ಹುಬ್ಬಳ್ಳಿ: "ರಾಜ್ಯ ರಾಜಕಾರಣ ಹೊಲಸೆದ್ದು ಹೋಗಿದೆ. ಬಿಜೆಪಿಯವರು ಇಷ್ಟು ದಿನ ರಾಮನ ಹೆಸರಿನಲ್ಲಿ ವೋಟ್ ಕೇಳಿದ್ರು. ಇದೀಗ ಸಾಬರ ಹೆಸರಲ್ಲಿ ವೋಟ್ ಕೇಳುತ್ತಿದ್ದಾರೆ. ಅವರಿಗೆ ಎಷ್ಟು ಗತಿಗೇಡು ಬಂದಿದೆ" ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾತನಾಡಿದ ಅವರು, "ಯತ್ನಾಳ್ ಹಿಂದೂ ಸಮಾವೇಶ ಅಂತಾರೆ. ವಿಜಯೇಂದ್ರ, ಯಡಿಯೂರಪ್ಪ ಹಿಂದೂ ಅಲ್ವಾ? ವಕ್ಫ್ ವಿಚಾರವಾಗಿ ನಾನು ರಾಜ್ಯ ಸರ್ಕಾರಕ್ಕೆ ಒಂದು ಪೇಪರ್ ಅಲ್ಲಿ ಜಾಹೀರಾತು ಕೊಡಲು ಹೇಳುತ್ತೇನೆ. ಯಾರ ಹೆಸರಲ್ಲಿ ಪಹಣಿ ಇದೆಯೋ, ಅವನೇ ಭೂ ಒಡೆಯ. ಇದಕ್ಕೆ ಯಾಕೆ ಚಳವಳಿ ಬೇಕು? ಇವರಿಗೆ ವಿಷಯ ಇಲ್ಲ, ಹೀಗಾಗಿ ಇದನ್ನು ಹಿಡಿದುಕೊಂಡು ಹೋಗುತ್ತಿದ್ದಾರೆ. ಹಿಂದುತ್ವದ ಮೇಲೆ ವೋಟ್ ಬರಲ್ಲ. ಹಾಗಾಗಿ ಹಿಂದುತ್ವ ಸಾಕಾಗಿ ಹೋಗಿದೆ" ಎಂದರು.
ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು: "ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು. ಬಸವಣ್ಣನ ಬಗ್ಗೆ ಮಾತಾಡುತ್ತಾರೆ. ಎಲ್ಲಿ ಅವರೂ ಕೂಡಲಸಂಗಮ ನದಿಗೆ ಹಾರ್ತಾರೋ ಏನೋ" ಎಂದು ಯತ್ನಾಳ್ ವಿರುದ್ಧ ವ್ಯಂಗ್ಯವಾಡಿದರು.
"ಯತ್ನಾಳ್ ಮೊದಲು ಸಾಣೇಹಳ್ಳಿಗೆ ಹೋಗಿ ರಾಗಿ ಮುದ್ದೆ ತಿಂದು ಬಸವ ತತ್ವ ಕಲಿಯಲಿ. ವಕ್ಫ್ ಎಂದರೇನು? ವಕ್ಫ್ ಕಾಯ್ದೆ ಮಾಡಿದ್ದು ಕಾಂಗ್ರೆಸ್ ಅಲ್ಲ. ಅದನ್ನು ಮಾಡಿದ್ದು ಬ್ರಿಟಿಷರು. ಯಾವ ಆಸ್ತಿಯನ್ನು ವಕ್ಫ್ ಎಂದು ಹೇಳಲು ಆಗಲ್ಲ. ಅದಕ್ಕೆ ಅದರದೇ ಆದ ನಿಯಮ ಇದೆ. ಆ ಹುಚ್ಚ ಮಂತ್ರಿ ಅದಾಲತ್ ಮಾಡಿ, ರಸ್ತೆಯಲ್ಲಿರೋ ಕಸವನ್ನು ಮೈಮೇಲೆ ಹಾಕಿಕೊಂಡ" ಎಂದು ಪರೋಕ್ಷವಾಗಿ ಜಮೀರ್ ಅಹಮ್ಮದ್ಗೆ ಕುಟುಕಿದರು.
ನಿಮ್ಮಿಬ್ಬರ ಜಗಳದಲ್ಲಿ ಸಾಬರನ್ನು ಏಕೆ ಎಳೆದು ತರುತ್ತೀರಿ - ಇಬ್ರಾಹಿಂ: "ಇವರು ಎಲ್ಲೆಲ್ಲಿ ದಾರಿ ತಪ್ಪಿಸಿದ್ದಾರೋ, ನಾವು ಅದನ್ನು ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಯತ್ನಾಳ್ ಅವರೇ ನಿಮ್ಮ ವಿಜಯೇಂದ್ರ ಜಗಳದಲ್ಲಿ ಸಾಬರನ್ನು ಯಾಕೆ ತರ್ತೀರಿ. ವಿಜಯೇಂದ್ರ ಹಾಗೂ ಯತ್ನಾಳ್ ಗಲಾಟೆಯನ್ನು ಕಂಟ್ರೋಲ್ ಮಾಡಲು ಹೈಕಮಾಂಡ್ಗೆ ಆಗುತ್ತಿಲ್ಲ. ನೋಟಿಸ್ ಕೊಟ್ಟರೂ ಏನೂ ಆಗಲ್ಲ. ಯತ್ನಾಳ್ ಅವರನ್ನು ಪಕ್ಷದಿಂದ ಬಿಟ್ಟರೆ ಏನು ನಷ್ಟ ಆಗುತ್ತೆ ಗೊತ್ತಿಲ್ಲ. ಯಡಿಯೂರಪ್ಪ ಅವರನ್ನು ಬಿಟ್ಟರೆ ನಷ್ಟ ಆಗುತ್ತೆ ಎನ್ನುವುದನ್ನು ಈಗಾಗಲೇ ತೋರಿಸಿದ್ದಾರೆ" ಎಂದರು.
"ವಕ್ಫ್ ಕಾಯ್ದೆಯ ವಿಚಾರದಲ್ಲಿ ಜಿಲ್ಲಾಧಿಕಾರಿಗೆ ಅಧಿಕಾರ ಕೊಡಬೇಕು ಅಂತಾರೆ. ಜಿಲ್ಲಾಧಿಕಾರಿಗೆ ಅಲ್ಲ, ಹೈಕೋರ್ಟ್ ನ್ಯಾಯಾಧೀಶರಿಗೆ ಅಧಿಕಾರ ಕೊಡಿ. ಹಿಂದೂ ಸಮಾವೇಶ ಯಾಕೆ, ಮಹಾದಾಯಿ ವಿಚಾರವಾಗಿ ಸಭೆ ಮಾಡಿ" ಎಂದರು.
’ಆ ಪ್ರತಾಪ್ ಸಿಂಹಗೆ ಕಾಯ್ದೆಯೇ ಗೊತ್ತಿಲ್ಲ‘: "ಆ ಪ್ರತಾಪ್ ಸಿಂಹಗೆ ಕಾಯ್ದೆಯೇ ಗೊತ್ತಿಲ್ಲ. ಹೈಕಮಾಂಡ್ ಹಾಗೂ ಮೋದಿ, ಅಮಿತ್ ಶಾ ಅವರನ್ನು ಒಲಿಸಲು ವಕ್ಫ್ ಹೋರಾಟ ಮಾಡುತ್ತಿದ್ದಾರೆ. ವಿಜಯಪುರದಲ್ಲಿ ಹೋಗಿ ದಾಂಧಲೆ ಮಾಡಿದ್ರು. ಬಿಜೆಪಿಯವರನ್ನು ಎಲ್ಲ ಸಮಾಜದ ಜನ ತಿರಸ್ಕಾರ ಮಾಡಿದ್ದಾರೆ. ಕುಮಾರಸ್ವಾಮಿ ಅವರನ್ನು ಅಡ್ರೆಸ್ ಇಲ್ಲದಂತೆ ಕಳುಹಿಸಿದ್ದಾರೆ. ನಾನು ಇದ್ದ ಕಾರಣಕ್ಕೆ ಕುಮಾರಸ್ವಾಮಿ ಗೆದ್ದಿದ್ದರು. ಮುಸ್ಲಿಂ ವೋಟ್ನಿಂದ ನಾವು 19 ಸೀಟ್ ಗೆದ್ದಿದ್ದು. ಬಿಜೆಪಿ ಜೊತೆ ಹೋಗಿರೋದಕ್ಕೆ ನಾವು ಬೇರೆಯಾಗಿದ್ದು. ಇದೀಗ ಬಿಜೆಪಿಯವರ ಜೊತೆ ಲವ್ ಮ್ಯಾರೇಜ್ ಆಗಿದ್ದಾರೆ. ನೊಡೋಣ ಎಷ್ಟು ದಿನ ಇರುತ್ತೆ ಅಂತ. ನಾವು ತೃತೀಯ ರಂಗ ಹುಟ್ಟುಹಾಕುತ್ತೇವೆ. ಒಂದು ಸಂಘ ಕಟ್ಟಲು ತೀರ್ಮಾನ ಮಾಡಿದ್ದೇವೆ" ಎಂದರು.
"ಸಿದ್ದರಾಮಯ್ಯ ಅವರ ಸ್ವಾಭಿಮಾನದ ಸಮಾವೇಶದ ಬಗ್ಗೆ ನಾನು ಮಾತಾಡಲ್ಲ. ಸಿದ್ದರಾಮಯ್ಯ ಶಕ್ತಿ ಸಿದ್ದರಾಮಯ್ಯಗೆ ಇದೆ. ಡಿ.ಕೆ.ಶಿವಕುಮಾರ್ ಶಕ್ತಿ ಅವರಿಗೆ ಇದೆ. ಸಿಎಂ ಅವರನ್ನು ಇಳಿಸುವ ಪ್ರಯತ್ನದ ಬಗ್ಗೆ ಗೊತ್ತಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಫ್ರಸ್ಟ್ರೇಟ್ ಆಗಿದ್ದಾರೆ. ಹಾಗೆ ಆಗಬೇಡಿ. ಅವರೇ ಎಲ್ಲಿ ನದಿಗೆ ಹಾರ್ತಾರೋ ಎನ್ನುವ ಅನುಮಾನ ಇದೆ. ಹೀಗಾಗಿ ಬಸವ ತತ್ವ ಓದಿ ನಿಮಗೆ ಜ್ಞಾನೋದಯ ಆಗತ್ತದೆ. ಮೋಹನ್ ಭಾಗವತ್ ಮೊದಲು ಮದುವೆಯಾಗಲಿ" ಎಂದು ಹೇಳಿದರು.
ಮುಸ್ಲಿಂರಿಗೆ ಮತದಾನದ ಹಕ್ಕು ಇಲ್ಲ ಎಂದ ಸ್ವಾಮೀಜಿ ಮೇಲೆ ಕೇಸ್ ದಾಖಲಿಸಿರುವ ಕುರಿತು ಪ್ರತಿಕ್ರಿಯಿಸಿ, "ಅವರ ಮೇಲೆ ಎಫ್ಐಆರ್ ಹಾಕಬೇಡಿ. ಅವರು ವಿಷಾಧ ವ್ಯಕ್ತಪಡಿಸಿದ್ದಾರೆ. ಹಿರಿಯರಿದ್ದಾರೆ. ಕೂಡಲೇ ಅವರ ಮೇಲೆ ಹಾಕಿರುವ ಕೇಸ್ ವಾಪಸ್ ತೆಗೆದುಕೊಳ್ಳಿ, ಇದು ನನ್ನ ಪ್ರಾರ್ಥನೆ" ಎಂದರು.
ಇದನ್ನೂ ಓದಿ:ಬಿಟಿಡಿಎ ಸಭೆಗಳಲ್ಲಿ ಭಾಗಿಯಾಗದಂತೆ ನಿರ್ಬಂಧ: ಹೈಕೋರ್ಟ್ ಮೆಟ್ಟಿಲೇರಿದ ಎಂಎಲ್‌ಸಿ ಪಿ.ಹೆಚ್.ಪೂಜಾರ