ಮೈಸೂರು ಮೃಗಾಲಯದಿಂದ ಬೆಂಗಳೂರಿಗೆ ತಲುಪಿದ ಶಿವಾನಿ ಮೈಸೂರು:ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದ 'ಶಿವಾನಿ' ಹೆಸರಿನ ಹೆಣ್ಣು ಜಿರಾಫೆ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬಂದಿದೆ. ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆಯ ಮೇರೆಗೆ 1.7 ವರ್ಷ ವಯಸ್ಸಿನ ಈ ಹೆಣ್ಣು ಜಿರಾಫೆಯನ್ನು ಬನ್ನೇರುಘಟ್ಟಕ್ಕೆ ಸ್ಥಳಾಂತರಿಸಲಾಗಿದೆ.
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜಿರಾಫೆ ಒತ್ತಡಮುಕ್ತ ಹಾಗೂ ಸುಲಲಿತ ಸಾಗಾಣಿಕೆಗೆ ಅನುವಾಗುವಂತೆ ಶಿವಾನಿಗೆ ಕಳೆದ ಕೆಲವು ವಾರಗಳಿಂದ ಕ್ರೇಟ್‌ನ ಒಳಹೋಗುವಂತೆ ತರಬೇತಿ ನೀಡಲಾಗಿತ್ತು. 13.5 ಅಡಿ ಎತ್ತರವಿರುವ ಶಿವಾನಿ 2022ರ ಜುಲೈ 4ರಲ್ಲಿ ಭರತ ಮತ್ತು ಬಬ್ಲಿ ಜಿರಾಫೆಗಳಿಗೆ ಜನಿಸಿದ್ದಳು. ನಿನ್ನೆ ಬೆಳಗ್ಗೆ 7.30ರ ವೇಳೆಗೆ ಮೈಸೂರು ಮೃಗಾಲಯದಿಂದ ಪ್ರಯಾಣ ಬೆಳಸಿದ್ದು, ಬನ್ನೇರುಘಟ್ಟ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್, ಸಹಾಯಕ ನಿರ್ದೇಶಕ ಡಾ.ಜೆ.ಎಲ್.ಶ್ರೀನಿವಾಸ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ವೆಟರಿನರಿ ಅಡ್ವೈಸರ್ ಡಾ.ಕೆ.ವಿ.ಮದನ್, ವಲಯ ಅರಣ್ಯಾಧಿಕಾರಿಗಳಾದ ವಿ.ಮುನಿರಾಜು ಮತ್ತು ದಿನೇಶ್, ಪಶು ವೈದ್ಯಾಧಿಕಾರಿ ಡಾ.ಎಂ.ಎಸ್ ರೋಷನ್ ಕೃಷ್ಣ, ಪ್ರಾಣಿಪಾಲಕರು ಮತ್ತು ಸಂಬಂಧಿಸಿದ ಸಿಬ್ಬಂದಿಯೊಂದಿಗೆ ಕಳುಹಿಸಿಕೊಡಲಾಗಿತ್ತು. 200 ಕಿ.ಮೀ ದೂರ ಪ್ರಯಾಣಿಸಿದ ಜಿರಾಫೆಯು ನಿನ್ನೆ ಮಧ್ಯಾಹ್ನ 12ಕ್ಕೆ ಬನ್ನೇರುಘಟ್ಟ ಉದ್ಯಾನವನ ತಲುಪಿದ್ದು, ಅಲ್ಲಿರುವ ಹೆಣ್ಣು ಜಿರಾಫೆಯೊಂದಿಗೆ ಸೇರಿಕೊಂಡಿದೆ. 2018ರಿಂದ ಇಲ್ಲಿಯವರೆಗೂ ಭಾರತೀಯ ಹಾಗು ವಿದೇಶಿ ಮೃಗಾಲಯಗಳಿಗೆ ಮೈಸೂರು ಮೃಗಾಲಯದಿಂದ ಆರು ಜಿರಾಫೆಗಳನ್ನು ಕಳುಹಿಸಿಕೊಡಲಾಗಿದೆ.
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಜಿರಾಫೆ ಸ್ಥಳಾಂತರ ವರ್ಷ- ಜಿರಾಫೆ ವಿವರ- ಜಿರಾಫೆ ಪಡೆದ ಮೃಗಾಲಯ:
2018- ಹೆಣ್ಣು ಜಿರಾಫೆ ಗೌರಿ- ಬನ್ನೇರುಘಟ್ಟ ಜೈವಿಕ ಉದ್ಯಾನವನ, ಬೆಂಗಳೂರು
2019- ಗಂಡು ಜಿರಾಫೆ ಜಯಚಾಮರಾಜ- ಅಸ್ಲಾಂ ಮೃಗಾಲಯ, ಗುವಾಹಟಿ
2020- ಗಂಡು ಜಿರಾಫೆ ಯದುವೀರ್- ಬನ್ನೇರುಘಟ್ಟ ಜೈವಿಕ ಉದ್ಯಾನವನ, ಬೆಂಗಳೂರು
2021- ಎರಡು ಗಂಡು ಜಿರಾಫೆಗಳಾದ ಆದ್ಯವೀರ್ ಮತ್ತು ಬಾಲಾಜಿ. ಸಿಂಗಪುರ್ ಜೂಲಾಜಿಕಲ್ ಗಾರ್ಡನ್ಸ್, ಸಿಂಗಪುರ್
2024- ಗಂಡು ಜಿರಾಫೆ ಶಂಕರ- ಶ್ರೀ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್, ಕಮಲಾಪುರ, ವಿಜಯನಗರ.
2024- ಹೆಣ್ಣು ಜಿರಾಫೆ ಶಿವಾನಿ- ಬನ್ನೇರುಘಟ್ಟ ಉದ್ಯಾನವನ, ಬೆಂಗಳೂರು
ಜಿರಾಫೆಯನ್ನು ಮೈಸೂರಿನಿಂದ ಬೆಂಗಳೂರು ಮೃಗಾಲಯದವರೆಗೆ ಸುಗಮವಾಗಿ ಸಾಗಿಸಲು ಹೆದ್ದಾರಿ ಸಂಚಾರ ನಿಯಂತ್ರಣ ಸೇವೆ ಒದಗಿಸಿದ ಪೊಲೀಸ್ ಇಲಾಖೆ ಮತ್ತು ಇತರೆ ಪ್ರಾಧಿಕಾರದವರಿಗೆ ಮೈಸೂರು ಮೃಗಾಲಯ ಕೃತಜ್ಞತೆ ಸಲ್ಲಿಸಿದೆ.
ಜೋಡಿಯಾಗಿದ್ದ ಜಿರಾಫೆಯಲ್ಲಿ ಒಂದು ಗಂಡು ಜಿರಾಫೆ ವರ್ಷದ ಹಿಂದೆ ಮರಕ್ಕೆ ಕೊರಳು ಸುತ್ತಿ ಸಾವನ್ನಪ್ಪಿತ್ತು. ಉಳಿದ ಒಂಟಿ ಜಿರಾಫೆಯೊಂದು ಖಿನ್ನತೆಯಿಂದ ನರಳುತ್ತಿತ್ತು. ಇದಕ್ಕೆ ಮತ್ತೊಂದು ಜಿರಾಫೆಯನ್ನು ಜೊತೆಗೂಡಿಸುವಲ್ಲಿ ಬನ್ನೇರುಘಟ್ಟ ಮೃಗಾಲಯದ ಅಧಿಕಾರಿಗಳು ಇದೀಗ ಯಶಸ್ವಿಯಾಗಿದ್ದಾರೆ. ಈ ಮೂಲಕ ಎರಡು ಜಿರಾಫೆ ಹೊಂದಿದ ರಾಜಧಾನಿಯೊಂದರ ಪಕ್ಕದ ಮೃಗಾಲಯ ಎಂಬ ಖ್ಯಾತಿಗೂ ಒಳಗಾಗಿದೆ.
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜಿರಾಫೆಗಳು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ.ಸೂರ್ಯಸೇನ್ ಮಾತನಾಡಿ, "ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆ ಪ್ರಕಾರ ಪ್ರಾಣಿ ವಿನಿಮಯದಡಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯ, ಭರತ್ ಮತ್ತು ಬಬ್ಲಿ ಜಿರಾಫೆಗೆ ಜನಿಸಿದ್ದ 1 ವರ್ಷ 7 ತಿಂಗಳು ಪ್ರಾಯದ ಶಿವಾನಿ ಎಂಬ ಹೆಣ್ಣು ಜಿರಾಫೆಯನ್ನು ತರಿಸಲಾಗಿದೆ. ಪ್ರಸ್ತುತ ಮೈಸೂರು ಮೃಗಾಲಯದಲ್ಲಿ 9 ಜಿರಾಫೆಗಳಿವೆ. ಒಂದು ಹೆಣ್ಣನ್ನು ಒಂಟಿಯಾಗಿರುವ ನಮ್ಮ ಗೌರಿಗೆ ಸಹಪಾಠಿಯನ್ನಾಗಿ ನೀಡಿದ್ದಾರೆ" ಎಂದು ತಿಳಿಸಿದರು.
ಇದನ್ನೂ ಓದಿ :ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಶಾಸ್ತ್ರೀಯ ಉದ್ಯಾನವನಕ್ಕೆ ಬಂದ್ರು ಹೊಸ ಅತಿಥಿ!