ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಲ್ಲಿ ಶ್ರೀರಾಮ ಸೇನೆಯ ಅದ್ಧೂರಿ ಶೋಭಾಯಾತ್ರೆ: ಮಾಲಾಧಾರಿಗಳಿಂದ ದತ್ತ ಪಾದುಕೆ ದರ್ಶನ

ಶ್ರೀ ರಾಮಸೇನೆ ಶೋಭಾಯಾತ್ರೆಯಲ್ಲಿ ಭಾಗವಹಿಸಿದ ದತ್ತ ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ, ಇನಾಂ ದತ್ತಾತ್ರೇಯ ಪೀಠದ ಗುಹೆಯಲ್ಲಿ ದತ್ತಪಾದುಕೆ ದರ್ಶನ ಪಡೆದರು.

GRAND PROCESSION OF SRI RAMA SENA
ಶ್ರೀರಾಮ ಸೇನೆಯ ಅದ್ಧೂರಿ ಶೋಭಾಯಾತ್ರೆ (ETV Bharat)

By ETV Bharat Karnataka Team

Published : Nov 10, 2024, 8:17 PM IST

ಚಿಕ್ಕಮಗಳೂರು:ಶ್ರೀ ರಾಮಸೇನೆ ವತಿಯಿಂದ ದತ್ತಮಲಾ ಅಭಿಯಾನ ಹಿನ್ನೆಲೆ ನಗರದಲ್ಲಿ ಇಂದು ಶೋಭಯಾತ್ರೆಗೆ ಚಾಲನೆ ನೀಡಲಾಯಿತು. ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಶಂಕರಮಠದಿಂದ ಆಜಾದ್ ಪಾರ್ಕ್​ವರೆಗೆ ದತ್ತಾತ್ರೇಯ ವಿಗ್ರಹದೊಂದಿಗೆ ಶೋಭಾಯಾತ್ರೆ ನಡೆಸಲಾಯಿತು.

ಪೊಲೀಸರ ಸರ್ಪಗಾವಲಿನಲ್ಲಿ ದತ್ತಮಾಲಾ ಅಭಿಯಾನ; ಪ್ರಮೋದ್ ಮುತಾಲಿಕ್, ಗಂಗಾಧರ ಕುಲಕರ್ಣಿ ಸೇರಿ ಹಲವಾರು ದತ್ತ ಮಾಲಾಧಾರಿಗಳು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಮೆರವಣಿಗೆ ನಂತರ ಪ್ರಮೋದ್ ಮುತಾಲಿಕ್, ಗಂಗಾಧರ ಕುಲಕರ್ಣಿ, ಸ್ವಾಮೀಜಿಗಳು ಸೇರಿದಂತೆ ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ, ಇನಾಂ ದತ್ತಾತ್ರೇಯ ಪೀಠದ ಗುಹೆಯಲ್ಲಿ ದತ್ತಪಾದುಕೆ ದರ್ಶನ ಪಡೆದು, ಹೋಮ ಹವನ ನಡೆಸಿದರು. ಪೊಲೀಸರ ಸರ್ಪಗಾವಲಿನಲ್ಲಿ ದತ್ತಮಾಲಾ ಅಭಿಯಾನ ವಿಜೃಂಭಣೆಯಿಂದ ಜರುಗಿತು.

ಶ್ರೀರಾಮ ಸೇನೆಯ ಅದ್ಧೂರಿ ಶೋಭಾಯಾತ್ರೆ (ETV Bharat)

ಜಿಲ್ಲೆ ಸೇರಿ ರಾಜ್ಯದ ವಿವಿಧ ಕಡೆಗಳಿಂದ ದತ್ತಮಾಲಾಧಾರಿಗಳು ಆಗಮಿಸಿದ್ದು, ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ವಿಶೇಷವಾಗಿ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಮಧ್ಯೆ ನಗರದಲ್ಲಿ ಶ್ರೀರಾಮ ಸೇನೆ ವತಿಯಿಂದ ಧರ್ಮಸಭೆ ನಡೆಸಲಾಗಿದ್ದು, ಧರ್ಮಸಭೆಗೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಲಾಯಿತು. ಶಂಕರಮಠದ ಮುಂಭಾಗದಲ್ಲಿ ಧರ್ಮಸಭೆ ನಡೆದಿದ್ದು, ಪ್ರಮೋದ್ ಮುತಾಲಿಕ್, ಗಂಗಾಧರ ಕುಲಕರ್ಣಿ ಸೇರಿ ಹಲವರು ಭಾಗಿಯಾಗಿದ್ದರು.

2 ದಶಕಗಳ ಬಳಿಕ ಶ್ರೀರಾಮ ಸೇನೆ ವೇದಿಕೆಯಲ್ಲಿ ಕಾಣಿಸಿಕೊಂಡ ಸಿ. ಟಿ. ರವಿ: ಚಿಕ್ಕಮಗಳೂರು ಜಿಲ್ಲೆಯ ದತ್ತ ಪೀಠದಲ್ಲಿ ಶ್ರೀರಾಮ ಸೇನೆಯ ವತಿಯಿಂದ ಅದ್ಧೂರಿಯಾಗಿ ದತ್ತಮಾಲಾ ಉತ್ಸವ ನಡೆಯುತ್ತಿದೆ. ಎರಡು ದಶಕಗಳ ಬಳಿಕ ಶ್ರೀ ರಾಮಸೇನೆ ದತ್ತಮಾಲಾ ವೇದಿಕೆಯನ್ನು ಬಿಜೆಪಿಯ ವಿಧಾನ ಪರಿಷತ್​ ಸದಸ್ಯ ಸಿ. ಟಿ. ರವಿ ಹಂಚಿಕೊಂಡರು. ಶ್ರೀರಾಮ ಸೇನೆ ಸಂಘಟನೆಯಿಂದ ನಡೆದ ಧರ್ಮಸಭೆಯಲ್ಲಿ ಸಿ. ಟಿ. ರವಿ ಭಾಗಿಯಾದರು.

ಎರಡು ದಶಕಗಳ ಹಿಂದೆ ಇಬ್ಭಾಗವಾಗಿದ್ದ ಹೋರಾಟ‌ ಅಂತ್ಯವಾದಂತೆ ಕಾಣಿಸುತ್ತಿದೆ. ದತ್ತಪೀಠವನ್ನು ಹಿಂದೂಗಳ ಪೀಠವನ್ನಾಗಿ ಮಾಡಲು ವಿಶ್ವಹಿಂದೂ ಪರಿಷತ್ ಹಾಗೂ ಶ್ರೀರಾಮಸೇನೆಯಿಂದ ಪ್ರತ್ಯೇಕ ಹೋರಾಟ ಮಾಡಿಕೊಂಡು ಬಂದಿದ್ದರು. ಈಗ ಶ್ರೀ ರಾಮಸೇನೆ ದತ್ತಮಾಲಾ ಉತ್ಸವದಲ್ಲಿ ಸಿ. ಟಿ. ರವಿ ಹಾಗೂ ವಿಹೆಚ್​ಪಿ ಕಾರ್ಯಕರ್ತರು ಭಾಗಿಯಾಗಿದ್ದು, ಒಗ್ಗಟ್ಟಿನ ಪ್ರದರ್ಶನ ಕಂಡುಬಂತು.

ಇದನ್ನೂ ಓದಿ:ಇಂದು ದತ್ತಮಾಲಾ ಅಭಿಯಾನ: 1,700ಕ್ಕೂ ಹೆಚ್ಚು ಪೊಲೀಸರ ನಿಯೋಜನೆ; ಬಾಟಲಿಯಲ್ಲಿ ಪೆಟ್ರೋಲ್ ನೀಡದಂತೆ ಸೂಚನೆ

ABOUT THE AUTHOR

...view details