ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ವರಿಷ್ಠರು ತೀರ್ಮಾನಿಸಿದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವೆ ಎಂದು ಗೀತಾ ಶಿವರಾಜಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸಚಿವ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನನಗೆ ಪಕ್ಷ, ಪತಿ ಹಾಗೂ ಸಹೋದರ ಈ ಮೂವರು ಹೈ ಕಮಾಂಡ್ಗಳಿಂದ ಒಪ್ಪಿಗೆ ಸಿಕ್ಕರೆ ಚುನಾವಣೆಗೆ ಸ್ಪರ್ಧೆ ಮಾಡುವೆ ಎಂದು ಹೇಳಿದರು. ಸದ್ಯ ನಾನು ಮೈಸೂರಿನ ಶಕ್ತಿಧಾಮ ನೋಡಿಕೊಂಡು ಹೋಗುತ್ತಿದ್ದೇನೆ. ನನಗೆ ಸೋಷಿಯಲ್ ವರ್ಕ್ ಮಾಡುವುದು ತುಂಬ ಇಷ್ಟ. ಈ ಬಾರಿ ಇಲ್ಲಿ ಸ್ಪರ್ಧೆ ಮಾಡಲು ಉತ್ತಮ ವಾತಾವರಣ ಇದೆ ಎಂದರು.
ನಾನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಕಡೆ ಹೋಗಿ ಪ್ರಚಾರ ನಡೆಸಿದ್ದೆ. ಕಳೆದ ಲೋಕಸಭೆ ಚುನಾವಣೆ ಸೋತ ನಂತರ ಶಿವಮೊಗ್ಗ ಜಿಲ್ಲೆಗೆ ಅನೇಕ ಬಾರಿ ಬಂದು ಹೋಗಿದ್ದೇನೆ. ಅಲ್ಲದೆ ಚುನಾವಣಾ ಪ್ರಚಾರದಲ್ಲೂ ಸಹ ಭಾಗಿಯಾಗಿದ್ದೇನೆ ಎಂದು ಅವರು ತಿಳಿಸಿದರು.
ನಂತರ ಮಧು ಬಂಗಾರಪ್ಪ ಅವರು ಸಚಿವರಾಗಿದ್ದು ನನಗೆ ಬಹಳ ಹೆಮ್ಮೆಯ ವಿಷಯ. ನಮ್ಮ ತಂದೆ ಮಧು ಸಚಿವರಾಗಬೇಕೆಂದು ಬಹಳ ಆಸೆ ಇಟ್ಟುಕೊಂಡಿದ್ದರು. ಮೊನ್ನೆ ಶಕ್ತಿಧಾಮಕ್ಕೆ ಬಂದು ಮಕ್ಕಳ ಜೊತೆ ಬೆರೆತು ಚೆನ್ನಾಗಿ ಮಾತನಾಡಿದರು. ಮಕ್ಕಳು ಕೇಳಿದ ಪ್ರಶ್ನೆಗೆ ಚೆನ್ನಾಗಿಯೇ ಉತ್ತರ ಕೊಟ್ಟರು. ಮಧು ಮಂತ್ರಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಸಚಿವರಾದ ಮೇಲೆ ಅಧಿಕಾರಿಗಳ ಜೊತೆ ಸಭೆ ನಡೆಸಿ, ಇಲಾಖೆಯನ್ನೂ ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದು ಗೀತಾ ಶಿವರಾಜಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ನಟ ಶಿವರಾಜಕುಮಾರ್, ನನಗೆ ಗೀತಾ ಎಂಪಿ, ಎಂಎಲ್ಒ ಆಗಬೇಕೆಂಬ ಆಸೆ ಇದೆ. ಯಾಕಂದ್ರೆ ಇದರಿಂದ ಅನೇಕರಿಗೆ ಸ್ಫೂರ್ತಿ ಆಗಬೇಕು. ನಮಗೆ ಸೆಲೆಬ್ರಿಟಿ ಅಂತ ಮತ ಕೊಡುವುದು ಬೇಡ. ಗೀತಾ ಹೊರಗಡೆ ಬಂದಾಗ ಸೆಲಬ್ರೆಟಿ ಅಂತ ಬರಲ್ಲ. ಕಳೆದ ಚುನಾವಣೆಯಲ್ಲಿ ನಾವು ಕೇಳಿದ್ದು ಒಂದು ಅವಕಾಶ ಕೊಡಿ ಎಂದು. ಈ ಬಾರಿ ಏನಾಗುತ್ತದೆ ಎಂದು ಕಾದು ನೋಡಬೇಕು ಎಂದರು.
ಬಳಿಕ ತಾವು ರಾಜಕೀಯಕ್ಕೆ ಬರುವ ವಿಚಾರವಿದೆಯೇ ಎಂಬ ಪ್ರಶ್ನೆಗೆ, ನಾನಂತೂ 100 ರಷ್ಟು ರಾಜಕೀಯಕ್ಕೆ ಬರಲ್ಲ. ಆದರೆ ಚುನಾವಣಾ ಪ್ರಚಾರಕ್ಕೆ ಬರುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ:ಲೋಕಸಭೆ ಚುನಾವಣೆ: 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ; ವಾರಾಣಸಿಯಲ್ಲೇ ಮೋದಿ ಸ್ಪರ್ಧೆ