ಬೆಂಗಳೂರು: ವಕ್ಫ್ ಮಂಡಳಿ ನೋಟಿಸ್ ರಾಜ್ಯದಲ್ಲಿ ಈಗ ಸಾಕಷ್ಟು ಸದ್ದು ಮಾಡಿದೆ. ವಕ್ಫ್ ಆಸ್ತಿ ಒತ್ತುವರಿ ತೆರವು ವಿವಾದ ಮುನ್ನಲೆಗೆ ಬಂದ ಬೆನ್ನಲ್ಲೇ ಇದೀಗ ರಾಜ್ಯ ಮುಜರಾಯಿ ಇಲಾಖೆಯೂ ತನ್ನ ದೇವಾಲಯಗಳ ಆಸ್ತಿ ರಕ್ಷಣೆಗೆ ಮುಂದಾಗಿದೆ.
ವಕ್ಫ್ ಆಸ್ತಿ ಇದೀಗ ರಾಜ್ಯದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ವಕ್ಫ್ ಮಂಡಳಿ ರೈತರ ಜಮೀನುಗಳಿಗೆ ವಕ್ಫ್ ಆಸ್ತಿ ಎಂದು ನೋಟಿಸ್ ನೀಡಿರುವುದು ದೊಡ್ಡ ಸಂಘರ್ಷಕ್ಕೆ ಉಂಟು ಮಾಡಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಕ್ಫ್ ಮಂಡಳಿಯಿಂದ ತರಾತುರಿಯಲ್ಲಿ ವಕ್ಫ್ ಆಸ್ತಿ ಒತ್ತುವರಿ ಎಂದು ನೋಟಿಸ್ ನೀಡಲಾಗಿತ್ತು. ವಕ್ಫ್ ಆಸ್ತಿ ಒತ್ತುವರಿ ಎಂಬ ಕಾರಣ ಹೇಳಿ ತನ್ನ ಪರಮಾಧಿಕಾರ ಬಳಸಿ ವಕ್ಫ್ ಆಸ್ತಿ ಮರುಸ್ವಾಧೀನಕ್ಕೆ ಮುಂದಾಗಿತ್ತು. ಇದರ ಮಧ್ಯೆ ಇದೀಗ ಮುಜರಾಯಿ ಇಲಾಖೆ ದೇವಾಲಯಗಳ ಆಸ್ತಿ ರಕ್ಷಣೆಗೆ ಮುಂದಾಗಿದೆ. ಮುಜರಾಯಿ ವ್ಯಾಪ್ತಿಯ ದೇವಾಲಯಗಳ ಸಾವಿರಾರು ಎಕರೆ ಜಮೀನು ಒತ್ತುವರಿಯಾಗಿದ್ದು, ಅವುಗಳ ತೆರವಿಗೆ ತೀರ್ಮಾನಿಸಿದೆ.
ಸರ್ವೆ ನಡೆಸಿ, ಒತ್ತುವರಿ ತೆರವಿಗೆ ಸೂಚನೆ:ಇತ್ತೀಚೆಗೆ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದ ಆಸ್ತಿಯನ್ನು ಸರ್ವೆ ಮಾಡಿ, ಒತ್ತುವರಿ ತೆರವು ಮಾಡಿ ದಾಖಲೆ ಮಾಡಲು ಹಾಗೂ ಆಸ್ತಿಗಳನ್ನು ರಕ್ಷಿಸಲು ತೀರ್ಮಾನಿಸಲಾಗಿದೆ.
ಈ ಸಂಬಂಧ ಪ್ರತ್ಯೇಕ ಸಭೆ ನಡೆಸಿರುವ ಹಿಂದೂ ಧಾರ್ಮಿಕ ಧತ್ತಿ ಇಲಾಖೆ ಆಯುಕ್ತರು, ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮುಜರಾಯಿ ದೇವಾಲಯಗಳ ಒತ್ತುವರಿಯಾದ ಆಸ್ತಿಗಳ ಸರ್ವೆ ಕಾರ್ಯ ನಡೆಸಲು ನಿರ್ದೇಶನ ನೀಡಿದ್ದಾರೆ. ಸದ್ಯ ಬೆಂಗಳೂರು ನಗರ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಆಸ್ತಿಗಳ ಸರ್ವೆ ನಡೆಸಿ, ಒತ್ತುವರಿ ತೆರವಿಗೆ ಮೊದಲ ಆದ್ಯತೆ ನೀಡಲಾಗಿದೆ. ಕಂದಾಯ ಇಲಾಖೆ ಸರ್ವೆಯರ್ಗಳ ಸಹಾಯದೊಂದಿಗೆ ಸರ್ವೆ ನಡೆಸಲು ಸೂಚನೆ ನೀಡಲಾಗಿದೆ. ದೇವಾಲಯಕ್ಕೆ ಸಂಬಂಧಿಸಿದ ಸ್ಥಿರಾಸ್ತಿ ಒತ್ತುವರಿ ಪ್ರಕರಣ ಕಂಡುಬಂದಲ್ಲಿ ಅದನ್ನು ತೆರವುಗೊಳಿಸಲು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ ಕಾಯ್ದೆಯಡಿಯಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಇಲಾಖೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಬಹುತೇಕ ಕಡೆ ದೇವಾಲಯಗಳ ಜಾಗವನ್ನು ಒತ್ತುವರಿ ಮಾಡಲಾಗಿದ್ದು, ಸುದೀರ್ಘ ವರ್ಷಗಳಿಂದ ಮನೆ, ಕಟ್ಟಡಗಳನ್ನು ನಿರ್ಮಿಸಿ ವಾಸವಾಗಿದ್ದಾರೆ. ಮೊದಲಿಗೆ ಆಸ್ತಿಗಳ ಪತ್ತೆ ಕಾರ್ಯ ನಡೆಸಿ, ಮುಜರಾಯಿ ದೇವಾಲಯಗಳ ಆಸ್ತಿಗೆ ಪೆನ್ಸಿಂಗ್ ಅಳವಡಿಸಿ ರಕ್ಷಿಸುವಂತೆ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ. ಬಳಿಕ ಒತ್ತುವರಿ ಭೂಮಿಯನ್ನು ತೆರವು ಮಾಡುವ ನಿಟ್ಟಿನಲ್ಲಿ ಕಾನೂನು ಹೋರಾಟ ನಡೆಸುವ ಸಂಬಂಧ ದಾಖಲೆಗಳನ್ನು ಕ್ರೋಢೀಕರಿಸುವಂತೆ ಸೂಚಿಸಿದ್ದಾರೆ. ಒಂದೆರಡು ತಿಂಗಳೊಳಗೆ ದೇವಾಲಯಗಳ ಆಸ್ತಿಗಳು, ಒತ್ತುವರಿಯ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಇಲಾಖೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ರಾಜ್ಯದ ದೇವಾಲಯಗಳ ಸದ್ಯದ ಆಸ್ತಿ ಏನಿದೆ?ಇದೇ ವರ್ಷದ ಮಾರ್ಚ್ ವರೆಗೆ ಪ್ರಸ್ತುತ ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೆ ಒಳಪಟ್ಟಿರುವ ಪ್ರವರ್ಗ "ಎ" ಮತ್ತು "ಬಿ" ಅಧಿಸೂಚಿತ ದೇವಸ್ಥಾನ/ ಸಂಸ್ಥೆಗಳಿಗೆ ಸಂಬಂದಿಸಿದಂತೆ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಮತ್ತು ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಿರಾಸ್ತಿಯ ಮಾಹಿತಿಯನ್ನು ಮುಜರಾಯಿ ಇಲಾಖೆಗೆ ಸಲ್ಲಿಸಿದ್ದಾರೆ. ಅದರಂತೆ ಗ್ರೇಡ್ 'ಎ' 205 ದೇವಾಲಯಗಳ ಒಟ್ಟು ಸ್ಥಿರಾಸ್ತಿ 6,323 ಎಕರೆ ಇದೆ. ಇನ್ನು ಗ್ರೇಡ್ 'ಬಿ' 193 ದೇವಾಲಯಗಳ ಒಟ್ಟು ಸ್ಥಿರಾಸ್ತಿ 1,555 ಎಕರೆ ಇದೆ ಎಂದು ಮಾಹಿತಿ ನೀಡಿದೆ.
ಇಲಾಖೆ ನೀಡಿದ ಮಾಹಿತಿಯಂತೆ ಎ ಮತ್ತು ಬಿ ಗ್ರೇಡ್ ಮುಜರಾಯಿ ದೇವಸ್ಥಾನಗಳ ಪೈಕಿ ಬೆಂಗಳೂರು ಗ್ರಾಮಾಂತರದಲ್ಲಿ ಸುಮಾರು 1,037.56 ಎಕರೆ ಸ್ಥಿರಾಸ್ತಿ ಹೊಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ಮುಜರಾಯಿ ದೇವಸ್ಥಾನ 1,164.35 ಎಕರೆ ಸ್ಥಿರಾಸ್ತಿ ಹೊಂದಿದೆ. ಬೆಂಗಳೂರು ನಗರದಲ್ಲಿ ಸುಮಾರು 140 ಎಕರೆ ಸ್ಥಿರಾಸ್ತಿ ಇದೆ. ರಾಯಚೂರು ಜಿಲ್ಲೆಯಲ್ಲಿ ಸುಮಾರು 1,102 ಎಕರೆ ಸ್ಥಿರಾಸ್ತಿ ಪತ್ತೆಯಾಗಿದೆ. ಕಲಬುರಗಿ 216 ಎಕರೆ ಸ್ಥಿರಾಸ್ತಿ ಗುರುತಿಸಲಾಗಿದೆ. ಬೀದರ್ನಲ್ಲಿ ಸುಮಾರು 186 ಎಕರೆ ಆಸ್ತಿ ಹೊಂದಿದೆ. ಚಾಮರಾಜನಗರದಲ್ಲಿ 104.30 ಎಕರೆ ಸ್ಥಿರಾಸ್ತಿ ಗುರುತಿಸಲಾಗಿದೆ. ಮೈಸೂರಿನಲ್ಲಿ 506.09 ಎಕರೆ ಸ್ಥಿರಾಸ್ತಿಯನ್ನು ಗುರುತಿಸಲಾಗಿದೆ. ತುಮಕೂರಿನಲ್ಲಿ 276 ಎಕರೆ ಸ್ಥಿರಾಸ್ತಿಯನ್ನು ಈವರೆಗೆ ಗುರುತಿಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಸುಮಾರು 230 ಎಕರೆ ಸ್ಥಿರಾಸ್ತಿ ಇದೆ. ಚಿಕ್ಕಮಗಳೂರಲ್ಲಿ ಸುಮಾರು 126 ಎಕರೆ ಸ್ಥಿರಾಸ್ತಿ ಹೊಂದಿದೆ. ಮಂಡ್ಯದಲ್ಲಿ ಸುಮಾರು 120 ಎಕರೆ, ರಾಮನಗರ 105 ಎಕರೆ, ಶಿವಮೊಗ್ಗ 67.17 ಎಕರೆ ಸ್ಥಿರಾಸ್ತಿ ಗುರುತಿಸಲಾಗಿದೆ.