ಕರ್ನಾಟಕ

karnataka

ETV Bharat / state

7ನೇ ವೇತನ ಆಯೋಗದ ವರದಿ ಬರೋವರೆಗೂ ಕಾಯುವಂತೆ ಸಿಎಂ ಮನವಿ, ನೌಕರರ ಮುನಿಸು: ಸಮಾಧಾನಪಡಿಸಿದ ಸಿದ್ದರಾಮಯ್ಯ

ಏಳನೇ ವೇತನ ಆಯೋಗದ ವರದಿ ಬರುವತನಕ ಕಾಯಲು ಸರ್ಕಾರಿ ನೌಕರರಿಗೆ ಸಿಎಂ ಮನವಿ ಮಾಡಿದರು. ಈ ವೇಳೆ ನಿರಾಸೆಯಿಂದ ಆಕ್ರೋಶಗೊಂಡ ನೌಕರರನ್ನು ಸಿಎಂ ಸಮಾಧಾನ ಪಡಿಸಿದರು.

Eಏಳನೇ ವೇತನ ಆಯೋಗದ ವರದಿ ಬರುವವರೆಗೂ ಕಾಯಲು ಸಿಎಂ ಮನವಿ
ಏಳನೇ ವೇತನ ಆಯೋಗದ ವರದಿ ಬರುವವರೆಗೂ ಕಾಯಲು ಸಿಎಂ ಮನವಿ

By ETV Bharat Karnataka Team

Published : Feb 27, 2024, 3:52 PM IST

ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆಯಾದರೂ ಏಳನೇ ವೇತನ ಆಯೋಗದಿಂದ ನಿಮ್ಮ ಪರವಾಗಿ ಏನು ವರದಿ ಬರಲಿದೆಯೋ ಅದನ್ನು ಸಕಾರಾತ್ಮಕವಾಗಿ ತೀರ್ಮಾನ ಮಾಡಲಾಗುತ್ತದೆ. ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿ ಕುರಿತು ಹೆಚ್ಚುವರಿ ಮುಖ್ಯಕಾರ್ಯದರ್ಶಿ ವರದಿ ಬರುತ್ತಿದ್ದಂತೆ ಸರ್ಕಾರಿ ನೌಕರರ ಸಂಘದೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುತ್ತದೆ. ಕೂಡಲೇ ಆರೋಗ್ಯ ಸಂಜೀವಿನಿ ಕಡತ ವಿಲೇವಾರಿಗೆ ಸೂಚಿಸುತ್ತೇನೆ ಎಂದು ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಸರ್ಕಾರಿ ನೌಕರರ ಮಹಾ ಸಮ್ಮೇಳನ

ಆದರೆ ವೇತನ ಹೆಚ್ಚಳದ ಘೋಷಣೆಯ ನಿರೀಕ್ಷೆಯಲ್ಲಿದ್ದ ನೌಕರರು ಅಸಮಾಧಾನ ವ್ಯಕ್ತಪಡಿಸಿದರು. ಹಿಂದೆ ಕೊಟ್ಟವನಿಗೆ ಈಗ ಕೊಡಲಾಗಲ್ಲವಾ? ನಂಬಿಕೆ ಇಡಿ ಎಂದು ನೌಕರರನ್ನು ಸಿಎಂ ಸಮಾಧಾನಪಡಿಸಿದರು. ಸರ್ಕಾರ ಸ್ಪಂದಿಸದಿದ್ದರೆ ಮುಂದೆ ರಾಜ್ಯ ಬಂದ್ ಮಾಡೋಣ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ನೌಕರರನ್ನು ಸಮಾಧಾನಪಡಿಸಿದರು.

ಸರ್ಕಾರಿ ನೌಕರರ ಮಹಾ ಸಮ್ಮೇಳನ

ನಗರದ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಮಹಾ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಂವಿಧಾನ ಜಾರಿಯಾಗಿ 75 ವರ್ಷ, ಸರ್ಕಾರಿ ನೌಕರರ ಸಂಘ ಸ್ಥಾಪನೆಯಾಗಿ 103 ವರ್ಷ ತುಂಬಿದೆ. ಈವರೆಗೆ ಅನೇಕ ಸಮ್ಮೇಳನಗಳಾಗಿವೆ. ರಾಜ್ಯದ ಜನರ ಸಮಸ್ಯೆ ಬಗ್ಗೆ, ನೌಕರರ ಸಮಸ್ಯೆ ಬಗ್ಗೆ ಚರ್ಚೆಯಾಗಿದೆ. ಅದಕ್ಕಾಗಿಯೇ ನಮ್ಮ ರಾಜ್ಯದಲ್ಲಿ ನಿಮಗೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು ಎಂದು ಇಂದಿನವರೆಗೂ ಅನೇಕ ವೇತನ ಆಯೋಗ ರಚನೆಯಾಗಿವೆ ಎಂದರು.

ಏಳನೇ ವೇತನ ಆಯೋಗ ರಚನೆಯಾಗಿದೆ, 6ನೇ ವೇತನ ಆಯೋಗ ವರದಿ ಕೊಟ್ಟಾಗ ನಮ್ಮ ಸರ್ಕಾರ ಅಧಿಕಾರದಲ್ಲಿತ್ತು. 5ನೇ ಆಯೋಗದ ವರದಿ ಜಾರಿಗೆ ಬಂದಾಗ ಜೆ ಹೆಚ್ ಪಟೇಲ್ ಮುಖ್ಯಮಂತ್ರಿ ಆಗಿದ್ದರು. ನಾನು ಹಣಕಾಸು ಸಚಿವ ಮತ್ತು ಡಿಸಿಎಂ ಆಗಿದ್ದೆ. ಆಗಲೂ ನನ್ನ ಮೇಲೆ ದೊಡ್ಡ ಅಪಪ್ರಚಾರ ಮಾಡಿದ್ದರು. ನೌಕರರ ವಿರುದ್ಧ ಇದ್ದೇನೆ ಎಂದಿದ್ದರು. ನಾನು ವಿರುದ್ಧ ಇದ್ದರೆ 6ನೇ ವೇತನ ಆಯೋಗ ಯಾಕೆ ಜಾರಿ ಮಾಡುತ್ತಿದ್ದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಸರ್ಕಾರಿ ನೌಕರರ ಮಹಾ ಸಮ್ಮೇಳನ

ಸರ್ಕಾರಿ ನೌಕರರು ಒಟ್ಟಾಗಿರಬೇಕು, ನಿಮಗೆ ನ್ಯಾಯಯುತ ಬೇಡಿಕೆ ಈಡೇರಿಸುವ ಕೆಲಸ ಮಾಡಬೇಕು, ನಾನು ಸರ್ಕಾರಿ ನೌಕರರ 6ನೇ ವೇತನ ಆಯೋಗಕ್ಕೆ 30 ಪರ್ಸೆಂಟ್ ಬೇಸಿಕ್ 10500 ಕೋಟಿ ಹೆಚ್ಚುವರಿಯಾಗಿ ನೀಡುವ ಕೆಲಸ ಮಾಡಿದ್ದೆ, ಈಗ 7ನೇ ವೇತನ ಆಯೋಗದಲ್ಲಿ ನೀವು 40-50 ಪರ್ಸೆಂಟ್ ಕೇಳಿ. ನನ್ನದೇನು ತಕರಾರು ಇಲ್ಲ. ಹಿಂದೆ 30 ಪರ್ಸೆಂಟ್ ಕೊಟ್ಟಿದ್ದೇವೆ. ಮಧ್ಯಂತರ ತೀರ್ಮಾನ 17 ಪರ್ಸೆಂಟ್ ಎಂದು ಹಿಂದಿನ ಸರ್ಕಾರದಲ್ಲಿ ತೀರ್ಮಾನವಾಗಿದೆ.

ಏಳನೇ ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ನಮಗೆ ಇನ್ನೂ ಸ್ವಲ್ಪ ಸಮಯ ಬೇಕು ಎಂದು ಕೇಳಿದರು. ಮಾರ್ಚ್ 15ರ ವರೆಗೂ ಸಮಯ ಕೊಟ್ಟಿದ್ದೇವೆ, ಕೆಲ ದಿನಗಳ ಹಿಂದೆ ಮಾತುಕತೆ ನಡೆಸಿ ಆದಷ್ಟು ಜಾಗೃತೆಯಿಂದ ವರದಿ ಕೊಡಿ ಎಂದಿದ್ದೇನೆ. ನೀತಿ ಸಂಹಿತೆ ಬರುವ ಸಾಧ್ಯತೆ ಇದೆ. ಹಾಗಾಗಿ ಬೇಗ ಕೊಡಿ ಎಂದಿದ್ದೇನೆ. ಅಂತಿಮ ವರದಿ ಬರಲೇಬೇಕು, ನಾನು ನಿಮ್ಮ ಪರವಾಗಿದ್ದೇನೆ ಎಂದು ಸಿಎಂ ಅಭಯ ನೀಡಿದರು.

ಸರ್ಕಾರಿ ನೌಕರರ ಮಹಾ ಸಮ್ಮೇಳನ

ನಾವು ಹೆಚ್ಚುವರಿ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇವೆ, ವರದಿ ಬಂದ ನಂತರ ಸರ್ಕಾರಿ ನೌಕರರನ್ನು ಕರೆದು ಮಾತನಾಡಿ ಯೋಗ್ಯ ತೀರ್ಮಾನ ಮಾಡುತ್ತೇವೆ. 2006ರಲ್ಲಿ ಎನ್​ಪಿಎಸ್ ಜಾರಿಗೆ ಬಂದಿದೆ. ಕೇಂದ್ರ ಇದುವರೆಗೂ ತೀರ್ಮಾನ ಮಾಡಿಲ್ಲ, ಇದನ್ನು ನಾವು ಮಾಡಿದ್ದಲ್ಲ, ಈಗ ಹಿಮಾಚಲ, ರಾಜಸ್ಥಾನ, ಛತ್ತೀಸ್​ಗಡ, ಜಾರ್ಖಂಡ್ ರಾಜ್ಯ ಒಪಿಎಸ್ ಮಾಡಿವೆ, ಅಲ್ಲಿನ ವರದಿ ತರಿಸಿಕೊಳ್ಳಲಾಗುತ್ತದೆ. ನಿಮ್ಮ ಸಂಘದವರನ್ನೂ ಕರೆಸಿ ಮಾತನಾಡುತ್ತೇವೆ, ನಿಮ್ಮ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡೋಣ. ಅದೇ ರೀತಿ ಕರ್ನಾಟಕ ಆರೋಗ್ಯ ಸಂಜೀವಿನಿ ಕೂಡಲೇ ತೀರ್ಮಾನಕ್ಕೆ ಸೂಚಿಸಿದ್ದೇನೆ, ಮೂರು ಪ್ರಮುಖ ಹಕ್ಕೊತ್ತಾಯಗಳಿಗೂ ಸಕಾರಾತ್ಮಕವಾಗಿ ತೆಗೆದುಕೊಂಡಿದ್ದೇನೆ, ನೀವು ಯಾರು ಸಂಶಯ ಪಡಬೇಡಿ ನಾನು ನಿಮ್ಮ ಪರವಾಗಿದ್ದೇನೆ. ವರದಿ ಬಂದ ನಂತರ ಧನಾತ್ಮಕವಾಗಿ ತೀರ್ಮಾನ ಮಾಡುತ್ತೇನೆ ಎಂದರು.

ಇದನ್ನೂ ಓದಿ:7ನೇ ರಾಜ್ಯ ವೇತನ ಆಯೋಗದ ಕಾಲಾವಧಿ ಮತ್ತೆ ವಿಸ್ತರಣೆ; ಮಾ.15, 2024 ವರೆಗೆ ವಿಸ್ತರಿಸಿ ಆದೇಶ

ABOUT THE AUTHOR

...view details