ಗೃಹಸಚಿವ ಜಿ.ಪರಮೇಶ್ವರ್ (ETV Bharat) ಬೆಂಗಳೂರು:ನಾವು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಲು ಬಿಡುವುದಿಲ್ಲ. ಯಾರೇ ತಪ್ಪು ಮಾಡಿದರೂ ಕ್ರಮ ಆಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಇಂದು ಮಾತನಾಡಿದ ಅವರು, "ಚೆನ್ನಗಿರಿ ಪ್ರಕರಣ ಸಂಬಂಧ ಈಗಾಗಲೇ ಕರ್ತವ್ಯ ನಿರ್ಲಕ್ಷ್ಯದಡಿ ಇನ್ಸ್ಪೆಕ್ಟರ್ ಹಾಗೂ ಡಿವೈಎಸ್ಪಿಯನ್ನು ಸಸ್ಪೆಂಡ್ ಮಾಡಲಾಗಿದೆ. ತನಿಖಾ ವರದಿ ಬರಲಿ, ನೋಡೋಣ. ಮೃತ ವ್ಯಕ್ತಿ ಮಟ್ಕಾ ಆಡಿಸುವುದರಲ್ಲಿ ಭಾಗಿಯಾಗಿದ್ದ. ಹೀಗಾಗಿ ಸ್ಟೇಷನ್ಗೆ ಕರೆದುಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಸಮಸ್ಯೆಯಾಗಿ ತೀರಿಕೊಂಡಿದ್ದಾರೆ. ಹಾರ್ಟ್ ಅಟ್ಯಾಕ್ ಆಗಿದೆಯಾ, ಲೋ ಬಿಪಿ ಆಯ್ತಾ ಎಂಬ ಮಾಹಿತಿ ಪೋಸ್ಟ್ ಮಾರ್ಟಂ ವರದಿ ಬಂದ ಬಳಿಕ ತಿಳಿಯಲಿದೆ" ಎಂದರು.
ಪೊಲೀಸರಿಗೆ ಕಮಿಷನ್ ಕೊಡಲಿಲ್ಲ ಎಂಬ ಕಾರಣಕ್ಕೆ ಈ ಘಟನೆ ಆಗಿದೆ ಎಂಬ ಸ್ಥಳೀಯರ ಆರೋಪಕ್ಕೆ, "ತನಿಖೆ ಮಾಡಿದಾಗ ಗೊತ್ತಾಗಬೇಕು. ಆರೋಪ ನಿಜವೇ ಆಗಿದ್ದರೆ ಅಂಥವರನ್ನು ಕರ್ತವ್ಯದಿಂದ ವಜಾ ಮಾಡುತ್ತೇವೆ" ಎಂಬ ಭರವಸೆ ನೀಡಿದರು.
ಯಾರೇ ತಪ್ಪು ಮಾಡಿದರೂ ಕ್ರಮ: ಪೊಲೀಸ್ ಠಾಣೆ ಮೇಲಿನ ದಾಳಿ ವಿಚಾರಕ್ಕೆ, "ಈಗ ಶಾಸಕರೇ ಪೊಲೀಸ್ ಠಾಣೆಗೆ ಹೋಗಿ ಗಲಾಟೆ ಮಾಡುತ್ತಾರೆ. ಪೊಲೀಸರ ಮೇಲೆ ದಾಂಧಲೆ ಮಾಡುತ್ತಾರೆ. ಈ ರೀತಿಯಾದರೆ ಸಮಾಜದಲ್ಲಿ ಶಾಂತಿ ಹೇಗೆ ನೆಲೆಸುತ್ತೆ?. ಅದಕ್ಕೆ ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು. ತೆಗೆದುಕೊಂಡವರ ಮೇಲೂ ಕ್ರಮ ತೆಗೆದುಕೊಳ್ಳುತ್ತೇವೆ. ಅವರು ಶಾಸಕರೇ ಆಗಿರಲಿ ಸಂಸದರೇ ಆಗಿರಲಿ, ಯಾರನ್ನೂ ಕೂಡ ಬಿಡುವುದಿಲ್ಲ. ಯಾರೇ ತಪ್ಪು ಮಾಡಿದರು ಕ್ರಮ ಆಗುತ್ತದೆ" ಎಂದರು.
"ಕರ್ನಾಟಕ ಬಿಹಾರ ಆಗುತ್ತಿದೆ" ಎಂಬ ಬಿ.ವೈ.ವಿಜಯೇಂದ್ರ ಹೇಳಿಕೆಗೆ, "ಅವರ ಪಕ್ಷ ಆಡಳಿತದಲ್ಲಿರುವ ರಾಜ್ಯಗಳು ಹೇಗಿದ್ದಾವೆ?. ರಾಜ್ಕೋಟ್ನಲ್ಲಿ ಗೇಮ್ ಆಡುತ್ತಿದ್ದ 27 ಜನರ ಸಾವಿಗೆ ಯಾರು ಹೊಣೆ?. ಹಾಗಾದರೆ ಅಲ್ಲಿನ ಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಬೇಕು" ಎಂದು ಟಾಂಗ್ ನೀಡಿದರು.
ಇದನ್ನೂ ಓದಿ:ನನ್ನ ಗಂಡನನ್ನು ಪೊಲೀಸರೇ ಹೊಡೆದು ಕೊಂದಿದ್ದಾರೆ: ಮೃತ ಆದಿಲ್ ಪತ್ನಿ ಗಂಭೀರ ಆರೋಪ - adil wife reaction