ಪ್ರವಾಹ ಸಂತ್ರಸ್ತರಾದ ಮೈಳಾಜಿ ಭೋಜಗಾರ ಮಾತನಾಡಿದರು (ETV Bharat) ಬೆಳಗಾವಿ : ಘಟಪ್ರಭಾ ನದಿ ಪ್ರವಾಹ ಅದೆಷ್ಟೋ ಕುಟುಂಬಗಳನ್ನು ಬೀದಿಗೆ ತಂದಿದೆ. ಉಟ್ಟ ಬಟ್ಟೆ ಮೇಲೆ ಮನೆ ಬಿಟ್ಟು ಸಂತ್ರಸ್ತರು ಕಾಳಜಿ ಕೇಂದ್ರದ ಗೂಡು ಸೇರಿದ್ದಾರೆ. ಇಲ್ಲಿರುವ ಸಂತ್ರಸ್ತರದ್ದು ಒಬ್ಬೊಬ್ಬರದ್ದು ಒಂದೊಂದು ಕಥೆ. ಈಟಿವಿ ಭಾರತ ಜೊತೆಗೆ ಮಾತನಾಡಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಸಪ್ತ ನದಿಗಳ ನಾಡು ಬೆಳಗಾವಿ ಅಕ್ಷರಶಃ ಪ್ರವಾಹದಿಂದ ನಲುಗಿ ಹೋಗಿದೆ. ಅದರಲ್ಲೂ ಘಟಪ್ರಭೆ ಅಟ್ಟಹಾಸಕ್ಕೆ ಗೋಕಾಕ್ ಜನ ಬೆಚ್ಚಿಬಿದ್ದಿದ್ದಾರೆ. ಗೋಕಾಕ್ ನಗರ ಸೇರಿ 20ಕ್ಕೂ ಅಧಿಕ ಗ್ರಾಮಗಳು ಭಾಗಶಃ ಮುಳುಗಡೆಯಾಗಿವೆ. ಇಲ್ಲಿನ ಬಡ ಮತ್ತು ಮಧ್ಯಮ ವರ್ಗದ ಜನರು ತಮ್ಮ ಜಾನುವಾರು ಕಟ್ಟಿಕೊಂಡು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
'ಜಿಲ್ಲಾಡಳಿತ ಊಟ, ವಸತಿ ವ್ಯವಸ್ಥೆ ಮಾಡಿದೆ. ಆದರೆ, ಮುಂದೆ ಜೀವನ ಹೇಗೋ ಅಂತಾ ಚಿಂತೆ ಮಾಡಿ, ಊಟ ಹೋಗುತ್ತಿಲ್ಲ. ಕಣ್ಣಿಗೆ ನಿದ್ದೆ ಹತ್ತುತ್ತಿಲ್ಲ' ಹೀಗೆ ಗೋಕಾಕಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿರುವ ವೃದ್ಧೆ ಮೈಳಾಜಿ ಭೋಜಗಾರ ಈಟಿವಿ ಭಾರತ ಜೊತೆಗೆ ಅಳಲು ತೋಡಿಕೊಂಡರು.
'ನನಗಿದ್ದ ಇಬ್ಬರು ಗಂಡು ಮಕ್ಕಳು ತೀರಿಕೊಂಡಿದ್ದಾರೆ. ಮಗಳು ಮದುವೆ ಆಗಿಲ್ಲ. ಆಕೆಯೇ ದುಡಿದು ನನ್ನನ್ನು ಸಾಕುತ್ತಿದ್ದಾಳೆ. ಮನೆಗೆ ನೀರು ಬರುತ್ತಿದ್ದಂತೆ ರಾತ್ರೋರಾತ್ರಿ ಮನೆಯಲ್ಲಿನ ಎಲ್ಲಾ ಸಾಮಾನು ಬಿಟ್ಟು ಶಾಲೆಯಲ್ಲಿ ಬಂದು ಉಳಿದುಕೊಂಡಿದ್ದೇವೆ. ಹಿಟ್ಟು, ಅಕ್ಕಿ, ಕಾಳು ಸೇರಿ ಮನೆ ಸಾಮಾನು ಏನಾಗಿದೆಯೋ ಗೊತ್ತಿಲ್ಲ. ನಮಗೆ ಆದ ನಷ್ಟವನ್ನು ಸರ್ಕಾರ ಭರಿಸುವಂತೆ' ಕೇಳಿಕೊಂಡರು.
ಮೃತ ತಂದೆಯ ಧಾರ್ಮಿಕ ಕ್ರಿಯೆಗೂ ಪರದಾಟ: 'ಗೋಕಾಕ್ ಪಟ್ಟಣದ ಉಪ್ಪಾರ ಗಲ್ಲಿ ನಿವಾಸಿ ದಶರಥ ಬಂಡಿ(80) ಮನೆಗೆ ನೀರು ನುಗ್ಗಿದ್ದು ಕೇಳಿ ಹೃದಯಾಘಾತದಿಂದ ಮೃತರಾಗಿದ್ದರು. ಈಗ ಮೃತ ದಶರಥ ಕುಟುಂಬ ಕೂಡ ಇದೇ ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿದೆ. ಶುಕ್ರವಾರ ಬೆಳಗ್ಗೆ ಮನೆಗೆ ನೀರು ನುಗ್ಗುತ್ತದೆ ಎಂಬ ಸುದ್ದಿ ಕೇಳಿ ನಮ್ಮ ತಂದೆ ಶುಕ್ರವಾರ ಹೃದಯಾಘಾತದಿಂದ ನಿಧನರಾದರು. ಏಕಾಏಕಿ ಮನೆಯವರು ಅಕ್ಕಪಕ್ಕದವರು ಕೂಡಿಕೊಂಡು ತಂದೆಯ ಅಂತ್ಯಕ್ರಿಯೆ ಮಾಡಿದೆವು. ತಂದೆ ನಿಧನದ ನಂತರದ ವಿಧಿವಿಧಾನ ನೆರವೇರಿಸಬೇಕಿದೆ. ಆದರೆ, ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ. ಸಣ್ಣ ಸಣ್ಣ ಮಕ್ಕಳು, ಸಾಕುನಾಯಿ ಕಟ್ಟಿಕೊಂಡು ಕಾಳಜಿ ಕೇಂದ್ರಕ್ಕೆ ಬಂದು ಆಶ್ರಯ ಪಡೆದಿದ್ದೇವೆ' ಎಂದು ಮೃತ ದಶರಥ ಅವರ ಪುತ್ರಿ ಭಾಗಿರಥಿ ಬಂಡಿ ಕಣ್ಣೀರು ಹಾಕಿದರು.
ಪ್ರವಾಹ ಸಂತ್ರಸ್ತರಾದ ಶೋಭಾ ಮುತ್ಯಾಗೋಳ ಮಾತನಾಡಿದರು (ETV Bharat) ಹಳೆ ದನದ ಪೇಟೆ ನಿವಾಸಿ ಫಕೀರವ್ವ ಮತ್ತಿಕೊಪ್ಪ ಮಾತನಾಡಿ, 'ಪ್ರವಾಹ ಬಂದಾಗ ಮೊದಲು ನೀರು ಬರೋದೆ ನಮ್ಮ ಮನೆಗೆ. ಇಲ್ಲಿಯವರೆಗೆ ನಾಲ್ಕು ಬಾರಿ ಪ್ರವಾಹದಿಂದ ಸಂಕಷ್ಟ ಅನುಭವಿಸಿದ್ದೇವೆ. ನಮಗೆ ಸಾಕು ಸಾಕಾಗಿದೆ. ಮನೆಗೆ ನೀರು ಬಂತೆಂದರೆ ದನ, ಕರು, ಮಕ್ಕಳು, ಮರಿ ಕಟ್ಟಿಕೊಂಡು ಶಾಲೆಗೆ ಬರುತ್ತೇವೆ. ನಮ್ಮ ಮನೆಯಲ್ಲಿ 11 ಜನರಿದ್ದೇವೆ. ನಮಗೆ ಯಾರೂ ಸಹಾಯ ಮಾಡೋದಿಲ್ಲ. ಹೊಟ್ಟಿಗೆ ಊಟ, ಹೊದ್ದುಕೊಳ್ಳಲು ಚಾದರ್, ಹಾಸಿಕೊಳ್ಳಲು ಜಮಖಾನ್ ಕೊಡುತ್ತಾರೆ ಅಷ್ಟೇ. ಬೇರೆ ಕಡೆ ನಮಗೆ ಶಾಶ್ವತವಾಗಿ ಮನೆ ಕಟ್ಟಿಕೊಡಿ' ಎಂದು ಒತ್ತಾಯಿಸಿದರು.
ಹಳೆದ ದನದ ಪೇಟೆಯ ಕೊಳಚೆ ಪ್ರದೇಶದ ನಿವಾಸಿ, ಶೋಭಾ ಮುತ್ಯಾಗೋಳ ಮಾತನಾಡಿ, '2019ರ ಪ್ರವಾಹದಲ್ಲೂ ನಮಗೆ ಯಾವುದೇ ರೀತಿ ಪರಿಹಾರ ಸಿಕ್ಕಿಲ್ಲ. 10 ಸಾವಿರ ರೂ. ಅಷ್ಟೇ ಕೊಟ್ಟಿದ್ದರು. ಈಗ ಮತ್ತೆ ನೀರು ನುಗ್ಗಿದ್ದರಿಂದ ಕಣ್ಣೀರು ಹಾಕುತ್ತಾ ದನ, ಕರ, ನಾಯಿ, ಬೆಕ್ಕು, ಮಕ್ಕಳನ್ನು ಕರೆದುಕೊಂಡು ಇಲ್ಲಿಗೆ ಬಂದಿದ್ದೇವೆ. ಶಾಸಕರು ಬಂದು ಹೋಗಿದ್ದಾರೆ. ಆದರೆ, ಯಾವುದೇ ಪರಿಹಾರ ಕೊಟ್ಟಿಲ್ಲ. ನಮಗೆ ಶಾಶ್ವತ ಪರಿಹಾರ ಕಲ್ಪಿಸಬೇಕು' ಎಂದು ಒತ್ತಾಯಿಸಿದರು.
ವೃದ್ಧೆ ಪಾರ್ವತಿ ಸೌತಿಕಾಯಿ ಮಾತನಾಡಿ, 'ಬಾಜು ಮನೆಯವರು ನೀರು ಬಂದಿದೆ ಎಂದು ಹೇಳುತ್ತಿದ್ದಂತೆ, ಬೆಳ್ಳಂ ಬೆಳಿಗ್ಗೆ ಮನೆ ಬಿಟ್ಟು ಓಡಿ ಬಂದಿದ್ದೇವೆ. 20 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ. ಒಬ್ಬ ಮಗನಿದ್ದು, ವಿಪರೀತ ಸಾರಾಯಿ ಕುಡಿಯುತ್ತಾನೆ. ಈಗ ನನ್ನ ಒಬ್ಬಂಟಿಯಾಗಿ ಬಿಟ್ಟು ಎಲ್ಲೋ ಹೋಗಿದ್ದಾನೆ. ದಯವಿಟ್ಟು ಸರ್ಕಾರ ನನಗೆ ಒಂದು ಮನೆ ಕಟ್ಟಿಸಿಕೊಡಲಿ' ಎಂದು ಮನವಿ ಮಾಡಿಕೊಂಡರು.
ಇದನ್ನೂ ಓದಿ :ಘಟಪ್ರಭಾ ಆರ್ಭಟಕ್ಕೆ ಬೆಚ್ಚಿ ಬಿದ್ದ ಗೋಕಾಕ್: ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಸಂತ್ರಸ್ತರು - rain effect in belagavi