ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಬಡಾವಣೆಯೊಂದರಲ್ಲಿ ಸಾಮಾನ್ಯ ಜನರ ನಿವೇಶನಗಳನ್ನು ಪಾಲಿಕೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ಪ್ರಭಾವಿಗಳು ಕಬಳಿಸಲು ಮುಂದಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಧಿಕಾರಿಗಳಿರುವುದು ಜನಸಾಮಾನ್ಯರ ಪರ ಸೇವೆಗೇ ವಿನಃ ಪ್ರಭಾವಿಗಳ ಪರ ಸೇವೆ ಸಲ್ಲಿಸಲು ಅಲ್ಲ ಎಂದು ಚಾಟಿ ಬೀಸಿತು.
ಅಲ್ಲದೆ, ಬಿಬಿಎಂಪಿ ಶಾಸನಬದ್ಧ ಸಂಸ್ಥೆಯಾಗಿದ್ದು, ಸಾಮಾನ್ಯ ಜನರ ಹಿತಾಸಕ್ತಿ ಈಡೇರಿಕೆಗೆ ರಚಿಸಲಾಗಿದೆ. ಇದಕ್ಕೆ ಬದಲಾಗಿ ಪ್ರಭಾವಿಗಳ ಹಿತಾಸಕ್ತಿ ರಕ್ಷಣೆಗಲ್ಲ. ಈ ರೀತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.
ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಬಿಬಿಎಂಪಿ ನೀಡಿದ್ದ ನೋಟಿಸ್ ಪ್ರಶ್ನಿಸಿ ಬೆಂಗಳೂರಿನ ರೆಮ್ಕೋ(ಬಿಎಚ್ಇಎಲ್) ಬಡಾವಣೆಯ ನಿವಾಸಿಗಳು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಮಹತ್ವದ ಆದೇಶ ಹೊರಹಾಕಿತು.
ವಿಚಾರಣೆಯಲ್ಲಿ ಅರ್ಜಿದಾರರು ಮಿರ್ಲೆ ವರದರಾಜ್ ಮತ್ತು ಅವರ ಸಂಬಂಧಿ ಮಂಜುನಾಥ್ ಎಂಬವರು ಬಿಬಿಎಂಪಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ತಮ್ಮ ಜಮೀನು ಕಬಳಿಸಿದ್ದಾರೆ. ಈ ಸಂಬಂಧ ದಾಖಲೆಗಳೊಂದಿಗೆ ದೂರು ನೀಡಿದ್ದರೂ ಬಿಬಿಎಂಪಿ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಬಿಬಿಎಂಪಿ ಅಧಿಕಾರಿಗಳು ಖಾಸಗಿ ವ್ಯಕ್ತಿಗಳೊಂದಿಗೆ ಕೈಜೋಡಿಸಿರುವ ಆರೋಪ ಸಂಬಂಧ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಲು ಪಾಲಿಕೆ ಮುಖ್ಯ ಆಯುಕ್ತರು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿತು.
ಸರ್ಕಾರಿ ಅಧಿಕಾರಿಗಳು ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸಬೇಕು. ಎಲ್ಲರನ್ನೂ ಸಮಾನಾಗಿ ಪರಿಗಣಿಸಬೇಕು. ದೂರು ಬಂದ ತಕ್ಷಣ ಮತ್ತೊಬ್ಬರನ್ನು ತಾರತಮ್ಯದಿಂದ ನೋಡಬಾರದು, ಖಾಸಗಿ ವ್ಯಕ್ತಿಗಳ ಕೈಗೊಂಬೆಯಾಗಿ ಕಾರ್ಯನಿರ್ವಹಣೆ ಮಾಡಬಾರದು ಎಂದು ಇದೇ ವೇಳೆ ಪೀಠ ಸೂಚನೆ ನೀಡಿದೆ. ಪ್ರಕರಣದಲ್ಲಿ ಮಿರ್ಲೆ ವರದರಾಜು ಮತ್ತು ಮಂಜುನಾಥ್ ಎಂಬವರ ಪ್ರಸ್ತುತದ ಪ್ರಕರಣ ಆಸ್ತಿಯ ಮೇಲೆ ಹಕ್ಕು ಹೊಂದಿರಬಹುದು ಅಥವಾ ಇಲ್ಲದಿರಬಹುದು. ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಪರವಾಗಿ ಕೆಲ ಮಾಡುವುದು ಕಾನೂನಿಗೆ ವಿರುದ್ಧವಾಗುತ್ತದೆ ಎಂದು ಪೀಠ ತಿಳಿಸಿದೆ.