ಶಿವಮೊಗ್ಗ:ವಿಧಾನ ಪರಿಷತ್ನ ನೈರುತ್ಯ ಪದವಿಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಪದವಿಧರ, ಶಿಕ್ಷಕರು ಉತ್ಸುಕತೆಯಿಂದ ಮತದಾನ ಮಾಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ನಗರ ಹಾಗೂ ಪಟ್ಟಣ ಭಾಗದಲ್ಲಿ ಚುರುಕಿನ ವೋಟಿಂಗ್ ನಡೆಯುತ್ತಿದೆ. ಮತದಾರರು ಬೆಳಗ್ಗೆ ಮತಗಟ್ಟೆಗಳತ್ತ ಉತ್ಸಾಹದಿಂದ ಬಂದು ಮತದಾನ ಮಾಡುತ್ತಿದ್ದಾರೆ. ಸರದಿ ಸಾಲಿನಲ್ಲಿ ನಿಂತು ಶಾಂತಿಯುತವಾಗಿ ಮತದಾನ ಮಾಡುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 32 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಪದವಿಧರ ಕ್ಷೇತ್ರಕ್ಕೆ ಒಟ್ಟು 27.412 ಮತದಾರರಿದ್ದಾರೆ. ಅದೇ ರೀತಿ ಶಿಕ್ಷಕರ ಕ್ಷೇತ್ರಕ್ಕೆ 4365 ಮತದಾರರಿದ್ದಾರೆ.
ಜಿಲ್ಲೆಯಲ್ಲಿ ಮತದಾನ ಮಾಡಿದ ಪ್ರಮುಖರು: ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶಿಕಾರಿಪುರ ಪಟ್ಟಣದ ತಾಲೂಕು ಅಡಳಿತ ಕಚೇರಿಯಲ್ಲಿಯ ಬೂತ್ ನಂಬರ್ 37 A ಮತಗಟ್ಟೆಯಲ್ಲಿ ಬೆಳಗ್ಗೆಯೇ ತಮ್ಮ ಪತ್ನಿ ಪ್ರೇಮ ಜೊತೆ ಮತದಾನ ಮಾಡಿದರು. ಈ ವೇಳೆ ಮಾತನಾಡಿದ ಅವರು, ಶಿಕ್ಷಕರ ಕ್ಷೇತ್ರದಲ್ಲಿ ಭೋಜೇಗೌಡ ಹಾಗೂ ಪದವಿಧರ ಕ್ಷೇತ್ರದಲ್ಲಿ ಡಾ.ಧನಂಜಯ್ ಸರ್ಜಿ ಅವರು ಮೊದಲ ಪ್ರಾಶಸ್ತ್ಯದ ಮತದಲ್ಲಿಯೇ ಜಯಶಾಲಿಗಳಾಗುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಅದೇ ರೀತಿ ರಾಷ್ಟ್ರಭಕ್ತ ಬಳಗದ ಕೆ.ಎಸ್. ಈಶ್ವರಪ್ಪ ಅವರು ಶಿವಮೊಗ್ಗ ನಗರದ ಕೋಟೆ ರಸ್ತೆಯ ಕೌಶಲ್ಯಾಭಿವೃದ್ಧಿ ಕಚೇರಿಯಲ್ಲಿ ತಮ್ಮ ಪುತ್ರ ಹಾಗೂ ಸೊಸೆ ಜೊತೆ ಮತದಾನ ಮಾಡಿದರು. ಬಿಜೆಪಿ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರು ಬಾಲರಾಜ್ ಅರಸ್ ರಸ್ತೆಯ ಲೋಕೋಪಯೋಗಿ ಅಧೀಕ್ಷಕರ ಕಚೇರಿಯ ಬೂತ್ ನಂಬರ್ 59 A ರಲ್ಲಿ ಹಕ್ಕು ಚಲಾಯಿಸಿದರು.
ಇನ್ನು ಬಿಜೆಪಿ ಅಭ್ಯರ್ಥಿ ಡಾ.ಧನಂಜಯ್ ಸರ್ಜಿ ಅವರು ಶಿವಮೊಗ್ಗ ವಿನೋಬನಗರದ ಡಿ.ವಿ.ಎಸ್.ಶಾಲೆಯಲ್ಲಿ ಬೂತ್ ನಂಬರ್ 58 A ರಲ್ಲಿ ಮತದಾನ ಮಾಡಿದರು. ನಂತರ ಮಾತನಾಡಿದ ಅವರು, ಇದು ಕಾರ್ಯಕರ್ತರ ಚುನಾವಣೆಯಾಗಿದೆ. ನಮ್ಮ ಕ್ಷೇತ್ರದ ಎಲ್ಲಾ ಕಡೆ ಉತ್ತಮವಾದ ಮತದಾನ ನಡೆಯುತ್ತಿದೆ. ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ. ಇದು ಕಾರ್ಯಕರ್ತರ ಗೆಲುವಾಗಲಿದೆ. ನಮ್ಮ ಶತ್ರುಗಳ ಕೊನೆಯ ಅಸ್ತ್ರವಾಗಿ ನನ್ನ ವಿರುದ್ಧ ಅಪಪ್ರಚಾರ ನಡೆಸಲಾಯಿತು. ಆದರು ಮತದಾರರು ಬುದ್ಧಿವಂತರಿದ್ದಾರೆ. ನಾನು ಅದೇ ರೀತಿ ಶಿಕ್ಷಕರ ಕ್ಷೇತ್ರದ ಭೋಜೇಗೌಡ ಅವರು ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿ ಎಸ್.ಪಿ.ದಿನೇಶ್ ಅವರು ವಿನೋಬನಗರದ ಡಿ.ವಿ.ಎಸ್.ಶಾಲೆಯ ಬೂತ್ ನಂಬರ್ 58 ರಲ್ಲಿ ಮತದಾನ ಮಾಡಿದರು. ನಂತರ ಮಾತನಾಡಿದ ಅವರು, ಈ ಬಾರಿ ಪದವಿಧರರು ನನಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರು ನಗರದ ಬಾಲರಾಜ್ ಅರಸ್ ರಸ್ತೆಯ ಲೋಕೋಪಯೋಗಿ ಅಧಿಕ್ಷಕರ ಕಚೇರಿಯ ಬೂತ್ ನಂಬರ್ 59 A ನಲ್ಲಿ ತಮ್ಮ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು. ನಂತರ ಮಾತನಾಡಿದ ಅವರು, ಮತದಾರರು ಈ ಬಾರಿ ನನ್ನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ. ನಾನು ಹಿಂದೆ ಮಾಡಿದ ಹೋರಾಟವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸಿದ್ದೇನೆ. ಪದವಿಧರರು ನನಗೆ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಓದಿ:ಸಿದ್ದರಾಮಯ್ಯ - ಕುಮಾರಸ್ವಾಮಿ ಪರಸ್ಪರ ನಮಸ್ಕಾರ; ಎದುರಾದರೂ ಮುಖ ನೋಡದ ಡಿಕೆಶಿ - ಹೆಚ್ಡಿಕೆ - CM Siddaramaiah