ಬಳ್ಳಾರಿ:"ವಾಲ್ಮೀಕಿ ಸಮುದಾಯದಲ್ಲಿ ಹುಟ್ಟಿದವರು ಯಾರೂ ಕೂಡ ಇಂತಹ ನೀಚ ಕೆಲಸಕ್ಕೆ ಕೈ ಹಾಕಲ್ಲ. ಬಳ್ಳಾರಿ ಜಿಲ್ಲೆಗೆ ಬರಬಾರ್ದು ಅಂದುಕೊಂಡಿದ್ದೆ. ಆರೋಪಮುಕ್ತ ಎಂದು ಫ್ರೂವ್ ಮಾಡಿಕೊಂಡು ಬರಬೇಕೆಂದು ಯೋಚಿಸಿದ್ದೆ" ಎಂದು ಹೇಳುತ್ತಾ ಮಾಜಿ ಸಚಿವ ಬಿ.ನಾಗೇಂದ್ರ ಕಣ್ಣೀರು ಹಾಕಿದರು.
ಇಂದು ಬಳ್ಳಾರಿಯಲ್ಲಿ ಆಯೋಜಿಸಲಾದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಕೆಟ್ಟ ರಾಜಕೀಯದಿಂದ ನನ್ನನ್ನು ಜೈಲಿಗೆ ಕಳುಹಿಸಿದರು. ನನ್ನ ವಿರುದ್ಧ ರಾಜಕೀಯ ಮಾಡಿದವರನ್ನು ಈ ಜಿಲ್ಲೆಯಿಂದ ಕಿತ್ತೊಗೆಯುವ ಕೆಲಸ ಮಾಡುತ್ತೇವೆ" ಎಂದರು.
"ನನ್ನ ಆತ್ಮಕ್ಕೆ ಗೊತ್ತು ವಾಲ್ಮೀಕಿ ನಿಗಮದಲ್ಲಿ ಏನ್ ಆಗಿದೆ ಅಂತ. ಮೂರು ತಿಂಗಳಲ್ಲಿ ನಾನು ಜೈಲಿನಲ್ಲಿ ನೋವು ಅನುಭವಿಸಿದ್ದೇನೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ತೀರ್ಮಾನಿಸಿದ್ದೆ. ಹೀಗೆ ಮಾಡಿದರೆ ಜಿಲ್ಲೆ, ರಾಜ್ಯದ ಜನರು ನಾನು ತಪ್ಪು ಮಾಡಿದ್ದೇನೆ ಎಂದು ತಿಳಿದುಕೊಳ್ತಾರೆ. ಹೀಗಾಗಿ ನಾನು ದೋಷಮುಕ್ತನಾಗಿ ಹೊರಬರುವೆ" ಎಂದು ಹೇಳಿದರು.
ಅದ್ಧೂರಿ ಸ್ವಾಗತ: ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಲುಕಿ ಮೂರು ತಿಂಗಳು ಜೈಲುವಾಸ ಅನುಭವಿಸಿದ ಬಳಿಕ ಇಂದು ಬಳ್ಳಾರಿಗೆ ಆಗಮಿಸಿದ ಬಿ.ನಾಗೇಂದ್ರ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು. ಎಸ್ಪಿ ಸರ್ಕಲ್ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಶಾಸಕ ಭರತ್ ರೆಡ್ಡಿ ಅವರೊಂದಿಗೆ ವಾಲ್ಮೀಕಿ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಆ ಬಳಿಕ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಡ್ಯಾನ್ಸ್ ಮಾಡಿದರು.