ಹುಬ್ಬಳ್ಳಿ: ಇಲ್ಲಿನ ಉಣಕಲ್‌ನಲ್ಲಿರುವ ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ಅನ್ನು, ಮೈಸೂರಿನ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಆಡಳಿತದ ಕಾರ್ಯವ್ಯಾಪ್ತಿಗೆ ಹಸ್ತಾಂತರಿಸುವಂತೆ ಸರ್ಕಾರ ಇತ್ತೀಚಿಗೆ ಆದೇಶ ಹೊರಡಿಸಿತ್ತು. ಉನ್ನತ ಶಿಕ್ಷಣ ಇಲಾಖೆಯು ಫೆ.28ರಂದು ಈ ಆದೇಶ ಹೊರಡಿಸಿದ್ದು, ಉತ್ತರ ಕರ್ನಾಟಕದಲ್ಲಿರುವ ಟ್ರಸ್ಟ್ ನಿರ್ವಹಣೆಯನ್ನು ದಕ್ಷಿಣ ಕರ್ನಾಟಕದಲ್ಲಿರುವ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ.
ಟ್ರಸ್ಟ್ ನಡೆಸುತ್ತಿರುವ ಹಿಂದೂಸ್ತಾನಿ ಸಂಗೀತ ಕೇಂದ್ರದಲ್ಲಿ ಪ್ರಸ್ತುತ 21 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಆದರೆ, ಸಂಸ್ಥೆಯ ನಿರ್ವಹಣೆಗೆ ವಾರ್ಷಿಕ ₹ 2.13 ಕೋಟಿ ವೆಚ್ಚವಾಗುತ್ತಿತ್ತು. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಗುತ್ತಿದೆ ಎಂಬ ಕಾರಣ ನೀಡಲಾಗಿದೆ. ಹಸ್ತಾಂತರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ.