ವಿಜಯಪುರ:ಬೆಂಗಳೂರಿನನೆಲಮಂಗಲದ ಸಮೀಪ ನಡೆದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ 6 ಜನರ ಅಂತ್ಯಕ್ರಿಯೆ ಇಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮದಲ್ಲಿ ನಡೆಯಿತು. ಕುಟುಂಬಸ್ಥರು ಕಣ್ಣೀರಿನ ಮೂಲಕ ಮೃತರಿಗೆ ಅಂತಿಮ ನಮನ ಸಲ್ಲಿಸಿದರು.
ಬೆಳಗ್ಗೆ ಮೂರು ಆಂಬ್ಯುಲೆನ್ಸ್ಗಳಲ್ಲಿ ಮೃತದೇಹಗಳನ್ನು ಗ್ರಾಮಕ್ಕೆ ತರಲಾಯಿತು. ಈ ವೇಳೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ನೆಲಮಂಗಲ ಭೀಕರ ಅಪಘಾತ: ಮಹಾರಾಷ್ಟ್ರದ ಸಾಂಗ್ಲಿಯ ಸ್ವಗ್ರಾಮದಲ್ಲಿ 6 ಮಂದಿಯ ಅಂತ್ಯಕ್ರಿಯೆ (ETV Bharat) ಬಳಿಕ ಮೊರಬಗಿ ಗ್ರಾಮದ ಹೊರಭಾಗದಲ್ಲಿರುವ ಮೃತ ಚಂದ್ರಮ್ ಅವರ ಹೊಲದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಮೃತನ ಸಹೋದರ ಮಲ್ಲಿಕಾರ್ಜುನ ಅಗ್ನಿ ಸ್ಪರ್ಶ ಮಾಡಿದರು. ಗಡಿಭಾಗದ ಹತ್ತಾರು ಹಳ್ಳಿಗಳ ಜನ, ಮೃತ ಚಂದ್ರಮ್ ಅವರ ಕಂಪನಿಯ ಉದ್ಯೋಗಿಗಳು, ಸ್ನೇಹಿತರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು.
ಚಂದ್ರಮ್ ಅವರು ಗ್ರಾಮದಲ್ಲಿ ಒಳ್ಳೆಯ ಹೆಸರು ಗಳಿಸಿದ್ದರು. ಗಡಿಭಾಗದ ಕುಗ್ರಾಮದ ಕನ್ನಡ ಶಾಲೆಯಲ್ಲಿ ಕಲಿತು ದೊಡ್ಡ ಕಂಪನಿ ಆರಂಭಿಸಿದ್ದಕ್ಕೆ ಗ್ರಾಮಸ್ಥರಿಗೆ ಹೆಮ್ಮೆ ಇತ್ತು. ಗ್ರಾಮದಲ್ಲಿ ಯಾವುದೇ ಯುವಕ ಉದ್ಯೋಗ ಇಲ್ಲದೇ ಇದ್ದರೆ ಆತನನ್ನು ತಮ್ಮ ಕಂಪನಿಗೆ ಕರೆದುಕೊಂಡು ಹೋಗಿ ಉದ್ಯೋಗ ನೀಡುತ್ತಿದ್ದರು. ಗಡಿನಾಡ ಕನ್ನಡ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿದ್ದರು. ದೇಶದ ವಿವಿಧ ಭಾಗಗಳಲ್ಲಿ ಕಂಪನಿ ಆರಂಭಿಸಿ ಗಡಿ ಭಾಗದ ಯುವಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದರು ಎಂದು ಗ್ರಾಮಸ್ಥರು ನೆನೆದರು.
ಎರಡು ತಿಂಗಳ ಹಿಂದೆಯಷ್ಟೇ ಹೊಸ ಕಾರು ಖರೀದಿಸಿದ್ದ ಕುಟುಂಬ ಸಂಭ್ರಮದಲ್ಲಿತ್ತು. ಆದರೆ ಇದೀಗ ಮನೆ ಮಗನ ಇಡೀ ಕುಟುಂಬವೇ ಸಾವನ್ನಪ್ಪಿದೆ.
"ಬಡತನದಲ್ಲಿ ಬೆಳೆದು ದೊಡ್ಡ ಸಾಧನೆ ಮಾಡಿದವರು ಚಂದ್ರಮ್ ಇಗಪ್ಪಗೋಳ. ನಮ್ಮೂರಿನ ಹುಡುಗರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಕೆಲಸ ಕೊಟ್ಟಿದ್ದರು. ಈ ರೀತಿ ನೂರಾರು ಯುವಕರಿಗೆ ಕೆಲಸ ಕೊಟ್ಟಿದ್ದಾರೆ. ಚಂದ್ರಮ್ ಕುಟುಂಬ ಇಡೀ ಗ್ರಾಮಕ್ಕೆ ಒಳ್ಳೆಯ ಕುಟುಂಬವಾಗಿತ್ತು. ಸುತ್ತಮುತ್ತಲಿನ 10 ಹಳ್ಳಿಗೆ ಚಂದ್ರಮ್ ಬೇಕಾಗಿದ್ದರು" ಎಂದು ಮೃತ ಕುಟುಂಬ ಸದಸ್ಯರನ್ನು ನೆನೆದು ಗ್ರಾಮಸ್ಥರು ಹಾಗೂ ಚಂದ್ರಮ್ ಸ್ನೇಹಿತರು ಕಂಬನಿ ಮಿಡಿದರು.
ನಿನ್ನೆ ಏನಾಯ್ತು? ಕ್ರಿಸ್ಮಸ್ ಹಬ್ಬದ ರಜೆ ಹಿನ್ನೆಲೆಯಲ್ಲಿ ಚಂದ್ರಮ್ ಇಗಪ್ಪಗೋಳ ಅವರು ಪತ್ನಿ, ಇಬ್ಬರು ಮಕ್ಕಳು ಸೇರಿ ಕುಟುಂಬದ ಆರು ಮಂದಿ ಸ್ವಗ್ರಾಮಕ್ಕೆ ತಮ್ಮ ವೋಲ್ವೋ ಕಾರಿನಲ್ಲಿ ತೆರಳುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದ ಕಂಟೇನರ್ ಕಾರಿನ ಮೇಲೆ ಬಿದ್ದಿದೆ. ಕಾರಿನಲ್ಲಿದ್ದ ಚಂದ್ರಮ್, ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಸಹೋದರನ ಪತ್ನಿ, ಅವರ ಮಗ ಸೇರಿ ಆರು ಜನ ಸಾವನ್ನಪ್ಪಿದ್ದರು. ಚಂದ್ರಮ್ ಇಗಪ್ಪಗೋಳ (46), ಪತ್ನಿ ಧೋರಾಬಾಯಿ ಚಂದ್ರಮ್ ಇಗಪ್ಪಗೋಳ (40), ಧೀಕ್ಷಾ ಚಂದ್ರಮ್ ಇಗಪ್ಪಗೋಳ (10), ಗಣೇಶ್ ಇಗಪ್ಪಗೋಳ (16), ಆರ್ಯ ಚಂದ್ರಮ್ ಇಗಪ್ಪಗೋಳ (6) ಮತ್ತು ವಿಜಯಲಕ್ಷ್ಮಿ (36) ಮೃತರು.
ಇದನ್ನೂ ಓದಿ:ಸ್ವಂತ ಉದ್ಯಮ ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗ: ಸ್ವಗ್ರಾಮಕ್ಕೆ ತೆರಳುವಾಗ ಇಡೀ ಕುಟುಂಬ ದುರಂತ ಅಂತ್ಯ