ಹಾವೇರಿ:ರಾಣೆಬೆನ್ನೂರು ತಾಲೂಕಿನ ಹಳೇ ಮಿನಿ ವಿಧಾನಸೌಧಕ್ಕೆ ಹೊಸ ಕಾಯಕಲ್ಪ ನೀಡುವ ಮೂಲಕ ಆಕರ್ಷಣೀಯ ಕೇಂದ್ರವನ್ನಾಗಿ ಮಾಡಲಾಗಿದೆ. ಕಂದಾಯ ಇಲಾಖೆ ಮತ್ತು ಉಪ ನೋಂದಣಿ ಅಧಿಕಾರಿ ಕಚೇರಿಯ ಸಿಬ್ಬಂದಿಯಿಂದ 1.50 ಲಕ್ಷ ಹಣ ಸಂಗ್ರಹಿಸಿ ಕಚೇರಿಯ ಸುತ್ತಲೂ ಸ್ವಚ್ಛಗೊಳಿಸಿ, ಅದಕ್ಕೆ ಕೆಂಪು ಮತ್ತು ಬಿಳಿ ಮಿಶ್ರಿತ ಬಣ್ಣ ಹಚ್ಚಿ ಹೊಸ ಗೆಟಪ್ ನೀಡಲಾಗಿದೆ. ಹಾಗಾಗಿ ಕಚೇರಿಯ ಸೌಂದರ್ಯ ಇದೀಗ ದೂರದಿಂದ ಎಲ್ಲರನ್ನು ಆಕರ್ಷಿಸುತ್ತಿದೆ.
ದಣಿದು ಬಂದವರಿಗೆ ಆಸನ, ಶುದ್ಧ ಕುಡಿವ ನೀರಿನ ವ್ಯವಸ್ಥೆ:ಆಡಳಿತ ಕಚೇರಿ ಸುಂದರವಾಗಿ ವಿನ್ಯಾಸಗೊಳಿಸಿದ್ದಲ್ಲದೇ ಕಚೇರಿಯನ್ನು ಸಾರ್ವಜನಿಕ ಸ್ನೇಹಿ ಮಾಡಲಾಗಿದೆ. ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ನೀರು ಪೋಲಾಗದಂತೆ ಹಾಗೂ ಗಲೀಜಾಗದಂತೆ ಕ್ರಮ, ಬಿಸಿಲಿನಿಂದ ದಣಿದು ಬಂದ ಸಾರ್ವಜನಿಕರಿಗೆ ಕೂಡಲು ಆಸನ ವ್ಯವಸ್ಥೆ, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಸೇರಿದಂತೆ ಹತ್ತು ಹಲವು ಅನುಕೂಲತೆಗಳನ್ನು ಮಾಡಲಾಗಿದೆ. ಗಣೇಶ ದೇವಸ್ಥಾನಕ್ಕೆ ಟೈಲ್ಸ್ ಅಂಟಿಸಿ ಅದರ ಅಂದ ಸಹ ಹೆಚ್ಚಿಸಲಾಗಿದೆ. ಕಚೇರಿ ಆವರಣದಲ್ಲಿ ಸಸಿಗಳನ್ನು ಹಚ್ಚಿ ಉದ್ಯಾನವನಕ್ಕೆ ಹೊಸ ಮೆರುಗು ತರಲಾಗಿದೆ. ಹಳೇ ಕಚೇರಿಯಾಗಿದರೂ ಹೊಸ ರೂಪ ನೋಡುಗರನ್ನು ವಿಸ್ಮಿತಗೊಳಿಸುತ್ತದೆ.
ಸಿಬ್ಬಂದಿಯಿಂದ ಹಣ ಸಂಗ್ರಹಿಸಿ ಹೊಸ ರೂಪ:2001ರಿಂದ ಕಚೇರಿ ಕಟ್ಟಡ ನಿರ್ಮಾಣವಾದಾಗಿನಿಂದ ಸೌಂದರ್ಯ ಮರೀಚಿಕೆಯಾಗಿತ್ತು. ಸುಣ್ಣ-ಬಣ್ಣಕ್ಕಾಗಿ ಕೇಳಿದರೆ ಅನುದಾನ ಇಲ್ಲವೆಂಬ ಉತ್ತರ ಬರುತ್ತಿತ್ತು. ಇದರಿಂದ ಬೇಸತ್ತ ರಾಣೆಬೆನ್ನೂರು ತಹಶೀಲ್ದಾರ್ ಆರ್.ಹೆಚ್. ಭಾಗವಾನ್, ತಾವು ಮತ್ತು ತಮ್ಮ ಸಿಬ್ಬಂದಿಯಿಂದ ಹಣ ಸಂಗ್ರಹಿಸಿ ಕಚೇರಿಯನ್ನು ದುರಸ್ತಿಗೊಳಿಸಿದ್ದಾರೆ. ಅಲ್ಲದೆ ಕಚೇರಿಗೆ ಬಣ್ಣ ಹಚ್ಚಿ, ಎಲೆ-ಅಡಿಕೆ, ಗುಟ್ಕಾ ಕಲೆಗಳಿಂದ ಕೂಡಿದ್ದ ಕಡ್ಡವನ್ನು ಸ್ವಚ್ಛಗೊಳಿಸಿ ಹೊಸ ರೂಪ ನೀಡಿದ್ದಾರೆ. ಕಂದಾಯ ಇಲಾಖೆ ಮತ್ತು ಉಪ ನೋಂದಣಿ ಅಧಿಕಾರಿಗಳ ಸಹಕಾರದಿಂದ ಮಿನಿ ವಿಧಾನಸೌಧ ಇದೀಗ ಕಂಗೊಳಿಸುತ್ತಿದೆ. ಕೆಂಪು ಮತ್ತು ಬಿಳಿ ಬಣ್ಣದಲ್ಲಿ ಅರಳಿನಿಂತ ತಾಲೂಕಾಡಳಿತ ಸೌಧ ಇದೀಗ ಆಕರ್ಷಣೀಯ ಕೇಂದ್ರವಾಗಿ ಮಾರ್ಪಟ್ಟಿದೆ.