ಶಿವಮೊಗ್ಗ:ನಿರ್ಬಂಧದ ನಡುವೆಜೋಗ ಜಲಪಾತದ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಜೋಗ ಅಭಿವೃದ್ಧಿ ಪ್ರಾಧಿಕಾರ ಗುಡ್ ನ್ಯೂಸ್ ನೀಡಿದೆ. ಅನಿರೀಕ್ಷಿತವಾಗಿ ಜಲಪಾತದ ವೀಕ್ಷಣೆ ಬರುವ ಪ್ರವಾಸಿಗರಿಗೆ ನಿರಾಸೆಯಾಗಬಾರದು ಎಂಬ ಕಾರಣದಿಂದ ಜಲಪಾತದ ಸ್ವಲ್ಪ ದೂರದಲ್ಲಿ 'ವೀವ್ ಡಕ್' ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಪ್ರವಾಸಿಗರು ಮತ್ತಷ್ಟು ಖುಷ್ ಆಗಿದ್ದಾರೆ.
ಕಳೆದ ಹಲವು ದಿನಗಳಿಂದ ಜೋಗ ಜಲಪಾತದ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಸುತ್ತಿರುವುದರಿಂದ ಹಾಗೂ ಜೋಗದ ಪ್ರವೇಶ ದ್ವಾರದ ಕಮಾನು ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಮೂರು ತಿಂಗಳುಗಳ ಕಾಲ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೆ, ಈಗ ಮಳೆಗಾಲ ಮುಗಿದ ಕಾರಣದಿಂದ ಪ್ರವಾಸಿಗರ ಸಂಖ್ಯೆ ಸಹ ಕಡಿಮೆ ಇರುತ್ತದೆ. ಆದರೆ, ಕೆಲವೊಮ್ಮೆ ಪ್ರವಾಸಿಗರು ಅನಿರೀಕ್ಷಿತವಾಗಿ ಆಗಮಿಸಿದಾಗ ನಿರಾಸೆಯಿಂದ ವಾಪಸ್ ಆಗುತ್ತಿದ್ದರು. ಅಲ್ಲದೆ, ಬೇರೆ ಕಡೆ ಪ್ರವಾಸಕ್ಕೆ ಹೋಗುವವರು ಇಲ್ಲಿಗೆ ಬಂದಾಗ ಜೋಗ ಜಲಪಾತ ವೀಕ್ಷಣೆಗೆ ಅವಕಾಶ ಇಲ್ಲದ ಕಾರಣ ನಿರಾಸೆಯಿಂದ ವಾಪಸ್ ಹೋಗುತ್ತಿದ್ದರು. ಇದರಿಂದ ಜೋಗ ಅಭಿವೃದ್ಧಿ ಪ್ರಾಧಿಕಾರವು ಜೋಗ ಜಲಪಾತ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದೆ.