು ಕೂಡ ಸಮಿತಿ ರಚನೆ ಆಗಲಿ ಎಂದು ಹೇಳುತ್ತೇನೆ. ಮುಖ್ಯಮಂತ್ರಿಗಳು ಈಗಾಗಲೇ ಮಾಹಿತಿ ಪಡೆದಿದ್ದಾರೆ. ಚಿತ್ರರಂಗ ಅಷ್ಟೇ ಅಲ್ಲ, ಯಾವ ಕ್ಷೇತ್ರದಲ್ಲೂ ಮಹಿಳೆಯರಿಗೆ ದೌರ್ಜನ್ಯ ಆಗಬಾರದು. ಈ ಬಗ್ಗೆ ನನ್ನ ಬಳಿ ಯಾವ ನಟಿಯರೂ ಬಂದು ಮಾತನಾಡಿಲ್ಲ ಎಂದರು.