ಕರ್ನಾಟಕ

karnataka

ETV Bharat / state

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಗೊ ರು ಚನ್ನಬಸಪ್ಪ ಆಯ್ಕೆ - KANNADA SAHITYA SAMMELANA

ಡಿಸೆಂಬರ್‌ 20ರಿಂದ ಮೂರು ದಿನ ಕಾಲ ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಆಯ್ಕೆಯಾಗಿದ್ದಾರೆ.

GO RU CHANNABASAPPA
ಗೊ ರು ಚನ್ನಬಸಪ್ಪ (ETV Bharat)

By ETV Bharat Karnataka Team

Published : Nov 20, 2024, 5:49 PM IST

Updated : Nov 20, 2024, 7:13 PM IST

ಮಂಡ್ಯ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಆಯ್ಕೆಯಾಗಿದ್ದಾರೆ.

ರಾಜ್ಯಾಧ್ಯಕ್ಷ ಡಾ. ಮಹೇಶ್‌ ಜೋಶಿ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಇಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೊ.ರು. ಚನ್ನಬಸಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಜನಪದ ತಜ್ಞರು, ವಿದ್ವಾಂಸರು ಹಾಗೂ ಹಿರಿಯ ಸಾಹಿತಿಗಳಾದ ಗೊ.ರು. ಚನ್ನಬಸಪ್ಪ ಅವರು ಈ ಹಿಂದೆ 1992 ರಿಂದ 1995ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅವರು ಅಧ್ಯಕ್ಷರಾಗಿದ್ದಾಗಲೇ 1994ರಲ್ಲಿ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದಿತ್ತು.

ಗೊ ರು ಚನ್ನಬಸಪ್ಪ (ETV Bharat)

ಮಹಾದೇವಿ, ಸದಾಶಿವ ಶಿವಾಚಾರ್ಯ, ಕರ್ನಾಟಕ ಪ್ರಗತಿಪಥ, ಚೆಲುವಾಂಬಿಕೆ, ಕುನಾಲ, ಸಾಕ್ಷಿ ಕಲ್ಲು, ಬೆಳ್ಳಕ್ಕಿ ಹಿಂಡು ಬೆದರ್ಯಾವೊ, ಬಾಗೂರು ನಾಗಮ್ಮ, ಗ್ರಾಮ ಗೀತೆಗಳು, ವಿಭೂತಿ, ಕರ್ನಾಟಕ ಜನಪದ ಕಲೆಗಳು, ಬಾಗೂರು ನಾಗಮ್ಮ, ಗ್ರಾಮಗೀತೆಗಳು, ಕರ್ನಾಟಕ ಜನಪದ ಕಲೆಗಳು, ಹೊನ್ನ ಬಿತ್ತೇವು ನೆಲಕೆಲ್ಲ.. ಇವು ಗೊ.ರು. ಚನ್ನಬಸಪ್ಪ ಅವರ ಪ್ರಮುಖ ಕೃತಿಗಳಾಗಿವೆ. ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ಗೊ.ರು.ಚ ಮಹತ್ವದ ಪಾತ್ರ ವಹಿಸಿದ್ದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸುದೀರ್ಘ ಕಾಲ ಕಾರ್ಯನಿರ್ವಹಿಸಿರಿವ ಗೊ.ರು.ಚ ಅವರು ‘ಜಾನಪದ ಜಗತ್ತು’, ‘ಪಂಚಾಯತ್ ರಾಜ್ಯ’, ‘ಕನ್ನಡ ಸಾಹಿತ್ಯ ಪರಿಷತ್ತಿನ ಪತ್ರಿಕೆ’ ಮೊದಲಾದ ಪತ್ರಿಕೆಗಳಿಗೆ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.

ಗೊ.ರು. ಚನ್ನಬಸಪ್ಪ ಅವರು 18 ಮೇ 1930ರಲ್ಲಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗೊಂಡೇದಹಳ್ಳಿಯಲ್ಲಿ ರುದ್ರಪ್ಪಗೌಡ ಮತ್ತು ಅಕ್ಕಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಇವರಿಗೆ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.

ಗೊ ರು ಚನ್ನಬಸಪ್ಪ (ETV Bharat)

87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಡಿಸೆಂಬರ್ 20, 21 ಮತ್ತು 22ರಂದು ಮಂಡ್ಯ ನಗರದ ಹೊರವಲಯದಲ್ಲಿ ನಡೆಯಲಿದ್ದು ಇದಕ್ಕಾಗಿ ಸಿದ್ಧತೆ ಸಮರೂಪಾದಿಯಲ್ಲಿ ನಡೆದಿದೆ.

ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್‌ ಜೋಶಿ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಕೃಷಿ ಸಚಿವ ಎನ್​ ಚಲುವರಾಯಸ್ವಾಮಿ, ಶಾಸಕರಾದ ರವಿಕುಮಾರ್, ರಮೇಶಗೌಡ ಬಂಡಿಸಿದ್ದೇಗೌಡ ಹಾಗೂ ಸಾಹಿತ್ಯ ಸಮ್ಮೇಳನದ ಸಂಚಾಲಕ ಮೀರಾ ಶಿವಲಿಂಗಯ್ಯ ಹಾಜರಿದ್ದರು.

ಇದನ್ನೂ ಓದಿ:ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 100 ಕೋಟಿ ರೂ. ಮೀಸಲು: 30 ಕೋಟಿ ರೂ. ಬಿಡುಗಡೆಗೆ ಪ್ರಸ್ತಾವನೆ - ಶಿವರಾಜ್ ತಂಗಡಗಿ - Minister Shivaraj Thangadagi

Last Updated : Nov 20, 2024, 7:13 PM IST

ABOUT THE AUTHOR

...view details