ಬೆಳಗಾವಿ: ಬೆಳಗಾವಿ ಕಾಂಗ್ರೆಸ್ ಅಧಿವೇಶನ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಮೊದಲ ಮತ್ತು ಕೊನೆಯ ಅಧಿವೇಶನ. ದೇಶದ ಸ್ವಾತಂತ್ರ್ಯ ಚಳುವಳಿಗೆ ಹೊಸ ದಿಕ್ಸೂಚಿ ನೀಡಿದ ಈ ಭಾಷಣ ಇತಿಹಾಸದಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದೆ.
ಸ್ವಾತಂತ್ರ್ಯ ಹೋರಾಟದ ಕಿಚ್ಚು ಗಾಂಧಿ ಅವರನ್ನು ಬೆಳಗಾವಿಗೆ ಕರೆ ತಂದಿತ್ತು. 1924 ಡಿ.26, 27ರಂದು ಎರಡು ದಿನ ನಡೆದ 39ನೇ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಗಾಂಧೀಜಿ, ಹಿಂದಿ ಭಾಷೆಯಲ್ಲಿ ತಮ್ಮ ಭಾಷಣ ಆರಂಭಿಸಿದ್ದರು. ಇಲ್ಲಿನ ಕನ್ನಡ ಭಾಷೆ ನನಗೆ ಬರುವುದಿಲ್ಲ. ಹಾಗಾಗಿ, ನನಗೆ ಬರುವ ಹರಕಲು-ಮುರಕಲು ಹಿಂದಿಯಲ್ಲಿ ಮಾತಾಡುತ್ತೇನೆ ಎಂದಿದ್ದರು.
ಗೆಳೆಯರೇ, ನಾನು 10 ನಿಮಿಷಗಳಿಗಿಂತ ಹೆಚ್ಚು ಮಾತನಾಡುವುದಿಲ್ಲ. ಈಗಾಗಲೇ ನನ್ನ ಭಾಷಣದ ಕರಪತ್ರಗಳು ನಿಮ್ಮ ಕೈ ಸೇರಿವೆ. ಸಂಪೂರ್ಣ ಸ್ವಾತಂತ್ರ್ಯ ಪಡೆಯೋವರೆಗೂ ಹೋರಾಟ ನಿಲ್ಲದು. ವಿದೇಶಿ ಬಟ್ಟೆಗಳ ನಿರಾಕರಣೆ, ಗೋಹತ್ಯೆ ನಿಷೇಧ, ಮದ್ಯಪಾನ, ಮಾದಕ ವಸ್ತುಗಳ ನಿಷೇಧ, ರಾಷ್ಟ್ರೀಯ ಶಾಲೆಗಳ ಸ್ಥಾಪನೆಯ ಅವಶ್ಯಕತೆ, ಅಸ್ಪೃಶ್ಯತೆ ನಿವಾರಣೆ, ಸಾಗರೋತ್ತರ ಭಾರತೀಯ ನಿವಾಸಿಗಳ ರಕ್ಷಣೆ ಸೇರಿ ಮತ್ತಿತರ ವಿಷಯಗಳ ಕುರಿತು ಅವರು ಮಾತನಾಡಿದ್ದರು.
ಈಟಿವಿ ಭಾರತದ ಜೊತೆಗೆ ಮಾತನಾಡಿದ ಹಿರಿಯ ಪತ್ರಕರ್ತ ಸುಭಾಷ ಕುಲಕರ್ಣಿ, "ಗೋಹತ್ಯೆ ನಾನು ಒಪ್ಪುವುದಿಲ್ಲ. ನಾನು ಸನಾತನಿ, ಹಿಂದೂ. ಹಾಗಾಗಿ, ನಾನು ಗೋಹತ್ಯೆ ಒಪ್ಪಲ್ಲ. ಗೋಮಾಂಸ ಸೇರಿ ಯಾವುದೇ ಮಾಂಸ ಸೇವಿಸುವುದಿಲ್ಲ ಎಂದು ಗಾಂಧೀಜಿ ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿದ್ದರು. ಇದೇ ವೇಳೆ ವೇದಿಕೆ ಮೇಲಿದ್ದ ಮಹಮ್ಮದ್ ಅಲಿ ಜಿನ್ನಾ ಅವರ 9 ವರ್ಷದ ಮಗಳು ಗುಲ್ನಾರ್‌ಳನ್ನು ಉದ್ದೇಶಿಸಿ ಮಾತನಾಡಿದ ಬಾಪು, ನಾನು ಗೋಹತ್ಯೆ ಯಾಕೆ ವಿರೋಧಿಸುತ್ತಿದ್ದೇನೆ ಎಂಬುದು ಈ ಬಾಲಕಿ ದೊಡ್ಡವಳಾದ ಮೇಲೆ ಆಕೆಗೆ ಅರ್ಥವಾಗುತ್ತದೆ ಎಂದಿದ್ದರು. ಮುಂದುವರಿದು, ಮುಸ್ಲಿಮರು ಗೋಮಾಂಸ ಸೇವಿಸುವುದಕ್ಕೆ ನನ್ನ ವಿರೋಧ ಇಲ್ಲ. ಆದರೆ, ಗೋಮಾಂಸ ತ್ಯಜಿಸುವುದು ಒಳಿತು ಎಂದಿದ್ದರು" ಎಂಬ ವಿಚಾರ ತಿಳಿಸಿದರು.