ಬೆಂಗಳೂರು:ಇಡೀ ದೇಶದಲ್ಲಿ ಮೋದಿ ಪರ ವಾತಾವರಣ ಇದೆ. ಸಹಜವಾಗಿ ರಾಜ್ಯದಲ್ಲಿಯೂ ಬಿಜೆಪಿ ಪರ ಅಲೆ ಇದೆ. 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ಇದ್ದು, ಬಿಜೆಪಿ - ಜೆಡಿಎಸ್ ಒಟ್ಟಾಗಿ ಎಲ್ಲ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಹೆಚ್ ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಮ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ಇಡೀ ದೇಶದಲ್ಲಿ ನರೇಂದ್ರ ಮೋದಿ ಅವರ ಪರವಾದ ಅಲೆ ಇದೆ. ದೇಶದ ಭವಿಷ್ಯದ ದೃಷ್ಟಿಯಿಂದ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಜನರಿಗೆ ಮನವರಿಕೆ ಆಗಿದೆ.
ಮತ ಎಣಿಕೆ ಸಂದರ್ಭದಲ್ಲಿ ಕರ್ನಾಟಕದ 28 ಸೀಟುಗಳಲ್ಲಿ ನಾವು ಒಂದೊಂದು ಸೀಟು ಗೆಲ್ಲುವಾಗ ಕಾಂಗ್ರೆಸ್‍ನವರು ಪರಿತಪಿಸುತ್ತಾರೆ. ಬಿಜೆಪಿ ಪರ ಅಂತಹ ವಾತಾವರಣ ಈಗಾಗಲೇ ನಿರ್ಮಾಣವಾಗಿದೆ. ನಮ್ಮ ಕಾರ್ಯಕರ್ತರು ರಣೋತ್ಸಾಹದಲ್ಲಿದ್ದಾರೆ. ಮೋದಿ ಮತ್ತೊಮ್ಮೆ ಎಂಬ ವಿಷಯದಲ್ಲಿ ಮತದಾರರು ಕಾತರರಾಗಿದ್ದಾರೆ. ಬಿಜೆಪಿ- ಜೆಡಿಎಸ್ ಒಗ್ಗಟ್ಟಾಗಿ ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಇದೆ ಎಂದರು.
ಇಂದು ದೆಹಲಿಗೆ ತೆರಳುತ್ತಿದ್ದು, ನಾಳೆ ಅಮಿತ್ ಶಾ ಅವರ ಭೇಟಿ ಮಾಡುತ್ತೇನೆ. ರಾಜ್ಯಸಭೆ ಚುನಾವಣೆ ಅಭ್ಯರ್ಥಿ ಹಾಗೂ ಪರಿಷತ್ ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡುತ್ತೇನೆ. ರಾಜ್ಯಸಭೆಗೆ ಅಭ್ಯರ್ಥಿ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ವರಿಷ್ಠರ ಜತೆ ಚರ್ಚಿಸುವೆ ಎಂದರು.
ಸಿಎಂ ಮಾಂಸಾಹಾರ ಸೇವಿಸಿ ಸುತ್ತೂರು ಶ್ರೀಗಳ ಭೇಟಿ, ಆರೋಪ:ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ನಿನ್ನೆ ಮಧ್ಯಾಹ್ನ ದೆಹಲಿಯಲ್ಲಿ ಮಾಂಸಾಹಾರ ಸೇವಿಸಿ ರಾತ್ರಿ ಸುತ್ತೂರು ಜಗದ್ಗುರುಗಳ ಗದ್ದುಗೆಗೆ ಭೇಟಿ ಕೊಟ್ಟಿದ್ದಾರೆ. ‘ಇದು ಬಹಳ ದುರದೃಷ್ಟಕರ. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳು ಎಂಬುದನ್ನು ಎಲ್ಲೋ ಒಂದು ಕಡೆ ಮರೆಯುತ್ತಿದ್ದಾರೆ ಎಂಬುದು ನನ್ನ ಭಾವನೆ. ಇದು ಮೊದಲ ಬಾರಿ ಏನಲ್ಲ. ಹಲವು ಸಂದರ್ಭಗಳಲ್ಲಿ ಈ ರೀತಿ ಘಟನೆಗಳು ಪುನರಾವರ್ತನೆ ಆಗಿವೆ ಎಂದರು.