ಬೆಂಗಳೂರು: ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಎನ್ಐಎ ಹಾಗೂ ಕರ್ನಾಟಕ ಪೊಲೀಸರನ್ನು ಅಭಿನಂದಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸದಾಶಿನಗರದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೆ.29 ರಂದು ನಡೆದ ಸ್ಫೋಟದ ವೇಳೆ ಸಿಕ್ಕಿದ ಸಿಸಿ ಕ್ಯಾಮೆರಾ ಫುಟೇಜ್ ಸೇರಿದಂತೆ ಇತರ ಅಂಶಗಳನ್ನು ಪರಿಶೀಲಿಸಿ ತನಿಖೆ ಮಾಡುವಾಗ, ಎನ್ಐಎಗೆ ನಮ್ಮ ಪೊಲೀಸರು ಅನೇಕ ಮಾಹಿತಿ ಕೊಟ್ಟಿದ್ದರು ಎಂದು ಹೇಳಿದರು.
ಈ ಹಿಂದೆ ಶಿವಮೊಗ್ಗ ಸ್ಫೋಟದಲ್ಲಿರುವ ವ್ಯಕ್ತಿಗಳು ಎಂಬ ಅನುಮಾನ ಬಂದಾಗ ಆ ವ್ಯಕ್ತಿ ತೀರ್ಥಹಳ್ಳಿ ಮೂಲದವನೆಂದು ಗೊತ್ತಾಗಿದೆ. ಮುಸ್ಸಾವಿರ್ ಹಾಗೂ ಮತಿನ್ ಇಬ್ಬರು ಪಶ್ಚಿಮ ಬಂಗಾಳದ ದಿಗಾ ಎಂಬ ಊರಿನ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರನ್ನು ಬೆಂಗಳೂರಿಗೆ ಕರೆತಂದು ಪೊಲೀಸ್ ವಶಕ್ಕೆ ಕೊಟ್ಟು ತನಿಖೆ ಮಾಡುತ್ತಾರೆ. ಇಬ್ಬರ ಬಂಧನವನ್ನು ಎನ್ಐಎ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆರೋಪಿಗಳು ಕಳೆದ ನಾಲ್ಕೂವರೆ ವರ್ಷದಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಯಾವ ಸಂಘಟನೆ ಜತೆ ಅವರು ನಂಟು ಹೊಂದಿದ್ದಾರೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಅವರ ಹೇಳಿಕೆಗಳಿಂದಲೇ ಎಲ್ಲವೂ ಗೊತ್ತಾಗಬೇಕು. ಭಯೋತ್ಪಾದನೆ ಸಂಘಟನೆ ಜತೆ ಲಿಂಕ್ ಇದ್ದರೆ ಎನ್ಐಎ ತನಿಖೆ ಮುಂದುವರಿಸುತ್ತದೆ ಎಂದು ತಿಳಿಸಿದರು.