ಬೆಂಗಳೂರು: ''ಇವತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಸಂತೋಷದ ದಿನ. 13.50 ಲಕ್ಷ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುತ್ತೇವೆ ಅಂತ ಸರ್ಕಾರ ಹೇಳಿದೆ. ಹೀಗಾಗಿ, ಅವರನ್ನು ಭೇಟಿ ಮಾಡಿ ನಾವು ಅಭಿನಂದನೆ ಸಲ್ಲಿಸಿದ್ದೇವೆ'' ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹೇಳಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ರಚಿಸಲಾದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬುಧವಾರ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಂಘದ ಅಧ್ಯಕ್ಷ ಷಡಕ್ಷರಿ, ''ಆಗಸ್ಟ್ 1ರಿಂದಲೇ ಇದು ಜಾರಿಯಾಗಲಿದೆ. ಇದರಿಂದ ಸರ್ಕಾರಕ್ಕೆ 20 ಸಾವಿರ ಕೋಟಿ ರೂ. ಹೆಚ್ಚುವರಿ ಹೊರಯಾಗಿದೆ ಅಂತ ಸಿಎಂ ಹೇಳಿದರು. ರಾಜ್ಯ ಸರ್ಕಾರಿ ನೌಕರರು ರಕ್ಷಣಾತ್ಮಕವಾಗಿ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಅಂತ ಸಲಹೆ ನೀಡಿದ್ದಾರೆ. ನಾವು ಸಹ ಅವರಿಗೆ ಭರವಸೆ ನೀಡಿದ್ದೇವೆ'' ಎಂದರು.
''ಸರ್ಕಾರಕ್ಕೆ ಆದಾಯಕವಾಗಿ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇವೆ ಎಂಬ ಭರವಸೆ ನೀಡಿದ್ದೇವೆ. ಇದರ ಜೊತೆಗೆ ಜೊತೆ ಓಪಿಎಸ್ ಮತ್ತು ಎನ್ಪಿಎಸ್ ಆಗಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ. ಅದು ಕೂಡ ನಮ್ಮ ಗಮನದಲ್ಲಿದೆ, ಅದನ್ನೂ ಕೂಡ ಸೂಕ್ತ ಸಮಯದಲ್ಲಿ ನೋಡುತ್ತೇವೆ. ಅದರ ಬಗ್ಗೆ ವರದಿ ಸಂಗ್ರಹ ಮಾಡಬೇಕು. ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಏನು ಮಾಡುತ್ತದೆ ಎಂಬುದನ್ನು ನೋಡಬೇಕು. ಕಮಿಟಿಗಳು ಹೇಳುತ್ತಿವೆ. ವರದಿ ಪಡೆದುಕೊಂಡು ಓಪಿಎಸ್, ಎನ್ಪಿಎಸ್ ಮಾಡುತ್ತೇವೆ ಎಂಬ ಭರವಸೆ ಮುಖ್ಯಮಂತ್ರಿಗಳು ನೀಡಿದ್ದಾರೆ'' ಎಂದರು.
''ಆರೋಗ್ಯ ಯೋಜನೆ ಜಾರಿಗೆ ತರುವ ಬಗ್ಗೆ ಹೇಳಿದ್ದಾರೆ. ಸರ್ಕಾರಿ ನೌಕರರಿಗೆ, ಕುಟುಂಬಗಳಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಆಗಸ್ಟ್ ತಿಂಗಳಲ್ಲಿ ಜಾರಿ ಮಾಡುತ್ತೇವೆ ಅಂತ ಸಿಎಂ ಹೇಳಿದರು. ಇದರ ಬಗ್ಗೆ ಜುಲೈ 29ರಂದು ಪ್ರತಿಭಟನೆ ಮಾಡಬೇಕೆಂದುಕೊಂಡಿದ್ದೆವು. ಆದರೆ, ಈಗ ಜುಲೈ 23ಕ್ಕೆ ಕಮಿಟಿ ಮೀಟಿಂಗ್ ಮಾಡಲಿದ್ದೇವೆ. ಅಲ್ಲಿ ತೀರ್ಮಾನ ಮಾಡಿ ಮುಂದಿನ ಹೆಜ್ಜೆ ಇಡುತ್ತೇವೆ. ನಮ್ಮ ಒಂದು ಬೇಡಿಕೆ ಈಡೇರಿಸಿದ್ದಾರೆ. ಹೀಗಾಗಿ, ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ'' ಎಂದು ಷಡಕ್ಷರಿ ತಿಳಿಸಿದರು.
ಇದನ್ನೂ ಓದಿ:ಕನ್ನಡಿಗರಿಗೆ ಉದ್ಯೋಗದ ವಿಧೇಯಕ ಜಾರಿಯಿಂದ ಒಳ್ಳೆಯದಾಗಲಿದೆ: ರಾಮಲಿಂಗಾರೆಡ್ಡಿ - Employment Bill